ಈ ಬಾರಿ ಮಳೆ ಇಲ್ಲದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತುರ್ತಾಗಿ ರೈತರಿಗೆ ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಬಿ.ಆರ್. ಯೋಗೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಈ ಬಾರಿ ಮಳೆ ಇಲ್ಲದೆ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು ತುರ್ತಾಗಿ ರೈತರಿಗೆ ಪ್ರತಿ ಎಕರೆಗೆ ಒಂದು ಲಕ್ಷ ರೂ. ಪರಿಹಾರ ವಿತರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಬಿ.ಆರ್. ಯೋಗೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ರೈತರು ಮಳೆ ಆಧಾರಿಕ ಕೃಷಿ ಅವಲಂಬಿಸಿದ್ದಾರೆ. ಆದರೆ ಈ ವರ್ಷ ಮಳೆ ಬೀಳದೆ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡು ರೈತರು ಕಂಗಾಲಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರಮುಖ ಬೆಳೆಗಳಾದ ರಾಗಿ, ಶೇಂಗಾ, ಜೋಳ, ಹುರುಳಿಕಾಳು, ಹತ್ತಿ ಮೊದಲಾದ ಬೆಳೆಯನ್ನು ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ರೈತರಿಗೆ ಜೀವನಾಧಾರವಾದ ಕೃಷಿ ಕೈ ಕೊಟ್ಟಿದೆ. ಪರಿಹಾರ ಕಾರ‍್ಯಗಳ ಮೂಲಕ ಸರ್ಕಾರ ರೈತರ ಕೈ ಹಿಡಿಯಬೇಕು. ಕಡೆಗಣಿಸಿದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸಂಘದ ಜಿಲ್ಲಾ ಗೌರವಾಧ್ಯಕ್ಷ ಕೆ.ಸಿ. ಮಹದೇವಯ್ಯ, ಕಾರ‍್ಯಾಧ್ಯಕ್ಷ ಡಮರುಗ ಉಮೇಶ್, ಉಪಾಧ್ಯಕ್ಷ ಹೆಚ್.ಬಿ. ಶಿವಲಿಂಗಯ್ಯ, ಪ್ರಧಾನ ಕಾರ‍್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಸಂಚಾಲಕ ಕೆ.ಸಿ. ಶಿವಲಿಂಗಯ್ಯ, ಕಾನೂನು ಸಲಹೆಗಾರ ವಿನಯ್, ಮಹಿಳಾ ಘಟಕ ಅಧ್ಯಕ್ಷೆ ಮಂಜುಳಾ, ಮುಖಂಡರಾದ ಕೆ.ಜಿ. ಕುಮಾರ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.