ಕಾರ್ಕಳ: ಪುರಸಭೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಕಸ ಎಸೆಯುವುದು ಹಾಗೂ ನಿಯಮಬಾಹಿರವಾಗಿ ಪ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ಅಳವಡಿಸುವುದು ಹೆಚ್ಚುತ್ತಿದೆ. ಪುರಸಭೆಯ ಸ್ವಚ್ಛತಾ ಸಿಬ್ಬಂದಿ ನಿತ್ಯ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರೂ, ಸಾರ್ವಜನಿಕರಲ್ಲಿ ನಿಯಮ ಪಾಲನೆ ಕೊರತೆಯಿಂದ ಸಮಸ್ಯೆ ಮುಂದುವರಿದಿದೆ.
ತ್ಯಾಜ್ಯ ನೀರು ನೇರ ಚರಂಡಿಗೆ: ಸತ್ಯನಾರಾಯಣ ನಗರದಲ್ಲಿ ಮನೆಗಳಿಂದ ತ್ಯಾಜ್ಯ ನೀರನ್ನು ನೇರವಾಗಿ ಮಳೆನೀರು ಚರಂಡಿಗೆ ಬಿಡಲಾಗುತ್ತಿರುವ ಬಗ್ಗೆ ಬಂದ ದೂರುಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಅಕ್ರಮ ಪೈಪ್‌ಗಳನ್ನು ಬಂದ್ ಮಾಡಿದ್ದಾರೆ. ಮನೆಗಳ ತ್ಯಾಜ್ಯ ನೀರಿಗಾಗಿ ಪ್ರತ್ಯೇಕ ಸೋಕೇಜ್ ಪಿಟ್ ನಿರ್ಮಾಣ ಕಡ್ಡಾಯ ಎಂದು ಸೂಚಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷೇಧವಿದ್ದರೂ, ಪಟ್ಟಣದಾದ್ಯಂತ ಪ್ಲಾಸ್ಟಿಕ್ ಪ್ಲೆಕ್ಸ್ ಮತ್ತು ಬ್ಯಾನರ್‌ಗಳ ಬಳಕೆ ಮುಂದುವರಿದಿದೆ. ಪುರಸಭೆಯ ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಯುತ್ತಿದ್ದು, ಮಣ್ಣಗೋಪುರ ಪ್ರದೇಶದಲ್ಲಿ ಅಕ್ರಮವಾಗಿ ಕಸ ಎಸೆಯುತ್ತಿದ್ದ ವ್ಯಕ್ತಿಗೆ ₹2000 ದಂಡ ವಿಧಿಸಲಾಗಿದೆ. ಕೆಲ ಪ್ಲೆಕ್ಸ್ ತಯಾರಕರಿಗೆ ನೋಟಿಸ್ ನೀಡಲಾಗಿದೆ.ಏಪ್ರಿಲ್ 1ರಿಂದ ನಿಯಮ ಉಲ್ಲಂಘಕರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ನಿರೀಕ್ಷಕಿ ಲೈಲಾ ಥಾಮಸ್ ತಿಳಿಸಿದ್ದಾರೆ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಪುರಸಭೆಗೆ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.