ಕನ್ನಡಪ್ರಭ ವಾರ್ತೆ ರಾಯಚೂರು
ಜೆಡಿಎಸ್ ಜೊತೆ ಬಿಜೆಪಿ ಯೂಸ್ ಆಂಡ್ ಥ್ರೋ ಪಾಲಿಟಿಕ್ಸ್ ಮಾಡಿದೆ ಎನ್ನುವುದಕ್ಕೆ ಪ್ರಜ್ವಲ್ ರೇವಣ್ಣ ಅವರ ಪ್ರಕರಣವೇ ಸಾಕ್ಷಿಯಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದರು.ಸ್ಥಳೀಯ ಖಾಸಗಿ ಹೋಟೆಲ್‌ನಲ್ಲಿ ನಡೆದ ವಿವಿಧ ರೈತರು, ಸಂಘಟನೆಗಳೊಂದಿಗೆ ಸಂವಾದ ಕಾರ್ಯಕ್ರಮದ ನಂತರ ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಮತ ಬೇಕಾದಾಗ ವೇದಿಕೆ ಮೇಲೆ ಒಬ್ಬರನ್ನೊಬ್ಬರು ಆಲಿಂಗನ ಮಾಡಿಕೊಂಡ ಬಿಜೆಪಿ ನಾಯಕರು ಪ್ರಜ್ವಲ್ ರೇವಣ್ಣಗೆ ಸೇರಿದ ಮತಗಳನ್ನು ಮೋದಿಗೆ ಸೇರಿದ್ದು ಎಂದು ಪ್ರಚಾರ ಮಾಡಿ, ಎಲ್ಲೆಲ್ಲಿ ಜೆಡಿಎಸ್ ಮತ ಬೇಕಿತ್ತೋ ಅಲ್ಲಲ್ಲಿ ಬಿಜೆಪಿಗೆ ಹಾಕಿಸಿಕೊಂಡರು. ಪ್ರಜ್ವಲ್ ರೇವಣ್ಣ ಸೋಲಬೇಕು ಎನ್ನುವ ಉದ್ದೇಶದಿಂದಲೇ ಕೊನೆಕ್ಷಣ ವಿಡಿಯೋ ಬಿಡುಗಡೆ ಮಾಡಿದರು. ಇದಕ್ಕೆಲ್ಲ ಸೂತ್ರದಾರರು ಬಿಜೆಪಿ ನಾಯಕರಾಗಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಗೆ ಎರಡು ದಿನಗಳ ಮುಂಚೆ ವಿಡಿಯೋ ಬಿಡುಗಡೆ ಮಾಡಿ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ವೋಟ್ ಹಾಕಿಸಿಕೊಂಡು ಇದೀಗ ಜೆಡಿಎಸ್‌ಗೂ ನಮಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅವರನ್ನು ಜೈಲಿಗೆ ಹಾಕಿ, ಕೋರ್ಟ್‌ಗೆ ಹಾಕಿ ಅವರಿಗೂ ನಮಗೂ ಸಂಬಂಧವಿಲ್ಲ ಎಂದು ಜೆಡಿಎಸ್‌ಗೆ ವಿಚ್ಛೇದನ ನೀಡಲು ಪೀಠಿಕೆ ಹಾಕಿ ಅವರಿಗೂ ಚೆಂಬನ್ನು ಕೊಡುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ದೂರಿದರು.ಡಿಸೆಂಬರ್‌ನಲ್ಲಿಯೇ ಬಿಜೆಪಿ ಮುಖಂಡರೇ ಪ್ರಜ್ವಲ್ ಕುರಿತು ಪತ್ರ ಬರೆದಿದ್ದರು. ವೋಟು ಹೋಗುತ್ತವೆ ಎನ್ನುವ ಕಾರಣಕ್ಕಾಗಿ ಇಷ್ಟು ದಿನ ಸುಮ್ಮನಿದ್ದರು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಬಳಸಿಕೊಂಡರು. ಇದು ಬಿಜೆಪಿಯ ಯೂಸ್ ಆಂಡ್ ಥ್ರೋ ರಾಜಕೀಯವಾಗಿದೆ ಎಂದು ಲೇವಡಿ ಮಾಡಿದರು.
ಬಿಜೆಪಿ ವಿರುದ್ಧ ಗುಪ್ತ ಗಾಳಿ:ಚುನಾವಣೆಯಲ್ಲಿ ಜನ ತೀರ್ಪುಕೊಡುವುದಕ್ಕಿಂತ ಮೊದಲೇ ನಾವು ಸಂಖ್ಯೆ, ಮಾರ್ಜಿನ್ ಹೇಳುವುದು ಸರಿಯಲ್ಲ. ಆದರೂ ದೇಶದ ಸುಮಾರು ರಾಜ್ಯಗಳಲ್ಲಿ ಬದಲಾವಣೆ ಗಾಳಿ ಬೀಸುತ್ತಿದೆ. ಇದನ್ನು ಗೋಚರಿಸದೇ ಇರುವ ಗುಪ್ತ ಗಾಳಿ ಎನ್ನಬಹುದು. ಇದಕ್ಕೆಕಾರಣ 10 ವರ್ಷದ ಬಿಜೆಪಿ ಆಡಳಿತದ ಅವಧಿಯಲ್ಲಿ ಕೆಲ ಶ್ರೀಮಂತರು ಮಾತ್ರ ಅಭಿವೃದ್ಧಿ ಹೊಂದಿದ್ದಾರೆಯೇ ಹೊರತು, ಬಡವರ ಬದುಕು ಸುಧಾರಿಸಿಲ್ಲ. ಒಂದು ಕಡೆ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆ, ಶ್ರೀಮಂತರು-ಬಡವರ ನಡುವಿನ ಹಂತರ, ರೈತರ ಪರಿಸ್ಥಿತಿ ಶೋಷನೀಯ, ಶೋಷಿತರಲ್ಲಿ ಸಂವಿಧಾನ ಬದಲಿಸುತ್ತಾರೆ ಎನ್ನುವ ಆತಂಕ ಸೃಷ್ಟಿಯಾಗಿದ್ದರೆ ಮತ್ತೊಂದು ಕಡೆ ಪ್ರಜ್ಞಾವಂತರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಹೋಗಿ ನಿರಂಕುಶತ್ವವಾದದ ಕಡೆಗೆ ನಡೆಯುತ್ತದೆ ಎನ್ನುವ ಮನೋಭಾವನೆ ಬಂದಿದೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಬಿಜೆಪಿ ಗಾಳಿ ಕಡಿಮೆಯಾಗುತ್ತಿದೆ. ಕರ್ನಾಟಕದಲ್ಲಿಯೂ ಕಾಂಗ್ರೆಸ್ 15ಕ್ಕು ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.17 ಲಕ್ಷ ರೈತರ ಖಾತೆಗೆ ಬರಪರಿಹಾರ
ರಾಜ್ಯಕ್ಕೆ ಬಂದಿರುವ ಬರಪರಿಹಾರದ ಅನುದಾನವನ್ನು ಶೀಘ್ರವಾಗಿ ರೈತರಿಗೆ ತಲುಪಿಸಬೇಕು ಎಂದು ಚುನಾವಣಾ ಆಯೋಗದ ಗಮನಕ್ಕೆ ತಂದು ಸುಮಾರು 17 ಲಕ್ಷ ರೈತರ ಖಾತೆಗೆ ಬರಪರಿಹಾರದ ಮೊತ್ತವನ್ನು ಹಾಕುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಮಂಗಳವಾರದ ವೇಳೆಗೆ ರೈತರ ಖಾತೆಗೆ ಹಣ ಜಮಾಗೊಳ್ಳಲಿದೆ. ಈಗಾಗಲೇ ಬರಪರಿಹಾರದ ಮೊತ್ತವನ್ನು ಬ್ಯಾಂಕ್‌ಗೆ ಕಳುಹಿಸಿಕೊಡಲಾಗಿದ್ದು, ಆರ್‌ಬಿಐ ನಿಯಮಾನುಸಾರ 48 ಗಂಟೆಗಳ ನಂತರ ರೈತರ ಖಾತೆಗೆ ಹಣ ಸೇರಲಿದೆ.ಬರ ಪರಿಹಾರ ವಿಚಾರದಲ್ಲಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿ ಕೇಂದ್ರದ ವಿರುದ್ಧ ಹೋರಾಡಿದ್ದು, ಅದರಲ್ಲಿ ಸ್ವಲ್ಪ ಯಶಸ್ಸು ಸಿಕ್ಕಿದೆ. ನಾವು 18,172 ಕೋಟಿ ಕೇಳಿದ್ದು, ಅದರಲ್ಲಿ ಕೇವಲ 3,454 ಕೋಟಿ ಇದೀಗ ಬಂದಿದೆ. ಕಡಿಮೆ ಅನುದಾನ ಕೊಟ್ಟಿದ್ದಾರೆ ಎಂದು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು ಅದಕ್ಕೆ ಉತ್ತರಿಸುವಂತೆ ಕೇಂದ್ರಕ್ಕೆ ನ್ಯಾಯಾಧೀಶರು ತಾಕೀತು ಮಾಡಿದ್ದು, ಹೆಚ್ಚುವರಿ ಅನುದಾನಕ್ಕೆ ಹೋರಾಟ ಮುಂದುವರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.