ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಪಂ ಸಭಾಂಗಣದಲ್ಲಿ ಮಂಗಳವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ.1ರಂದು ದೀಪಾವಳಿ ಹಬ್ಬದ ದಿನವೇ ಕರ್ನಾಟಕ ರಾಜ್ಯೋತ್ಸವವನ್ನು ಬೆಳಗಾವಿಯಲ್ಲಿ ಅತೀ ವಿಜೃಂಭಣೆಯಿಂದ ಆಚರಿಸಲಾಗುವುದು. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ.1ರಂದು ದೀಪಾವಳಿ ಇರುವ ಹಿನ್ನೆಲೆಯಲ್ಲಿ ಅದೇ ದಿನ ರಾಜ್ಯೋತ್ಸವ ಆಚರಣೆ ಕುರಿತು ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ನ.1 ರಂದೇ ರಾಜ್ಯೋತ್ಸವ ಆಚರಿಸಲು ತೀರ್ಮಾನಿಸಲಾಯಿತು.ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಕನ್ನಡ ಹೋರಾಟಗಾರರಿಗೆ ಸನ್ಮಾನ ಮಾಡಲಾಗುವುದು. ಅಲ್ಲದೇ ಈ ಬಾರಿ ಕನ್ನಡ ಪರ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳನ್ನು ಸನ್ಮಾನಿಸಲು ಪ್ರತ್ಯೇಕ ಸಮಿತಿ ರಚಿಸಲಾಗುವುದು. ಈ ಬಾರಿ ರಾಜ್ಯೋತ್ಸವ ಮೆರವಣಿಗೆಗೆ ಆಗಮಿಸುವ ಮಹಿಳೆಯರಿಗಾಗಿ ಪ್ರತ್ಯೇಕ ಗ್ಯಾಲರಿ ವ್ಯವಸ್ಥೆ ಮಾಡಲಾಗುವುದು. ರೂಪಕಗಳಿಗೆ ಪ್ರಶಸ್ತಿ ನೀಡುವುದರ ಜತೆಗೆ ರಾಣಿ ಚನ್ನಮ್ಮನ ಮೂರ್ತಿಗೆ ಆಕಾಶದಿಂದ ಪುಷ್ಪವೃಷ್ಟಿ ಮಾಡಲು ಪ್ರಯತ್ನಿಸಲಾಗುವುದು ಎಂದು ವಿವರಿಸಿದರು..
ಕರಾಳ ದಿನಾಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂಬ ಕನ್ನಡ ಪರ ಸಂಘಟನೆಗಳ ಒಕ್ಕೊರಲಿನ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ರೋಷನ್ ಅವರು, ಈ ಬಾರಿ ಯಾವುದೇ ಕಾರಣಕ್ಕೂ ಕರಾಳ ದಿನಾಚರಣೆಗೆ ಅನುಮತಿ ನೀಡಲಾಗುವುದಿಲ್ಲ ಎಂದು ಸಭೆಗೆ ತಿಳಿಸಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಲಿರುವ ವೇದಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವೇದಿಕೆ ಸಿದ್ಧತೆ, ಧ್ವಜಾರೋಹಣ, ಆಮಂತ್ರಣ ಪತ್ರಿಕೆ, ಪಥಸಂಚಲನ, ಸಾಧಕರಿಗೆ ಸನ್ಮಾನ, ಮೆರವಣಿಗೆ, ರೂಪಕ ವಾಹನಗಳಿಗೆ ಅನುಮತಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿದಂತೆ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಲಾಯಿತು. ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂಕರ ಮಾತನಾಡಿ, ಕರ್ನಾಟಕ ರಾಜ್ಯೋತ್ಸವದ ಸುವರ್ಣ ಸಂಭ್ರಮ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಕನ್ನಡ ಪರ ಹೋರಾಟಗಾರರಿಗೆ ಸನ್ಮಾನಿಸಲು ಸಲಹೆ ನೀಡಿದ ಅವರು ರಾಜ್ಯೋತ್ಸವದ ಮೆರವಣಿಗೆಯಲ್ಲಿ ವಿವಾದಾತ್ಮಕ ಧ್ವಜಗಳಿಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿದರು.
ಹೋರಾಟಗಾರ ಮಹದೇವ ತಳವಾರ ಮಾತನಾಡಿ, ಸಾಧಕರ ಸನ್ಮಾನದಲ್ಲಿ ಕೇವಲ ಕನ್ನಡ ಪರ ಹೋರಾಟಗಾರರನ್ನು ಮಾತ್ರ ಸನ್ಮಾನಿಸಬೇಕು. ಸನ್ಮಾನ ಸಂದರ್ಭದಲ್ಲಿ ಶಾಶ್ವತವಾಗಿ ಇರುವಂತಹ ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಲು ಸಲಹೆ ನೀಡಿದರು.
ರಾಜೀವ ಟೋಪಣ್ಣವರ ಮಾತನಾಡಿ, ಈ ಬಾರಿ ರಾಜ್ಯೋತ್ಸವ ಮೆರವಣಿಗೆಯಲ್ಲಿ ಬೇರೆ ಬೇರೆ ಕಲಾವಿದರಿಗೆ ಅವಕಾಶ ಮಾಡಿಕೊಡಬೇಕು. ಮೈಸೂರು ದಸರಾ ಮಾದರಿ ರೀತಿ ಮೆರವಣಿಗೆ ಜರುಗಿಸಲು ಸಲಹೆ ನೀಡಿದರು. ಸಂಘಟನೆಗಳ ಮುಖಂಡ ಮಲ್ಲೇಶ್ ಚೌಗಲೆ, ಮಹೇಶ್ ಶೀಗಿಹಳ್ಳಿ, ರಾಜೇಂದ್ರ ಸೊಂಟಕ್ಕಿ ಸೇರಿದಂತೆ ವಿವಿಧ ಪದಾಧಿಕಾರಿಗಳು ರಾಜ್ಯೋತ್ಸವ ಆಚರಣೆ ಕುರಿತು ಸಲಹೆಗಳನ್ನು ನೀಡಿದರು.