ಶಿಕಾರಿಪುರ: ಭ್ರಷ್ಟಾಚಾರ ರಹಿತವಾದ ಸಿಎಂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದಿಂದ ಕಂಗೆಟ್ಟು ಬಿಜೆಪಿಯ ಮುಖಂಡರು ಅತ್ಯಂತ ಹಗುರವಾದ ಹೇಳಿಕೆಗಳಿಂದ ಟೀಕಿಸುತ್ತಿದ್ದಾರೆ. ಜನತೆ ಎಲ್ಲವನ್ನು ಗಮನಿಸುತ್ತಿದ್ದು, ಬರಲಿರುವ ಚುನಾವಣೆಯಲ್ಲಿ ಸ್ಪಷ್ಟ ಉತ್ತರವನ್ನು ನೀಡಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಮಾಲತೇಶ್ ಗೋಣಿ ಹೇಳಿದರು.
ಮುಖ್ಯಮಂತ್ರಿ ವಿರುದ್ದ ಏಕವಚನದಲ್ಲಿ ಟೀಕಿಸಿದ ಸಂಸದ ಅನಂತಕುಮಾರ್ ಹೆಗಡೆ ವಿರುದ್ಧ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 2ನೇ ಬಾರಿ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಚುನಾವಣಾಪೂರ್ವದಲ್ಲಿ ನೀಡಿದ ಭರವಸೆ ರೀತಿ ಎಲ್ಲ 5 ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದ್ದಾರೆ. ಅತ್ಯಂತ ಪಾರದರ್ಶಕ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದ್ದಾರೆ. ಅವರ ಕಾರ್ಯವೈಖರಿಯಿಂದ ಬಿಜೆಪಿ ಸಹಿತ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ ಎಂದು ಟೀಕಿಸಿದರು.ಭದ್ರಾ ಕಾಡಾ ಮಾಜಿ ಅಧ್ಯಕ್ಷ ನಗರದ ಮಹಾದೇವಪ್ಪ ಮಾತನಾಡಿ, ರಾಹುಲ್ ಗಾಂಧಿ ಅವರ ಪಾದಯಾತ್ರೆಯಿಂದ ದಿಕ್ಕೆಟ್ಟಿರುವ ಅನಂತಕುಮಾರ್ ಸಹಿತ ಬಿಜೆಪಿಗರು ಮನಸೋಯಿಚ್ಛೆ ಮಾತನಾಡುತ್ತಿದ್ದಾರೆ. ಇದು ಬಿಜೆಪಿ ಸಂಸ್ಕೃತಿಯನ್ನು ತೋರಿಸುತ್ತಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಹುಲ್ಮಾರ್ ಮಾತನಾಡಿ, ಅನಂತ್ ಕುಮಾರ್ ಹೆಗಡೆ ಒಬ್ಬ ಹುಚ್ಚನಂತೆ ಮಾತನಾಡುತ್ತಿದ್ದು ಬಿಜೆಪಿ ನಾಯಕರೇ ಅವರ ಮಾತನ್ನು ಒಪ್ಪುತ್ತಿಲ್ಲ. ಬಿಜೆಪಿ ಮುಖಂಡರು ಹಾಗೂ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡಲೇ ಅನಂತ್ ಕುಮಾರ್ ಹೆಗಡೆ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಇಲ್ಲದೇಹೋದಲ್ಲಿ ವಿಜಯೇಂದ್ರ ಅವರ ಮನೆಗೆ ತಾಲೂಕು ಕಾಂಗ್ರೆಸ್ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಸಿದರು.ಖಾಸಗಿ ಬಸ್ ನಿಲ್ದಾಣದಲ್ಲಿ ಅನಂತ್ ಕುಮಾರ್ ಹೆಗಡೆ ಅಣಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಲಾಯಿತು. ಅನಂತ್ ಕುಮಾರ್ ಹೆಗಡೆ ವಿರುದ್ಧ ಕ್ರಮ ಜರುಗಿಸಲು ಒತ್ತಾಯಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ಮುಖಂಡರಾದ ಕವಲಿ ಗಂಗಾಧರಪ್ಪ, ಪುರಸಭಾ ಸದಸ್ಯ ಉಳ್ಳಿ ದರ್ಶನ್, ಗೋಣಿ ಪ್ರಕಾಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ, ಯುವ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ನಾಯ್ಕ, ಕಾರ್ಯದರ್ಶಿ ಶಿವು ಸಂದಿಮನೆ, ಎನ್ಎಸ್‌ಯುಐ ಅಧ್ಯಕ್ಷ ಶಿವು ಹುಲ್ಮಾರ್ ಮತ್ತಿತರರು ಹಾಜರಿದ್ದರು.