ಜನರ ಸಮಸ್ಯೆ ನಿವಾರಣೆಗೆ ಕಾಳಜಿಯಿಂದ ಸ್ಪಂದಿಸಿ

ಕನ್ನಡಪ್ರಭ ವಾರ್ತೆ, ತುಮಕೂರು

ಸಣ್ಣಪುಟ್ಟ ಸಮಸ್ಯೆಗಳಿಗೂ ಸಾರ್ವಜನಿಕರು ಕಚೇರಿಗೆ ಅಲೆಯುವುದನ್ನು ತಪ್ಪಿಸಲು, ಸಾರ್ವಜನಿಕರ ಅಹವಾಲು ಆಲಿಸಿ, ಅರ್ಜಿ ಸ್ವೀಕರಿಸಿ ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕೆಂದು ಪ್ರಜಾ ಸೇವಾ ಇಲಾಖೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದೆ. ಇದಕ್ಕೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಾರೆ, ಕಾರ್ಯಕ್ರಮ ಎಷ್ಟು ಫಲಪ್ರದವಾಗುತ್ತದೆ ಎಂದು ಕಾದು ನೊಡಬೇಕಾಗಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ. ಸುರೇಶ್‌ಗೌಡ ಹೇಳಿದರು.

ಕ್ಷೇತ್ರದ ಹೆಬ್ಬೂರಿನ ಅಂಬೇಡ್ಕರ್ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಜಾಸೇವೆ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಶಾಸಕರು, ಅಧಿಕಾರಿಗಳು ಸರಿಯಾಗಿ ಕೆಲಸ ಮಾಡಿದರೆ ಇಂತಹ ಕಾರ್ಯಕ್ರಮಗಳ ಅಗತ್ಯವೇ ಇರುವುದಿಲ್ಲ. ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ತಿಂಗಳಿಗೊಮ್ಮೆ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಪರಿಹಾರ ಮಾಡುವ ಕಾರ್ಯಕ್ರಮ ಇತ್ತು. ಅದೇ ಮಾದರಿಯಲ್ಲಿ ಡಿ.ಕೆ. ಶಿವಕುಮಾರ್ ಸರ್ಕಾರ ಈ ಮೂಲಕ ಜನರ ಬಳಿಗೆ ಆಡಳಿತ ತಂತ್ರವನ್ನು ತರುವ ಪ್ರಯತ್ನ ಮಾಡಿದೆ ಎಂದರು.

ಸಣ್ಣ ಕೆಲಸಗಳಿಗೂ ಜನ ಕಚೇರಿಗಳಿಗೆ ಅಲೆಯುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ನನ್ನ ಅನುಭವದಲ್ಲಿ ಶೇಕಡ 40ರಷ್ಟು ಅಧಿಕಾರಿಗಳು ಜನಪರ ಕಾಳಜಿಯಿಂದ ಕೆಲಸ ಮಾಡುವುದಿಲ್ಲ. ಅದರಿಂದಲೇ ಇಂತಹ ಕಾರ್ಯಕ್ರಮ ಶುರುಮಾಡುವ ಪರಿಸ್ಥಿತಿ ಬಂದಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ನಡೆಯುವ ಪ್ರಜಾಸೇವಾ ಕಾರ್ಯಕ್ರಮಗಳಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ಅಹವಾಲು, ಅರ್ಜಿ ಸ್ವೀಕರಿಸಿ ಕಾಲಮಿತಿಯೊಳಗೆ ಅವರ ಸಮಸ್ಯೆ ಬಗೆಹರಿಸಬೇಕು. ಕ್ಷುಲ್ಲಕ ನೆಪವೊಡ್ಡಿ ವಿಳಂಬ ಮಾಡಬಾರದು ಎಂದು ಶಾಸಕ ಸುರೇಶ್‌ಗೌಡರು ಎಚ್ಚರಿಕೆ ನೀಡಿದರು. ತಹಸೀಲ್ದಾರ್ ರಾಜೇಶ್ವರಿ ತಾಪ ಇಒ ಲಕ್ಷ್ಮಿನಾರಾಯಣಸ್ವಾಮಿ ಭಾಗವಹಿಸಿದ್ದರು.