ಗದಗ: ತಾಯಿಗಿಂತ ದೊಡ್ಡವರು ಯಾರೂ ಇಲ್ಲ. ತಾಯಿಯಿಂದ ಸಂಸ್ಕಾರ ಮತ್ತು ಪಾಠ ಕಲಿತವರೇ ಧನ್ಯರು. ಹುಟ್ಟಿದ ಶಿಶುವಿಗೆ ತಾಯಿಯೇ ಮೊದಲ ಗುರು ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
ತಾಯಿಯ ಸ್ಥಾನ ಬಹಳಷ್ಟು ಮಹತ್ವದ್ದಾಗಿದೆ. ಅಂತಃಕರಣ, ವಾತ್ಸಲ್ಯ, ಪ್ರೀತಿ, ದಯೆ ತಾಯಿಯಲ್ಲಿರುವ ವಿಶೇಷ ಗುಣಗಳು. ಪ್ರಾಚೀನ ಕಾಲದಿಂದಲೂ ತಂದೆ ತಾಯಿಗಳನ್ನು ಗೌರವಿಸುವ ಸಂಸ್ಕೃತಿ ನಮ್ಮದು. ಮಕ್ಕಳೂ ಸಹಿತ ತಂದೆ ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳ್ಳದೇ ಪಾಲನೆ ಪೋಷಣೆ ಸಂರಕ್ಷಣೆ ಮಾಡಬೇಕು. ಹೆಣ್ಣು ಮಕ್ಕಳಿಗಾಗಿಯೇ ಸರ್ಕಾರದ ಇಲಾಖೆ ಮತ್ತು ಸಬಲೀಕರಣಕ್ಕಾಗಿ ವಿಶೇಷ ಯೋಜನೆ ಜಾರಿಯಲ್ಲಿವೆ. ಸಮಾಜದಲ್ಲಿ ಹೆಣ್ಣುಮಕ್ಕಳು ಬೆಳೆಯಲು ಸಾಕಷ್ಟು ಅವಕಾಶಗಳಿದ್ದು, ಉಪಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಅವ್ವನ ಮಮತೆ ವಿಷಯ ಕುರಿತು ಸ್ತ್ರೀರೋಗ ತಜ್ಞ ಡಾ.ತೇಜಸ್ವಿನಿ ಹಿರೇಮಠ ಉಪನ್ಯಾಸ ನೀಡಿ, ತಾಯಿಯ ತ್ಯಾಗ ದೊಡ್ಡದು. ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ. ಹೆಣ್ಣಿಗೆ ಪ್ರೆಗ್ನೇಸಿ, ಮುಟ್ಟಿನ ಸಮಸ್ಯೆ, ರಕ್ತದ ಹೀನತೆ, ಮಾನಸಿಕ ದೌರ್ಬಲ್ಯಗಳು ಅನೇಕ ಸಮಸ್ಯೆಗಳು ಕಾಡುತ್ತಿರುತ್ತವೆ. ಈ ಸಮಯದಲ್ಲಿ ಪರಿವಾರದವರ ಸಹಾಯ, ಸಹಕಾರ, ಕಾಳಜಿ ಬಹಳ ಅವಶ್ಯ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಸಮಾಜದಲ್ಲಿ ಹೆಣ್ಣು ಅಂದರೆ ನಿರ್ಲಕ್ಷ್ಯಭಾವ ಇದೆ. ಆ ಭಾವ ತೊರೆದು ಪ್ರತಿಹಂತದಲ್ಲೂ ಸ್ಪಂದನೆ, ಪ್ರೋತ್ಸಾಹ ಲಭಿಸಬೇಕು ಎಂದರು.ಈ ವೇಳೆ ಗಿರಿಜಕ್ಕ ಧರ್ಮರೆಡ್ಡಿ ಅವರು ಲಿಂ.ಡಾ.ಅಕ್ಕ ಅನ್ನಪೂರ್ಣ ತಾಯಿ ಬೀದರ ಅವರಿಗೆ ನುಡಿನಮನ ಸಲ್ಲಿಸಿದರು. ವಿಶ್ವತಾಯಂದಿರ ದಿನಾಚರಣೆ ಅಂಗವಾಗಿ ರತ್ನವ್ವ ಚನ್ನವೀರಪ್ಪ ಕ್ಯಾಡದ, ಮಹಾದೇವಿ ಈಶ್ವರಪ್ಪ ಅರಳಿ, ಜ್ಯೋತಿ ಅಶೋಕ ಅಗಸನಕೊಪ್ಪ ಅವರನ್ನು ಪೂಜ್ಯರು ಸನ್ಮಾನಿಸಿದರು.
ಲಿಂಗಾಯತ ಪ್ರಗತಿಶೀಲ ಸಂಘದ ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಅಶೋಕ ಹಾದಿ, ಸುರೇಶ ನಿಲೂಗಲ್, ವಿವೇಕಾನಂದಗೌಡ ಪಾಟೀಲ ಸೇರಿದಂತೆ ಇತರರು ಇದ್ದರು. ಸಂಘದ ಅಧ್ಯಕ್ಷ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ನಿರೂಪಿಸಿದರು.