ಭೂ ಗ್ಯಾರಂಟಿ ಯೋಜನೆಗೆ ದೇಶಪಾಂಡೆ ಚಾಲನೆ । 320 ಫಲಾನುಭವಿಗಳಿಗೆ ಜಮೀನು ಹಕ್ಕು ಪತ್ರ ವಿತರಣೆ
ನನ್ನ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ತಂದರೂ, ಜನಪರ ಕಾರ್ಯಕ್ರಮ ಜಾರಿಗೊಳಿಸಿದರೂ, ಚುನಾವಣೆಯ ಸಮಯದಲ್ಲಿ ನಾನು ಮಾಡಿರುವ ಜನಪರ ಅಭಿವೃದ್ಧಿ ಕೆಲಸ ಮರೆತು ಬಿಡುತ್ತಿರಿ. ಮತದಾನ ಎಣಿಕೆ ಕಾರ್ಯ ಆರಂಭವಾದಾಗ ಅದರಲ್ಲೂ ಹಳಿಯಾಳ ಗ್ರಾಮಾಂತರ ಏಣಿಕೆ ಆರಂಭವಾದಾಗಲಂತೂ ನನಗೆ ಎಲ್ಲಿಲ್ಲದ ಭಯ ಉಂಟಾಗುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನೋವು ತೊಡಿಕೊಂಡರು.
ಸೋಮವಾರ ತಾಲೂಕಾಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ ಭೂ ಗ್ಯಾರಂಟಿ ಯೋಜನೆಯಲ್ಲಿ ತಾಲೂಕಿನ 320 ಫಲಾನುಭವಿಗಳಿಗೆ ಜಮೀನು ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಳಿಯಾಳ ತಾಲೂಕಿನ ವಿಶೇಷವಾಗಿ ಗ್ರಾಮಾಂತರ ಭಾಗದವರ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದರೂ ಎಲ್ಲಾ ಮರೆತೇ ಬಿಡುವ ನಿಮ್ಮ ನಿಲುವು ಅರ್ಥವಾಗಿಲ್ಲ. ನಾನೇನೂ ತಪ್ಪು ಮಾಡಿದ್ದೇನೆ? ನನ್ನ ಮೇಲೆ ಭ್ರಷ್ಟಾಚಾರದ ಆಪಾದನೆ ಇದೆಯೇ? ನಿಮ್ಮ ಬಳಿ ಲಂಚ ಪಡೆದಿದ್ದೇನೆಯೇ ಎಂದು ಪ್ರಶ್ನಿಸಿದರು. ನನಗೆ ಅಭಿವೃದ್ಧಿಯ ಹುಚ್ಚು ಇದೇ, ನೀವು ಕೇಳಲಿ ಬಿಡಲಿ ನನ್ನ ಮತದಾರರಿಗೆ ಒಳ್ಳೆಯ ಯೋಜನೆಗಳನ್ನು ತಂದು ಕೊಡಬೇಕೆಂಬ ತುಡಿತ ನನ್ನಲ್ಲಿದೆ. ನನ್ನ ಕ್ಷೇತ್ರ ಮಾದರಿ ಮಾಡಬೇಕೆಂಬ ಇಚ್ಛೆ ನನಗಿದೆ ಎಂದರು. ಒಳ್ಳೆಯವರಿಗೆ ಮತ ಹಾಕಿ:ಮತದಾರರು ತಮ್ಮ ಜವಾಬ್ದಾರಿ ಯಾವತ್ತೂ ಮರೆಯಬಾರದು. ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ, ಅಭಿವೃದ್ಧಿ ಪರವಾಗಿದ್ದವರ ಪರವಾಗಿ ನೀವು ಆಶೀರ್ವದಿಸಬೇಕು, ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕೆಂದರು.