ಅಂಧ ಮಕ್ಕಳ ಭಾವನೆ, ವಿಚಾರ ಪರಿಶುದ್ಧ: ಶ್ರೀ ಗುಣನಾಥ ಸ್ವಾಮೀಜಿ

KannadaprabhaNewsNetwork | Published : Mar 28, 2025 12:36 AM

ಸಾರಾಂಶ

ಚಿಕ್ಕಮಗಳೂರು, ಅಂಧ ಮಕ್ಕಳ ಭಾವನೆ, ವಿಚಾರಗಳು ಪರಿಶುದ್ಧತೆಯಿಂದ ಕೂಡಿರುತ್ತವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.

ನಗರದ ಆಶಾಕಿರಣ ಶಾಲಾವರಣದಲ್ಲಿ ನಿರ್ಮಾಣವಾಗಿರುವ ಕಾವೇರಿ ವಸತಿ ಗೃಹ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಅಂಧ ಮಕ್ಕಳ ಭಾವನೆ, ವಿಚಾರಗಳು ಪರಿಶುದ್ಧತೆಯಿಂದ ಕೂಡಿರುತ್ತವೆ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ನುಡಿದರು.

ನಗರದ ಆಶಾಕಿರಣ ಶಾಲಾವರಣದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ನಿಂದ ನಿರ್ಮಾಣವಾಗಿರುವ ಕಾವೇರಿ ವಸತಿ ಗೃಹವನ್ನು ಗುರುವಾರ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು. ಅಂತಃಕರಣದಲ್ಲಿ ವಿಶೇಷ ಜ್ಞಾನ ಪಡೆದುಕೊಂಡು ಮಾತನಾಡುವವರು ಅಂಧಮಕ್ಕಳು, ವರನಟ ಡಾ.ರಾಜ್‌ಕುಮಾರ್‌ರವರು ಅಭಿಮಾನಿಗಳನ್ನು ದೇವರೆಂದು ಕರೆದರೆ, ಡಾ. ಜೆ.ಪಿ ಕೃಷ್ಣೇಗೌಡ ಅಂಧಮಕ್ಕಳನ್ನು ದೇವರೆಂದು ಕರೆದಿದ್ದಾರೆ. ದೇವರ ಸ್ವರೂಪವಾಗಿರುವ ಅಂಧಮಕ್ಕಳ ಶಾಲೆ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಬಯಸದೇ ಬಂದ ಭಾಗ್ಯ ಎಂದು ಹೇಳಿದರು.

ಅಂಧ ಅಂದ ತಕ್ಷಣ ಎಲ್ಲರೂ ದೂರ ಸರಿಯುತ್ತಾರೆ. ಕಣ್ಣು ಕಾಣಲ್ಲ, ಕಿವಿ ಕೇಳಿಸಲ್ಲ, ಮಾತು ಬರುವುದಿಲ್ಲ ಎಂಬ ಕಾರಣಕ್ಕೆ ಸಮಾಜ ಮತ್ತು ಕುಟುಂಬದವರು ಸಹ ದೂರವಾಗುತ್ತಾರೆ. ಗೋವಿನ ಹತ್ತಿರ ಜೀವಿಸಿದರೆ ಆಯಸ್ಸು ಹೆಚ್ಚಾಗುತ್ತದೆ, ಪರಿಸರದ ಮಧ್ಯೆಇದ್ದರೆ ಮನುಷ್ಯನ ಆಯಸ್ಸು ಹೆಚ್ಚಾಗುತ್ತದೆ ಎಂದು ವಿಶ್ಲೇಷಿಸಿದರು.ಕಳೆದ 30 ವರ್ಷಗಳಿಂದ ಒಟ್ಟಿಗೆ ಇದ್ದು, ಡಾ.ಜೆ.ಪಿ ಕೃಷ್ಣೇಗೌಡರು ಅಂಧಮಕ್ಕಳ ಸೇವೆ ಮಾಡುವ ಮೂಲಕ ಜನಾನುರಾಗಿ ಯಾಗಿದ್ದಾರೆ. ಅವರಿಗೆ ವಯಸ್ಸಾದಂತೆ ಕಾಣುತ್ತಿಲ್ಲ. ಕಾರಣ ಈ ಪರಿಸರದಲ್ಲಿ ದೇವರ ಸ್ವರೂಪಿಗಳೊಂದಿಗೆ ಜೀವಿಸು ತ್ತಿರುವುದರಿಂದ ಆಯಸ್ಸು ಹೆಚ್ಚಾಗಿದೆ ಎಂದು ತಿಳಿಸಿದರು.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ರಾಮನಗರದಲ್ಲಿ ದೇವರ ಗೋಪುರ ಕಟ್ಟುವ ಹಾಗೆ ಕಲ್ಲಿನ ಗೋಡೆಯಿಂದ ಅಂಧ ಮಕ್ಕಳ ಶಾಲೆ ಕಟ್ಟಡವನ್ನು ನಿರ್ಮಿಸಿದ್ದಾರೆ. ಒಬ್ಬ ವ್ಯಕ್ತಿ ಬಡವ ಶ್ರೀಮಂತ, ಮೇಲು ಕೀಳು ಎಂಬ ಕೀಳರಿಮೆ ಬಿಟ್ಟು ನಾವೆಲ್ಲಾ ಮನುಷ್ಯರು ಎಂಬ ಭಾವನೆಯಿಂದ ಬದುಕುವುದು ಅಗತ್ಯ ಎಂದು ಹೇಳಿದರು.ತಂದೆ ತಾಯಿಯಿಂದ ಪಡೆದ ಸಂಸ್ಕಾರವನ್ನು ಜನಪರ ಕಾರ್ಯಗಳಿಗೆ ಪ್ರಸ್ತುತ ಸಮಾಜದಲ್ಲಿ ಬಳಕೆ ಮಾಡುವವರು ಬಹಳ ವಿರಳ ಎಂದು ವಿಷಾಧಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಡಾ. ಜೆ.ಪಿ ಕೃಷ್ಣೇಗೌಡ ನೇತೃತ್ವ, ಸಹಯೋಗದ ಕಾರಣದಿಂದ ಸಾವಿರಾರು ದಿವ್ಯಾಂಗ ಮಕ್ಕಳಿಗೆ ಆಶ್ರಯ ನೀಡಿ ಆಶಾಕಿರಣ ಅಂಧಮಕ್ಕಳ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಉಚಿತ ವಸತಿ, ಶಿಕ್ಷಣ, ದಾಸೋಹ ನೀಡುತ್ತಿರುವ ಬಗ್ಗೆ ಶ್ಲಾಘಿಸಿದರು.ಅಂಧಮಕ್ಕಳ ಪಾಠಶಾಲೆ ಅಧ್ಯಕ್ಷ ಡಾ.ಜೆ.ಪಿ ಕೃಷ್ಣೇಗೌಡ ಮಾತನಾಡಿ, ಇಲ್ಲಿ ಅಂಧಮಕ್ಕಳ ಪಾಠಶಾಲೆ ಸ್ಥಾಪಿಸಲು ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿ ಮಾರ್ಗದರ್ಶಕರಾಗಿ ಶಕ್ತಿ ತುಂಬಿದ್ದರು. 25ನೇ ವರ್ಷದ ಬೆಳ್ಳಿ ಮಹೋತ್ಸವಕ್ಕೆ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿ ಆಗಮಿಸಿ ಸಂಸ್ಥೆಗೆ ಬಲ ತುಂಬಿದ್ದರು. ಇದೀಗ ಗುಣನಾಥ ಶ್ರೀಗಳು ಈ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿರುವುದು ಸಮಾಜ ಸೇವೆಗೆ ಸಮರ್ಪಿಸಿಕೊಂಡಿರುವುದಕ್ಕೆ ಉದಾಹರಣೆ ಎಂದರು.ಕಾರ್ಯಕ್ರಮದಲ್ಲಿ ಟ್ರಸ್ಟಿಗಳಾದ ನಸ್ರುಲ್ಲಾ ಶರೀಫ್, ಮೋಹನ್, ಎಐಟಿ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಟಿ. ಜಯದೇವ, ಡಾ. ಜ್ಯೋತಿ ಕೃಷ್ಣೇಗೌಡ, ಡಾ.ವರ್ಷ, ಅಂಧಮಕ್ಕಳ ಶಾಲೆ ಕಾರ್ಯದರ್ಶಿ ಎಚ್.ಸಿ. ಮಹೇಶ್ , ಮುಖ್ಯ ಶಿಕ್ಷಕ ಲಕ್ಷ್ಮಣ್‌ಗೌಡ ಉಪಸ್ಥಿತರಿದ್ದರು. 27 ಕೆಸಿಕೆಎಂ 5ಚಿಕ್ಕಮಗಳೂರಿನ ಆಶಾಕಿರಣ ಶಾಲಾವರಣದಲ್ಲಿ ಆಶಾಕಿರಣ ಚಾರಿಟಬಲ್ ಟ್ರಸ್ಟ್ ನಿಂದ ನಿರ್ಮಾಣವಾಗಿರುವ ಕಾವೇರಿ ವಸತಿ ಗೃಹವನ್ನು ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು.

Share this article