ಕಾಮಗಾರಿ ಪೂರ್ಣಗೊಳಿಸದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ

KannadaprabhaNewsNetwork | Published : Nov 23, 2024 12:34 AM

ಸಾರಾಂಶ

ಮೊಳಕಾಲ್ಮುರು: ಜಲ ಜೀವನ್ ಮಿಶನ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳನ್ನು ಪೂರ್ಣಗೊಳಿಸದ ಏಜೆನ್ಸಿಗಳನ್ನು ಬ್ಲಾಕ್ ಪಟ್ಟಿಗೆ ಸೇರಿಸಿ ಎಂದು ಹೇಳಿದ್ದರೂ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ನಿಮ್ಮಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ್ ಬೇಸರ ವ್ಯಕ್ತಪಡಿಸಿದರು.

ಮೊಳಕಾಲ್ಮುರು: ಜಲ ಜೀವನ್ ಮಿಶನ್ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳನ್ನು ಪೂರ್ಣಗೊಳಿಸದ ಏಜೆನ್ಸಿಗಳನ್ನು ಬ್ಲಾಕ್ ಪಟ್ಟಿಗೆ ಸೇರಿಸಿ ಎಂದು ಹೇಳಿದ್ದರೂ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ನಿಮ್ಮಗಳ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ ಎಂದು ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಲಕ್ಷ್ಮಣ್ ತಳವಾರ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ತಾಲೂಕು ಪಂಚಾಯಿತಿ ಆಡತಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.ಕಳೆದ ಆರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಮತ್ತು ಜಲ ಜೀವನ್ ಮಿಶನ್ ಕಾಮಗಾರಿ ವಿಳಂಬವಾಗುತ್ತಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ ಕೆಲವು ವರ್ಷ ಕಳೆದರೂ ದುರಸ್ತಿಯಾಗಿಲ್ಲ. ಈ ಎರಡೂ ಕಾಮಗಾರಿಗಳ ತ್ವರಿತವಾಗಿ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸೂಚಿಸಲಾಗಿದ್ದರೂ ಪ್ರಯೋಜನವಾಗಿಲ್ಲ. ಈ ಸಂಬಂಧವಾಗಿ ಶಾಸಕರು ತಿಳಿಸಿದರೂ ಕ್ರಮ ವಹಿಸಿಲ್ಲ. ಈ ರೀತಿಯಾದರೆ ಜನ ಸಾಮಾನ್ಯರಿಗೆ ನ್ಯಾಯ ಒದಗಿಸಲು ಹೇಗೆ ಸಾಧ್ಯ. ಅಂತಹ ಏಜೆನ್ಸಿಗಳ ಕಪ್ಪು ಪಟ್ಟಿಗೆ ಸೇರಿಸಬೇಕು ಇಲ್ಲದಿದ್ದರೆ ಮಹತ್ವಪೂರ್ಣ ಯೋಜನೆ ಕುಂಟುತ್ತಾ ಸಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ನೀರು ಸರಬರಾಜು ಇಲಾಖೆಯ ಎಇಇ ಹರ್ಷ, ಈಗಾಗಲೇ ಎರಡು ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ. ಉಳಿದವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರನ್ನು ಸಂಪರ್ಕ ಮಾಡಿ ಕಪ್ಪುಪಟ್ಟಿ ಸೇರಿಸಲು ಕ್ರಮ ವಹಿಸುತ್ತೇನೆ ಎಂದು ತಿಳಿಸಿದರು.

ತಾಲೂಕು ಆಸ್ಪತ್ರೆ ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರೋಗಿಗಳಿಗೆ ಅಗತ್ಯ ಔಷಧಗಳನ್ನು ಸಂಗ್ರಹಿಸಿಕೊಳ್ಳಬೇಕು. ಬಹುತೇಕ ಬಡ ಸಮುದಾಯಗಳೇ ಹೆಚ್ಚಾಗಿರುವ ಈ ಭಾಗದ ಜನರಿಗೆ ಹೊರಗಡೆ ಚೀಟಿ ಬರೆಯುವುದನ್ನು ನಿಯಂತ್ರಿಸಬೇಕು. ಮುಖ್ಯವಾಗಿ ಆಸ್ಪತ್ರೆಗಳಲ್ಲಿ ದೂರುಗಳು ಬಾರದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಆಡತಾಧಿಕಾರಿ ಲಕ್ಷ್ಮಣ್ ತಳವಾರ್ ಸೂಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕಟ್ಟಡ ನಿರ್ಮಾಣಕ್ಕೆ ತಳಪಾಯ ನಿರ್ಮಿಸಿ ವರ್ಷದ ಸನಿಹಕ್ಕೆ ಬಂದರೂ ಕಟ್ಟಡ ಬುನಾದಿ ಬಿಟ್ಟು ಬೇರೇನೂ ಕೆಲಸವಾಗಿಲ್ಲ. ಯಾಕೆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, 1.50 ಕೋಟಿ ರು. ಅಂದಾಜಿನ ಕಟ್ಟಡ ಇದಾಗಿದ್ದು, ಈಗಾಗಲೇ 40 ಲಕ್ಷದಲ್ಲಿ ಕಟ್ಟಡದ ಬುನಾದಿ ನಿರ್ಮಿಸಲಾಗಿದೆ. ಮುಂದುವರೆದು ಕಾಮಗಾರಿಗೆ ಅನುದಾನದ ಕೊರತೆ ಎದುರಾಗಿದ್ದು, ಅನುದಾನ ಮಂಜೂರಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುದಾನ ಮುಂಜೂರಾಗಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಮದುಕುಮಾರ್, ತಾಲೂಕು ಪಂಚಾಯಿತಿ ಇಒ ಹನುಮಂತಪ್ಪ, ವ್ಯವಸ್ಥಾಪಕ ನಂದೀಶ್ ಇದ್ದರು.

Share this article