ಕೃಷ್ಣಮೃಗಕ್ಕೆ ಗುಂಡು: ಬೆನ್ನಟ್ಟಿ ಹಿಡಿದ ಗ್ರಾಮಸ್ಥರು

KannadaprabhaNewsNetwork |  
Published : Aug 18, 2026, 01:45 AM IST
ಚಿತ್ರ 17ಬಿಡಿಆರ್‌6156ಬೀದರ್‌ನ ಚೊಂಡಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಗುಂಡೇಟಿಗೆ ಬಲಿಯಾದ ಕೃಷ್ಣಮೃಗ | Kannada Prabha

ಸಾರಾಂಶ

ಚಾಮರಾಜನಗರದ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ, ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಚೊಂಡಿ ಅರಣ್ಯ ಪ್ರದೇಶದಲ್ಲೂ ಬೇಟೆಗಾರರ ಅಟ್ಟಹಾಸ ಬೆಳಕಿಗೆ ಬಂದಿದೆ.ಭಾನುವಾರ ತಡರಾತ್ರಿ ಅರಣ್ಯಕ್ಕೆ ನುಗ್ಗಿ ಬಂದೂಕಿನಿಂದ ಗುಂಡಿಟ್ಟು ಕೃಷ್ಣಮೃಗವನ್ನು ಬಲಿಪಡೆದ ಮೂವರು ಖದೀಮರನ್ನು ಗ್ರಾಮಸ್ಥರು ಬರೋಬ್ಬರಿ 20 ಕಿಲೋಮೀಟರ್‌ ಬೆನ್ನಟ್ಟಿ ಹಿಡಿದು ಸೋಮವಾರ ಬೆಳಗಿನ ಜಾವ ಪೊಲೀಸರಿಗೊಪ್ಪಿಸಿದ ರೋಚಕ ಘಟನೆ ಇಲ್ಲಿನ ಜನವಾಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸ್ಥಳದಲ್ಲೇ ಕೃಷ್ಣಮೃಗ ಸಾವು । ಬೀದರ್‌ನ ಚೊಂಡಿ ಅರಣ್ಯ ಪ್ರದೇಶದಲ್ಲಿ ಬೇಟೆಗಾರರ ಅಟ್ಟಹಾಸ । ವಶಕ್ಕೆ

ಕನ್ನಡಪ್ರಭ ವಾರ್ತೆ ಬೀದರ್‌

ಚಾಮರಾಜನಗರದ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಮೂವರು ಬೇಟೆಗಾರರ ಎನ್‌ಕೌಂಟರ್‌ ಪ್ರಕರಣದ ಬೆನ್ನಲ್ಲೇ, ರಾಜ್ಯದ ಗಡಿ ಜಿಲ್ಲೆ ಬೀದರ್‌ನ ಚೊಂಡಿ ಅರಣ್ಯ ಪ್ರದೇಶದಲ್ಲೂ ಬೇಟೆಗಾರರ ಅಟ್ಟಹಾಸ ಬೆಳಕಿಗೆ ಬಂದಿದೆ.ಭಾನುವಾರ ತಡರಾತ್ರಿ ಅರಣ್ಯಕ್ಕೆ ನುಗ್ಗಿ ಬಂದೂಕಿನಿಂದ ಗುಂಡಿಟ್ಟು ಕೃಷ್ಣಮೃಗವನ್ನು ಬಲಿಪಡೆದ ಮೂವರು ಖದೀಮರನ್ನು ಗ್ರಾಮಸ್ಥರು ಬರೋಬ್ಬರಿ 20 ಕಿಲೋಮೀಟರ್‌ ಬೆನ್ನಟ್ಟಿ ಹಿಡಿದು ಸೋಮವಾರ ಬೆಳಗಿನ ಜಾವ ಪೊಲೀಸರಿಗೊಪ್ಪಿಸಿದ ರೋಚಕ ಘಟನೆ ಇಲ್ಲಿನ ಜನವಾಡ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬಂಧಿತರನ್ನು ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸೋಹೆಬ್‌ ಮಲ್ಲಿಕ್‌, ಹೈದ್ರಾಬಾದ್‌ ಮೂಲದ ಅಬ್ದುಲ್‌ ಸಾಹಿದ್‌ ಹಾಗೂ ಹಮೀದ್‌ ಎಂದು ಗುರುತಿಸಲಾಗಿದೆ. ಹೈದ್ರಾಬಾದ್‌ನ ನಾಸೀರ್‌ ಸೇರಿದಂತೆ ಇನ್ನಿಬ್ಬರು ಆರೋಪಿಗಳು ಪರಾರಿ ಆಗಿದ್ದು, ಅವರ ಬಂಧನಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಜಾಲ ಬೀಸಿದ್ದಾರೆ.

ಹೈದ್ರಾಬಾದ್‌ ಹಾಗೂ ಚಿಂಚೋಳಿಯ ಒಟ್ಟು 6 ಜನರಿದ್ದ ಬೇಟೆಗಾರರ ತಂಡವು ಮಧ್ಯರಾತ್ರಿ ಕಾರಿನಲ್ಲಿ ಚೊಂಡಿ ಅರಣ್ಯ ಪ್ರದೇಶಕ್ಕೆ ಲಗ್ಗೆಯಿಟ್ಟಿತ್ತು. ಪ್ರಾಣಿಗಳ ಬೇಟೆಗೆಂದು ಬಂದೂಕಿನಿಂದ ನಾಲ್ಕು ಬಾರಿ ಗುಂಡು ಹಾರಿಸಿದ್ದು, ಸ್ಥಳದಲ್ಲೇ ಕೃಷ್ಣಮೃಗವೊಂದು ಮೃತಪಟ್ಟಿದೆ. ಗುಂಡಿನ ಶಬ್ದ ಕೇಳಿದ ತಕ್ಷಣವೇ ಜಾಗೃತರಾದ ಮಮದಾಪುರ ಹಾಗೂ ಚೊಂಡಿ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದಾಗ, ಬೇಟೆಗಾರರು ಕೃಷ್ಣಮೃಗವನ್ನು ಅಲ್ಲೇ ಬಿಟ್ಟು ಪರಾರಿಯಾಗಲು ಯತ್ನಿಸಿದ್ದಾರೆ. ಪ್ರಾಣಾಪಾಯವನ್ನೂ ಲೆಕ್ಕಿಸದೆ ಬೇಟೆಗಾರರನ್ನು ಬೆನ್ನಟ್ಟಿ ಹಿಡಿದ ಗ್ರಾಮಸ್ಥರ ಸಾಹಸ ಕಾರ್ಯಕ್ಕೆ ಅರಣ್ಯಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೇಟೆಗೆ ಬಳಸಿದ್ದ ಮಾರಕಾಸ್ತ್ರ, ಕಾರು ಹಾಗೂ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಸಿದ್ದೇವೆ ಹಾಗೆಯೇ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ದೂರು ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ ಎಂದು ಆರ್‌ಎಫ್‌ಒ ಪ್ರವೀಣಕುಮಾರ ಮಾಧ್ಯಮದವರಿಗೆ ತಿಳಿಸಿದ್ದಾರೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿ ಕೃಷ್ಣಮೃಗ ಬೇಟೆ ಸಂಪೂರ್ಣವಾಗಿ ನಿಷೇಧಿತವಾಗಿದ್ದು, ಅಪರಾಧ ಸಾಬೀತಾದರೆ ಆರೋಪಿಗಳಿಗೆ ಕನಿಷ್ಠ 3ರಿಂದ 7 ವರ್ಷಗಳ ಕಾಲ ಶಿಕ್ಷೆಯಾಗುವ ಸಾಧ್ಯತೆಯಿದೆ. ಬೀದರ್‌ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಕೃಷ್ಣಮೃಗ ಹೇರಳವಾಗಿ ಕಾಣಸಿಗುತ್ತದೆ.

ಸಲ್ಮಾನ್‌ ಖಾನ್‌ ಪ್ರಕರಣ ನೆನಪಿಸಿದ ಘಟನೆ: ಈ ಹಿಂದೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೃಷ್ಣಮೃಗ ಬೇಟೆಯಾಡಿ ಸುದೀರ್ಘ ಕಾನೂನು ಸಂಕಷ್ಟ ಹಾಗೂ ಜೈಲು ಶಿಕ್ಷೆ ಎದುರಿಸಿದ್ದ ಪ್ರಕರಣ ಇಡೀ ದೇಶದಲ್ಲೇ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಬೀದರ್‌ನಲ್ಲಿ ನಡೆದ ಈ ಕೃತ್ಯ ಹಾಗೂ ಗ್ರಾಮಸ್ಥರು ತೋರಿದ ವನ್ಯಜೀವಿ ಪ್ರೇಮ, ಅಂದು ಸಲ್ಮಾನ್‌ ಖಾನ್‌ ಪ್ರಕರಣದಲ್ಲಿ ಒಂದು ಸಮುದಾಯದವರು ಪ್ರತಿಭಟಿಸಿ ಹೋರಾಡಿದ ಆ ಘಟನಾವಳಿಯನ್ನು ಮತ್ತೆ ನೆನಪಿಸುವಂತೆ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮಪ್ಪನಾಣೆ ತಮಿಳುನಾಡಿಗೆ ನೀರು ಬಿಟ್ಟಿಲ್ಲ: ಶಾಸಕ ರಮೇಶ ಬಂಡಿಸಿದ್ದೇಗೌಡ ಸಮರ್ಥನೆ
ವಿದ್ಯಾರ್ಥಿನಿಯರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸದೆ ಉನ್ನತ ಶಿಕ್ಷಣ ಪಡೆಯಿರಿ