ನೀಟ್ ಹಿಂಸಾಚಾರ ಖಂಡಿಸಿ ಬ್ಲಾಕ್ ಕಾಂಗ್ರೆಸ್ ಪ್ರತಿಭಟನೆ

KannadaprabhaNewsNetwork |  
Published : Jul 27, 2026, 02:30 AM IST
ಸ | Kannada Prabha

ಸಾರಾಂಶ

ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಕೇಂದ್ರ ಸರ್ಕಾರದ ಹಿಟ್ಲರ್ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ.

ಹಗರಿಬೊಮ್ಮನಹಳ್ಳಿ: ನೀಟ್ ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರ ಹಾಗೂ ಮಾರಣಾಂತಿಕ ಹಲ್ಲೆ ಖಂಡಿಸಿ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಪೋಷಕರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಶನಿವಾರ ಸಂಜೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಕ್ಯಾಂಡಲ್ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಧ್ಯಕ್ಷ ಕೋರಿ ಗೋಣಿಬಸಪ್ಪ ಮಾತನಾಡಿ, ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಕೇಂದ್ರ ಸರ್ಕಾರದ ಹಿಟ್ಲರ್ ಸಂಸ್ಕೃತಿಯನ್ನು ಅನಾವರಣಗೊಳಿಸಿದೆ. ವಿದ್ಯಾರ್ಥಿ ಚಳವಳಿಯನ್ನು ಹಗುರವಾಗಿ ತೆಗೆದುಕೊಂಡರೆ ಕೇಂದ್ರ ಸರ್ಕಾರಕ್ಕೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು.

ವೈದ್ಯಕೀಯ ಪ್ರವೇಶ್ ಪರೀಕ್ಷೆಗಳನ್ನು ರಾಜ್ಯ ಸರ್ಕಾರಗಳಿಗೆ ಹಸ್ತಾಂತರಿಸಬೇಕು. ದೇಶದ ಶೈಕ್ಷಣಿಕ ಸಮಸ್ಯೆಗಳಿಗೆ ಕಾರಣವಾಗಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಪತ್ರೇಶ್ ಹಿರೇಮಠ್ ಮಾತನಾಡಿ, ಜನಪರ ಹೋರಾಟಗಳನ್ನು ಹತ್ತಿಕ್ಕುವ ಕೇಂದ್ರ ಸರ್ಕಾರದ ನಡೆ ಸಂವಿಧಾನಾತ್ಮನಕವಾದ ಹೋರಾಟದ ಹಕ್ಕುಗಳನ್ನು ದಮನಗೊಳಿಸಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಿಕ್ಷಣ ಸಚಿವರ ಜೊತೆಗೆ ಗೃಹ ಮಂತ್ರಿ ಅಮಿತ್‌ ಶಾ ಕೂಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಮರಿರಾಮಣ್ಣ ಮಾತನಾಡಿ, ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ನೌಕರಿ ನೀಡುವ ಜೊತೆಗೆ ಪ್ರತಿ ವಿದ್ಯಾರ್ಥಿಗೆ ಒಂದು ಕೋಟಿ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಮರಿಯಮ್ಮನಹಳ್ಳಿ ಪಪಂ ಅಧ್ಯಕ್ಷ ಹಾದಿಮನಿ ಹುಸೇನ್‌ಬಾಷಾ, ಮುಖಂಡರಾದ ಚಿಂತ್ರಪಳ್ಳಿ ದೇವೇಂದ್ರಪ್ಪ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಜಂದೀಸಾಬ್, ಸಮಿತಿ ತಾಲೂಕು ಅಧ್ಯಕ್ಷ ಸೊನ್ನದ ಗುರುಬಸವರಾಜ್, ಸದಸ್ಯ ಹೆಗ್ಡಾಳು ಪರಶುರಾಮ್, ಪುರಸಭೆ ಸದಸ್ಯರಾದ ಉಪ್ಪಾರ ಬಾಳಪ್ಪ, ತ್ಯಾವಣಿಗಿ ಕೊಟ್ರೇಶ್, ಮುಖಂಡರಾದ ಕುರುಬರ ವೆಂಕಟೇಶ್, ಬಾರಿಕರ ಮಂಜುನಾಥ್, ಉಪ್ಪಾರ ಪ್ರಕಾಶ್, ಸರೆಗಾರ ಹುಚ್ಚಪ್ಪ, ಗುಂಡ್ರು ಹನಮಂತಪ್ಪ ಸೇರಿಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರ ಮೇಲಿದೆ ಸಮಾಜದ ಭವಿಷ್ಯ ರೂಪಿಸುವ ಹೊಣೆ: ಡಿ.ಕೆ. ಹೊನ್ನಪ್ಪನವರ
ನರಗುಂದ ತಾಲೂಕಿನಲ್ಲಿ ಬೆಳೆ ಉಳಿಸಲು ಟ್ಯಾಂಕರ್‌ ನೀರಿನ ಮೊರೆ