ಕನ್ನಡಪ್ರಭ ವಾರ್ತೆ ಉಳ್ಳಾಲ
ಶಾಕೀರ್ (28), ಅಬ್ದುಲ್ ರಜಾಕ್ (40), ಅಬೂಬಕ್ಕರ್ ಸಿದ್ದಿಕ್ (35), ಸವಾದ್ (18) ಹಾಗೂ ಹಫೀಝ್(24) ಬಂಧಿತ ಆರೋಪಿಗಳು. ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಕೊಣಾಜೆ ಠಾಣಾ ವ್ಯಾಪ್ತಿಯ ಬೊಳಿಯಾರ್ ಬಾರ್ ಮುಂಭಾಗದಲ್ಲಿ ಭಾನುವಾರ ತಡರಾತ್ರಿ ಚೂರಿ ಇರಿತ ನಡೆದಿತ್ತು. ಮೋದಿ ಪದಗ್ರಹಣ ಬಳಿಕದ ವಿಜಯೋತ್ಸವದ ನಂತರ ಮೂವರು ಬಿಜೆಪಿ ಕಾರ್ಯಕರ್ತರು ಬೋಳಿಯಾರ್ ಮಸೀದಿಯ ಮುಂದೆ ಹೋಗುವಾಗ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ಕೆಲ ಬೈಕ್‌ಗಳಲ್ಲಿ 20-25 ಮುಸ್ಲಿಂ ಯುವಕರ ತಂಡ ಅವರನ್ನು ಹಿಂಬಾಲಿಸಿಕೊಂಡು ಬಂದು ಬೋಳಿಯಾರ್ ಬಾರ್‌ಗೆ ಬಂದಿದ್ದರು. ಬಾರ್ ಬಳಿ ವಾಗ್ವಾದ ನಡೆದು ಮೂವರು ಯುವಕರನ್ನು ಥಳಿಸಿದ್ದರು. ಇದರಲ್ಲಿ ಇಬ್ಬರಿಗೆ ಚೂರಿಯಿಂದ ಇರಿದು ಗಾಯಗೊಳಿಸಲಾಗಿತ್ತು. ಹರೀಶ್ (41) ಹಾಗೂ ನಂದಕುಮಾರ್ (24) ಇರಿತಕ್ಕೆ ಒಳಗಾದವರು. ಕೃಷ್ಣ ಕುಮಾರ್ ಎಂಬವರಿಗೆ ಹಲ್ಲೆ ನಡೆಸಲಾಗಿತ್ತು.ಘಟನೆ ಸಂಬಂಧ ಇನ್ನೂ ಹಲವರ ಪತ್ತೆಗಾಗಿ ಬಲೆ ಬೀಸಲಾಗಿದೆ.
ಬಿಜೆಪಿ ವಿಜಯೋತ್ಸವ ಮೆರವಣಿಗೆ ಬಳಿಕ ಇಬ್ಬರಿಗೆ ಚೂರಿ ಇರಿತ ಪ್ರಕರಣದಲ್ಲಿ ಬೋಳಿಯಾರು ಮಸೀದಿ ಎದುರುಗಡೆ ಘೋಷಣೆ ಕೂಗಿದ ಆರೋಪದಲ್ಲಿ ಐವರು ಬಿಜೆಪಿ ಕಾರ್ಯಕರ್ತರ ವಿರುದ್ದವೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾನುವಾರ ರಾತ್ರಿ 8.50 ರ ಸುಮಾರಿಗೆ ಕೆಲ ಯುವಕರು ಮಸೀದಿ ಎದುರು ಪ್ರಚೋದನಕಾರಿ ಘೋಷಣೆ ಕೂಗಿದ್ದಾರೆಂದು ದೂರು ದಾಖಲಿಸಿದ್ದು, ಮಸೀದಿ ಬಳಿ ನಿಂತಿದ್ದವರಿಗೂ ಕೆಟ್ಟ ಶಬ್ದಗಳಲ್ಲಿ ನಿಂದಿಸಿದ್ದಾರೆಂದು ಆರೋಪಿಸಲಾಗಿತ್ತು . ಈ ಸಂಬಂಧ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಗೂ ಮುನ್ನ ಬೋಳಿಯಾರು ಮಸೀದಿ ಮುಂಭಾಗ ನಡೆದ ಗಲಾಟೆ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಮಸೀದಿ ಮುಂದೆ ಸಾಗಿದ ವಿಜಯೋತ್ಸವ ಮೆರವಣಿಗೆಯಲ್ಲಿ ಘೋಷಣೆ ಕೂಗಿದ್ದಾರೆ. ಅಲ್ಲಿಂದ ಮತ್ತೆ ಮಸೀದಿ ಬಳಿ ಬೈಕ್ ನಲ್ಲಿ ಬಂದ ಮೂವರು ಬಿಜೆಪಿ ಕಾರ್ಯಕರ್ತರು ಮಸೀದಿ ಎದುರು ‘ಬೋಲೋ ಭಾರತ್ ಮಾತಾ ಕೀ ಜೈ’ ಎಂದು ಹೇಳಿದ್ದಾರೆ.