ಅಡಕೆ ಬೆಳೆಗೆ ಹೆಚ್ಚಿದ ಕೊಳೆರೋಗ

KannadaprabhaNewsNetwork | Published : Aug 26, 2024 1:36 AM

ಸಾರಾಂಶ

ಭಟ್ಕಳ ತಾಲೂಕಿನಲ್ಲಿ ಗಾಳಿಯೊಂದಿಗೆ ಭಾರಿ ಮಳೆ ಸುರಿದಿದ್ದರಿಂದ ಒಂದು ಕಡೆ ಅಡಕೆ ಮಿಳ್ಳೆಗಳು ಉದುರುತ್ತಿದ್ದರೆ, ಇನ್ನೊಂದೆಡೆ ಅಡಕೆಗೆ ಕೊಳೆರೋಗ ತಗುಲಿದೆ.

ಭಟ್ಕಳ: ಈ ಸಲದ ಭಾರೀ ಮಳೆಗೆ ಅಡಕೆ ಬೆಳೆಗೆ ವ್ಯಾಪಕ ಕೊಳೆ ರೋಗ ಬಾಧಿಸಿರುವುದರಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ತಾಲೂಕಿನಲ್ಲಿ 1450 ಹೆಕ್ಟೇರ್ ಪ್ರದೇಶದಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಹೆಚ್ಚಿನ ಅಡಕೆ ತೋಟಗಳಲ್ಲಿ ಕೊಳೆರೋಗ ವ್ಯಾಪಿಸಿದೆ. ಕಳೆದ ವರ್ಷಕ್ಕಿಂತ ಈ ಸಲ ಅಡಕೆಗೆ ಕೊಳೆರೋಗ ಹೆಚ್ಚು ತಗುಲಿದೆ.

ಅಡಕೆಗೆ ಮೊದಲ ಹಂತದಲ್ಲಿ ಕೊಳೆರೋಗ ನಿರೋಧಕ ಔಷಧಿ ಸಿಂಪರಣೆ ಮಾಡಿದ್ದರೂ ಪ್ರಯೋಜನವಾಗದೇ ಕೊಳೆರೋಗದಿಂದ ಅಡಕೆ ಉದುರಲಾರಂಭಿಸಿದೆ.

ಈ ವರ್ಷ ತಾಲೂಕಿನಲ್ಲಿ ಗಾಳಿಯೊಂದಿಗೆ ಭಾರಿ ಮಳೆ ಸುರಿದಿದ್ದರಿಂದ ಒಂದು ಕಡೆ ಅಡಕೆ ಮಿಳ್ಳೆಗಳು ಉದುರುತ್ತಿದ್ದರೆ, ಇನ್ನೊಂದೆಡೆ ಅಡಕೆಗೆ ಕೊಳೆರೋಗ ತಗುಲಿದೆ. ಬೆಳೆಗಾರರ ಅಭಿಪ್ರಾಯದ ಪ್ರಕಾರ ಈ ಸಲ ಕಳೆದ ವರ್ಷಕ್ಕಿಂತ ಬೆಳೆ ಕಡಿಮೆಯಾಗಿದೆ. ಕಳೆದ ಐದಾರು ವರ್ಷಗಳಿಂದ ಅಡಕೆ ಬೆಳೆಗಾರರಿಗೆ ಕೊಳೆರೋಗದ ಪರಿಹಾರ ವಿತರಣೆ ಆಗಿಲ್ಲ.

ವರ್ಷಂಪ್ರತಿ ತೋಟಗಾರಿಕೆ ಮತ್ತು ಕಂದಾಯ ಇಲಾಖೆಯಿಂದ ಕೊಳೆರೋಗದ ಬಗ್ಗೆ ಜಂಟಿ ಸರ್ವೆ ನಡೆಸಿ ಸರ್ಕಾರ ವರದಿ ಸಲ್ಲಿಸಲಾಗುತ್ತಿದೆ. ಬೆಳೆಗಾರರೂ ಸರ್ಕಾರದಿಂದ ಪರಿಹಾರ ಲಭಿಸಬಹುದು ಎನ್ನುವ ಆಶಾಭಾವನೆಯಿಂದ ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ.

ಆದರೆ ಹಿಂದಿನ ಸರ್ಕಾರ, ಈಗಿನ ಸರ್ಕಾರ ಕೊಳೆ ರೋಗಕ್ಕೆ ಬಿಡಿಗಾಸೂ ಪರಿಹಾರ ವಿತರಣೆ ಮಾಡದೆ ಇರುವುದು ಬೆಳೆಗಾರರ ಅಸಮಾಧಾನಕ್ಕೆ ಕಾರಣವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರಿಗೆ ಕಿಸಾನ್ ಯೋಜನೆಯಡಿ ವರ್ಷಕ್ಕೆ ₹೪ ಸಾವಿರ ಖಾತೆಗೆ ಜಮಾ ಆಗುತ್ತಿತ್ತು. ಆದರೆ ಈಗಿನ ಸರ್ಕಾರ ಈ ಯೋಜನೆಯನ್ನು ರದ್ದುಪಡಿಸಿದೆ. ಕೊಳೆರೋಗದಿಂದ ಅಡಕೆ ಬೆಳೆ ಹಾನಿಯಾಗಿರುವುದಕ್ಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.

ದಿನಂಪ್ರತಿ ತೋಟದಲ್ಲಿ ಉದುರುತ್ತಿರುವ ಕೊಳೆ ಅಡಕೆ ಮತ್ತು ಮಿಳ್ಳೆಗಳನ್ನು ಸಂಗ್ರಹಿಸುವುದೇ ಬೆಳೆಗಾರರ ಕೆಲಸವಾಗಿದೆ. ಅಡಕೆ ಬೆಳೆಗೆ ಮತ್ತೊಂದು ಸಲ ರೋಗ ನಿರೋಧಕ ಔಷಧಿ ಸಿಂಪರಣೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಮಳೆ ಕಡಿಮೆಯಾಗಿ ಬಿಸಿಲು ಬೀಳುತ್ತಿದ್ದರೂ ಕೊಳೆ ಬಂದ ಅಡಕೆ ವ್ಯಾಪಕವಾಗಿ ಉದುರುತ್ತಿದೆ.

ಈ ಸಲ ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಇದ್ದ ಬೆಳೆಗೂ ಕೊಳೆ ರೋಗ ಎಂದು ಬೆಳೆಗಾರರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸರ್ಕಾರ ಈ ಸಲವಾದರೂ ಅಡಕೆ ಕೊಳೆ ರೋಗಕ್ಕೆ ಸೂಕ್ತ ಪರಿಹಾರ ಒದಗಿಸಿದರೆ ಬೆಳೆಗಾರರಿಗೆ ಅನುಕೂಲ ಆದೀತು ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.

ಪರಿಹಾರ ವಿತರಿಸಿ: ಭಟ್ಕಳ ತಾಲೂಕಿನಲ್ಲಿ ಅಡಕೆ ಬೆಳೆಗೆ ಈ ಸಲ ಹೆಚ್ಚಿನ ಪ್ರಮಾಣದಲ್ಲಿ ಕೊಳೆ ರೋಗ ಬಂದಿದ್ದು, ಇದರಿಂದ ರೈತರಿಗೆ ತೊಂದರೆ ಆಗಿದೆ. ಸರ್ಕಾರ ಈ ವರ್ಷವಾದರೂ ಬೆಳೆಗಾರರಿಗೆ ಕೊಳೆ ರೋಗದ ಪರಿಹಾರ ವಿತರಿಸಬೇಕು ಎಂದು ಕೃಷ್ಣಮೂರ್ತಿ ಹೆಗಡೆ ಆಗ್ರಹಿಸಿದರು.

Share this article