ಬಳ್ಳಾರಿ ಜಿಲ್ಲೆಗೆ ಎಂಟ್ರಿ ಕೊಟ್ಟ ಬಿಜಪಿ ಯಾತ್ರೆ

KannadaprabhaNewsNetwork |  
Published : Sep 07, 2026, 02:15 AM IST
ಬಿಜೆಪಿ ಪಾದಯಾತ್ರೆ | Kannada Prabha

ಸಾರಾಂಶ

ವಾಲ್ಮೀಕಿ ಅಕ್ರಮದ ಹಣ ವಾಪಸ್‌ ಸೇರಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ ಪಾದಯಾತ್ರೆ ಭಾನುವಾರ ಬಳ್ಳಾರಿ ಜಿಲ್ಲೆ ಪ್ರವೇಶಿಸಿತು.

ಕನ್ನಡಪ್ರಭ ವಾರ್ತೆ ಗಂಗಾವತಿ/ಬಳ್ಳಾರಿ

ವಾಲ್ಮೀಕಿ ಅಕ್ರಮದ ಹಣ ವಾಪಸ್‌ ಸೇರಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ರಾಜ್ಯ ಬಿಜೆಪಿ ಕೈಗೊಂಡಿರುವ ‘ಬಳ್ಳಾರಿ ಚಲೋ ಪಾದಯಾತ್ರೆ ಭಾನುವಾರ ಬಳ್ಳಾರಿ ಜಿಲ್ಲೆ ಪ್ರವೇಶಿಸಿತು. 6ನೇ ದಿನ ಭಾನುವಾರ ಯಾತ್ರೆ ಕೊಪ್ಪಳ ಜಿಲ್ಲೆಯ ಜಂಗಮರ ಕಲ್ಗುಡಿಯಿಂದ ಬಳ್ಳಾರಿ ಜಿಲ್ಲೆಯ ಕಂಪ್ಲಿವರೆಗೆ 18 ಕಿ.ಮೀ. ಕ್ರಮಿಸಿತು. ಪಾದಯಾತ್ರೆಗೆ ಎಲ್ಲೆಡೆ ಭರ್ಜರಿ ಸ್ಪಂದನೆ ಸಿಕ್ಕಿತು.

ಪಾದಯಾತ್ರೆ ಆರಂಭಕ್ಕೂ ಮುನ್ನ ವಿಜಯೇಂದ್ರ ಅವರು ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಜಮೀನಿನಲ್ಲಿ ‌ನೆಲೆಸಿರುವ ಕುರಿಗಾಹಿಗಳನ್ನು ಭೇಟಿ ಮಾಡಿ, ಅವರ ಸಮಸ್ಯೆ ಆಲಿಸಿದರು. ಕುರಿಗಾಹಿಗಳ ಜೊತೆಗೆ ಸಂವಾದ ನಡೆಸಿ, ಟೀ ಕುಡಿದರು. ಕುರಿಗಾಯಿಗಳ ಮಕ್ಕಳಿಗೆ ಹಣ್ಣು ವಿತರಿಸಿದರು. ಬಳಿಕ ಗಂಗಾವತಿ ತಾಲೂಕಿನ ಜಂಗಮರಕಲ್ಗುಡಿಯ ಶ್ರೀರಾಮನ ದೇವಸ್ಥಾನದಿಂದ ಪಾದಯಾತ್ರೆ ಆರಂಭಿಸಿದರು. ಪೂರ್ಣಕುಂಭದೊಂದಿಗೆ ಆರಂಭವಾದ ಪಾದಯಾತ್ರೆ ಗಂಗಾವತಿ ತಾಲೂಕಿನ ವಿದ್ಯಾನಗರಕ್ಕೆ ಬಂದಾಗ ಕ್ರೇನ್ ಮೂಲಕ ಹಾರ ಹಾಕಿ ವಿಜಯೇಂದ್ರ ಅವರನ್ನು ಸ್ವಾಗತಿಸಲಾಯಿತು. ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು. ಹಾಲುಮತ ಸಮಾಜದಿಂದ ಕುರಿ ಹಾಗೂ ಕಂಬಳಿ ನೀಡಿ ವಿಜಯೇಂದ್ರರನ್ನು ಸ್ವಾಗತಿಸಲಾಯಿತು. ವಿಜಯೇಂದ್ರ ಮುಂದಿನ ಸಿಎಂ ಆಗಲಿ, ಪಾದಯಾತ್ರೆ ಯಶಸ್ವಿಯಾಗಲಿ ಎಂದು ಸಮಾಜ ಬಾಂಧವರು ಶುಭ ಹಾರೈಸಿದರು.

ಬಳಿಕ, ಗಂಗಾವತಿಯ ಮಹಾತ್ಮಾ ಗಾಂಧಿ ವೃತ್ತದಲ್ಲಿ‌ ನಡೆದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ಸಿಎಂ ಡಿಕೆಶಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು. ಈ ವೇಳೆ, ವಾಲ್ಮೀಕಿ ಸಮಾಜದವರು ಶ್ರೀರಾಮುಲುಗೆ ಕುಮಾರರಾಮನ ಕಾಲದ ಖಡ್ಗ ನೀಡಿದರು. ಬಳಿಕ, ಗಂಗಾವತಿಯ ಗ್ರಾಮದೇವತೆ ಶ್ರೀದುರ್ಗಾದೇವಿ ಗುಡಿಗೆ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ಪಾದಯಾತ್ರೆ ಮುಂದುವರಿಸಲಾಯಿತು. ಬಳಿಕ, ನಗರದ ರಾಣಾ ಪ್ರತಾಪ್‌ ಸಿಂಗ್ ಸರ್ಕಲ್ ನಲ್ಲಿ ಜೆಸಿಬಿ ಮೂಲಕ ನಾಯಕರಿಗೆ ಪುಷ್ಪವೃಷ್ಠಿ ಗೈಯ್ಯಲಾಯಿತು.

ಬಳಿಕ, ಚಿಕ್ಕಜಂತಗಲ್ ಗ್ರಾಮದ ಬಳಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತ ಮಹಿಳೆಯರ ಜೊತೆ ಚರ್ಚೆ ಮಾಡಿದ ವಿಜಯೇಂದ್ರ, ಅವರ ಸಮಸ್ಯೆ ಆಲಿಸಿದರು. ಅವರ ಜೊತೆ ಫೋಟೋ ತೆಗೆಸಿಕೊಂಡರು. ಈ ವೇಳೆ, ಶ್ರೀರಾಮುಲು ಅವರು ಸ್ನೇಹಿತ ಜನಾರ್ಧನ ರೆಡ್ಡಿಯನ್ನು ಕೂರಿಸಿಕೊಂಡು ಗದ್ದೆಯಲ್ಲಿ ಟ್ರ್ಯಾಕ್ಟರ್ ಚಲಾಯಿಸಿ, ಗದ್ದೆ ಹದ ಮಾಡಿದರು. ನಂತರ, ವಿನೋಬಾನಗರದಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳ ಜೊತೆಗೆ ವಿಜಯೇಂದ್ರ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಸಮಸ್ಯೆ, ಹಾಸ್ಟೆಲ್ ಸಮಸ್ಯೆ, ಶಾಲಾ-ಕಾಲೇಜುಗಳ ಮೂಲಭೂತ ಸೌಕರ್ಯಗಳ ಕುರಿತು ಚರ್ಚೆ ನಡೆಸಿದರು.

ಪಾದಯಾತ್ರೆ ಮಧ್ಯೆ ವಿನೋಬ ನಗರ ರಸ್ತೆಯಲ್ಲಿ ದೊಡ್ಡ ಗುಂಡಿ ಕಂಡಾಗ ಮಣ್ಣು ಹಾಕಿ ಗುಂಡಿ ಮುಚ್ಚಿ, ಅದಕ್ಕೆ ಹೂವಿನ ಹಾರ ಹಾಕಿದರು. ಬಳಿಕ ಪಾದಯಾತ್ರೆ ಚಿಕ್ಕಜಂತಗಲ್ ಗ್ರಾಮದ ಗಡಿ ದಾಟಿ ಬಳ್ಳಾರಿ ಜಿಲ್ಲೆಯ ಕಂಪ್ಲಿಗೆ ಆಗಮಿಸಿತು. ಕಂಪ್ಲಿಯಲ್ಲಿ ತುಂಗಭದ್ರಾ ನದಿಯ ದಡದಲ್ಲಿ ಗಂಗಾ ಪೂಜೆ ನೆರವೇರಿಸಿದರು. ಬಳಿಕ, ಕಂಪ್ಲಿಯ ಅಂಬೇಡ್ಕರ್ ವೃತ್ತದಲ್ಲಿ ಬಹಿರಂಗ ಸಮಾವೇಶ ನಡೆಸಿ, 6ನೇ ದಿನದ ಯಾತ್ರೆ ಮುಕ್ತಾಯಗೊಳಿಸಿದರು.

6ನೇ ದಿನದ ಪಾದಯಾತ್ರೆಯುದ್ಧಕ್ಕೂ ಬಿಜೆಪಿ ಬಾವುಟಗಳು ರಾರಾಜಿಸಿದವು. ಪಾದಯಾತ್ರೆಯುದ್ದಕ್ಕೂ ಹೂವಿನ ಸುರಿಮಳೆ, ಮಹಿಳೆಯರ ಆಕರ್ಷಕ ಡೊಳ್ಳು ಕುಣಿತ ಆಕರ್ಷಣೀಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಕರೆಗೆ 1 ಲಕ್ಷ ರು ಪರಿಹಾರಕ್ಕೆ ಯೋಗೇಶ್ ಆಗ್ರಹ
ಹಿಂಸೆಯಿಂದ ಏನೂ ಸಾಧಿಸಲು ಸಾಧ್ಯವಿಲ್ಲ