ಬಿಜೆಪಿಯಿಂದ ನಶಾ ಮುಕ್ತ ಭಾರತ ಮ್ಯಾರಾಥಾನ್

KannadaprabhaNewsNetwork |  
Published : Oct 09, 2025, 02:01 AM IST
8ಎಚ್‌ವಿಆರ್1 | Kannada Prabha

ಸಾರಾಂಶ

ಬಿಜೆಪಿ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಅ.11ರಂದು ಬೆಳಗ್ಗೆ 8 ಗಂಟೆಗೆ ನಗರದಲ್ಲಿ ನಮೋ ಯುವ ರನ್ ನಶಾಮುಕ್ತ ಭಾರತ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದ್ದು, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ಹಾವೇರಿ: ಬಿಜೆಪಿ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಅ.11ರಂದು ಬೆಳಗ್ಗೆ 8 ಗಂಟೆಗೆ ನಗರದಲ್ಲಿ ನಮೋ ಯುವ ರನ್ ನಶಾಮುಕ್ತ ಭಾರತ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದ್ದು, ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಮೋ ಯುವ ರನ್ ನಶಾಮುಕ್ತ ಭಾರತ ಮ್ಯಾರಾಥಾನ್ ವಾಲ್ಮೀಕಿ ವೃತ್ತದಿಂದ ಆರಂಭಗೊಂಡು ರಾಣಿ ಚೆನ್ನಮ್ಮ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತದ ಮೂಲಕ ಹುತಾತ್ಮಾ ಮೈಲಾರ ಮಹಾದೇವಪ್ಪ ವೃತ್ತದಲ್ಲಿ ಸಮಾರೋಪಗೊಳ್ಳಲಿದೆ. ಇದರಲ್ಲಿ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಸೇರಿದಂತೆ ಜಿಲ್ಲೆಯ ಹಾಲಿ, ಮಾಜಿ ಶಾಸಕರು, ಸಚಿವರು, ವಿವಿಧ ಮೋರ್ಚಾ, ಮಂಡಲಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ನಶಾಮುಕ್ತ ಭಾರತ ನಿರ್ಮಾಣ ಹಿನ್ನೆಲೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮ್ಯಾರಾಥಾನ್ ಹಮ್ಮಿಕೊಂಡಿದ್ದು, ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ವಿಜೇತರಿಗೆ ಮೆಡಲ್ ನೀಡಲಾಗುವುದು ಎಂದರು.

ರಾಜ್ಯ ಸರ್ಕಾರ ಇತ್ತೀಚೆಗೆ ಕ್ಯಾಬಿನೆಟ್ ಸಭೆ ನಡೆಸಿ ಅತಿವೃಷ್ಟಿಯಿಂದ ಹಾನಿಗೀಡಾದ ಬೆಳೆಗಳಿಗೆ ಸಣ್ಣ ಪ್ರಮಾಣದ ಪರಿಹಾರ ಕೊಟ್ಟು ರೈತರ ಕಣ್ಣೊರೆಸುವ ಕೆಲಸ ಮಾಡಿದ್ದು, ಬಹುತೇಕ ರೈತರಿಗೆ ಇನ್ನೂ ಪರಿಹಾರ ಬಂದಿಲ್ಲ. ಜಿಲ್ಲಾಡಳಿತ ಹಾವೇರಿ ಜಿಲ್ಲೆಯಲ್ಲಿ 17 ಸಾವಿರ ಹೆಕ್ಟೇರ್ ಹಾನಿಯಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ನೈಜವಾಗಿ ಜಿಲ್ಲೆಯಲ್ಲಿ 80 ಸಾವಿರ ಹೆಕ್ಟೇರ್‌ಗೂ ಹೆಚ್ಚು ಕ್ಷೇತ್ರದಲ್ಲಿನ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಹತ್ತಿ ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾನಿಗೀಡಾಗಿವೆ. ರೈತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟ ನಡೆಸಲಿದ್ದೇವೆ ಎಂದರು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆಗೆ ನಿಷೇಧ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೋರಾಟ ಹತ್ತಿಕ್ಕಲು ಈ ಸರ್ಕಾರ, ಅದರಲ್ಲಿನ ಸಿಎಂ ಸಹಿತ ಸಚಿವರು, ಶಾಸಕರು ಪ್ರಯತ್ನಿಸುತ್ತಿದ್ದಾರೆ. ಹೋರಾಟಗಾರರ ಆತ್ಮಸ್ಥೈರ್ಯ ಕುಂದಿಸುವ ಪ್ರಯತ್ನ ನಡೆಸಿದ್ದು, ಇದನ್ನು ನಾವು ಖಂಡಿಸುತ್ತೇವೆ. ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆಗೆ ನಿಷೇಧ ವಾಪಸ್ ಪಡೆಯಬೇಕು. ಇಲ್ಲದೇ ಹೋದಲ್ಲಿ ಜಿಲ್ಲಾಧಿಕಾರಿ, ತಹಸೀಲ್ದಾರ್‌ ಕಚೇರಿ ಎದುರು ಆದೇಶ ಖಂಡಿಸಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಕೂಡಲೇ ಆದೇಶ ವಾಪಸ್ ಪಡೆಯಲಿ ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ, ಪಾಲಾಕ್ಷಗೌಡ ಪಾಟೀಲ, ನಾಗೇಂದ್ರ ಕಡಕೋಳ, ಕಲ್ಯಾಣಕುಮಾರ ಶೆಟ್ಟರ, ಚಂದ್ರಣ್ಣ ಹರಿಜನ, ಸಂತೋಷ ಆಲದಕಟ್ಟಿ, ನಂಜುಂಡೇಶ ಕಳ್ಳೇರ ಇದ್ದರು.

ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆ ಅವ್ಯಾಹತ: ಈ ಸರ್ಕಾರದ ಸಚಿವರಿಗೆ, ಶಾಸಕರಿಗೆ ನೈತಿಕತೆ ಇಲ್ಲ, ಅವರಿಗೆ ಶಿಕ್ಷೆ ನೀಡಲು ಜನರು ಕಾದಿದ್ದಾರೆ. ಬೆಂಗಳೂರಿನ ಗುಂಡಿ ಬಿದ್ದಿರುವ ರಸ್ತೆಗಳೇ ಅವರಿಗೆ ಕಾಣುತ್ತಿಲ್ಲ, ಇನ್ನು ರಾಜ್ಯದ ಇತರೆಡೆಯ ಸಮಸ್ಯೆ ಕಾಣಲು ಸಾಧ್ಯವೇ? ಅದೇ ರೀತಿ ಈ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ಇಸ್ಪೀಟ್, ಒಸಿ, ಮಟ್ಕಾ ಸೇರಿದಂತೆ ಅಕ್ರಮ ಚುಟುವಟಿಕೆ ಅವ್ಯಾಹತವಾಗಿ ನಡೆದಿದೆ. ಬ್ಯಾಡಗಿ ತಾಲೂಕಿನ ಅಂದಾನಿಕೊಪ್ಪ, ಕದರಮಂಡಲಗಿ ಹಾಗೂ ಬ್ಯಾಡಗಿಯಲ್ಲಿ ಇಸ್ಪೀಟ್ ಕ್ಲಬ್‌ಗಳು ಎಗ್ಗಿಲ್ಲದೇ ನಡೆದಿವೆ. ಈ ಕುರಿತು ಎಸ್ಪಿ ಅವರ ಗಮನಕ್ಕೂ ತಂದರೂ ಕ್ರಮಕ್ಕೆ ಮುಂದಾಗಿಲ್ಲ. ಒಸಿ ಆಟಕ್ಕೆ ಇವರೆ ಬೆನ್ನೆಲುಬಾಗಿ ನಿಂತಂತೆ ಕಾಣುತ್ತಿದೆ. ಇದಕ್ಕೆ ಪ್ರತಿ ತಾಲೂಕಿನಿಂದ ಮಾಸಿಕ ಲಕ್ಷಗಟ್ಟಲೆ ಹಣ ನಿಗದಿ ಮಾಡಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಹೇಳಿಬರುತ್ತಿವೆ ಎಂದರು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ