ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ, ರಾಷ್ಟ್ರೀಯ ಔಷಧಿ ವ್ಯಾಪಾರಸ್ಥರ ಸಂಘಕ್ಕೆ 50 ವರ್ಷಗಳ ಸಂಭ್ರಮದ ಹಿನ್ನಲೆಯಲ್ಲಿ ಆಯೋಜಿತ ರಕ್ತಸಂಗ್ರಹ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಗುರುನಾಥ್, ರಕ್ತದಾನವನ್ನು ಯಾರೂ ವೃತ್ತಿಯನ್ನಾಗಿ ಪರಿವರ್ತಿಸಿಕೊಳ್ಳಬಾರದು. ರಕ್ತ ದಾನ ನೀಡುವುದು ಮತ್ತೋರ್ವರ ಜೀವ ಉಳಿಸುವ ಮಾನವೀಯ ಕಾರ್ಯ ಎಂದು ದಾನಿಗಳು ತಿಳಿದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಆರೋಗ್ಯವಂತ ವ್ಯಕ್ತಿ 3 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ಕೊಡಗಿನ ಜಿಲ್ಲಾಸ್ಪತ್ರೆಯ ರಕ್ತ ನಿಧಿ ಕೇಂದ್ರದಲ್ಲಿ ಹೆಚ್ಚುತ್ತಿರುವ ರಕ್ತದ ಬೇಡಿಕೆಗೆ ಅನುಗುಣವಾಗಿ ಶಿಬಿರಗಳ ಮೂಲಕ ರಕ್ತದ ಸಂಗ್ರಹ ಕೂಡ ಹೆಚ್ಚಾಗಬೇಕೆಂದು ಗುರುನಾಥ್ ಹೇಳಿದರು.ರೆಡ್‌ಕ್ರಾಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಎಐ ನಂಥ ಅತ್ಯಾಧುನಿಕ ತಂತ್ರಜ್ಞಾನಗಳು ಎಷ್ಟೇ ಬಂದರೂ ಮಾನವನ ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಕಂಡುಹಿಡಿಯಲು ಅಸಾಧ್ಯವಾಗಿದೆ. ಕೊಡಗು ಜಿಲ್ಲೆಯ ರಕ್ತ ನಿಧಿ ಕೇಂದ್ರಕ್ಕೆ ಮಾಸಿಕವಾಗಿ 500 ಯೂನಿಟ್ ರಕ್ತದ ಅಗತ್ಯತೆಯಿದ್ದು, ಮಾಸಿಕವಾಗಿ ಕನಿಷ್ಟ 10 ರಕ್ತಸಂಗ್ರಹಣೆಯ ಶಿಬಿರಗಳ ಅಗತ್ಯ ಕಂಡುಬಂದಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸಂಘಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಅಗತ್ಯವಿದೆ ಎಂದರು.
ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಗಾಯತ್ರಿ ಮಾತನಾಡಿ, ರಕ್ತದಾನಿಗಳಲ್ಲಿ ರಕ್ತ ನೀಡಿದ 24 ಗಂಟೆಗಳಲ್ಲಿಯೇ ಮತ್ತೆ ಹೊಸ ರಕ್ತದ ಸಂಚಾರ ಉಂಟಾಗಲಿದೆ. ರಕ್ತವನ್ನು ದಾನವಾಗಿ ನೀಡಲು ಯಾವುದೇ ಹಿಂಜರಿಕೆ ಬೇಕಾಗಿಲ್ಲ ಎಂದರು.
ಔಷಧಿ ವ್ಯಾಪಾರಸ್ಥರ ಸಂಘದ ಮಾಹಿತಿಯುಳ್ಳ ನೂತನ ಆ್ಯಪ್ ಲೋಕಾರ್ಪಣೆ ಮಾಡಲಾಯಿತು. ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಜಂಟಿ ಕಾರ್ಯದರ್ಶಿ ವಸಂತ್ ಕುಮಾರ್, ಉಪಾಧ್ಯಕ್ಷ ವಿನೋದ್ ಅಂಬೆಕಲ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕ ತಿಲಕ್ ಸೇರಿದಂತೆ ಹಲವರು ಹಾಜರಿದ್ದರು. ಜಿಲ್ಲೆಯಾದ್ಯಂತಲಿನ ಔಷಧಿ ವ್ಯಾಪಾರಿಗಳ ಸಂಘದ ಸದಸ್ಯರು ರಕ್ತದಾನ ಮಾಡಿದರು.