- ಡಾ. ಪ್ರಕಾಶ್‌ಮಣಿಜೀಯವರ 18ನೇ ಪುಣ್ಯ ಸ್ಮೃತಿ ದಿನಾಚರಣೆ । ಬೃಹತ್ ರಕ್ತದಾನ ಅಭಿಯಾನ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಕ್ತದಾನ ಮಾನವೀಯತೆ ಹಾಗೂ ಸತ್ಕಾರ್ಯದ ಕೆಲಸ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಶರೀರವನ್ನು ಹಲವಾರು ಕಾಯಿಲೆಗಳಿಂದ ದೂರಿವಿಡುವಲ್ಲಿ ಸಹಕಾರಿಯಾಗಲಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ವಿಶ್ವ ಬಂಧುತ್ವ ದಿನದ ಪ್ರಯುಕ್ತ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಾಜಯೋಗಿನಿ ಬ್ರಹ್ಮಕುಮಾರಿ ದಾದಿ ಡಾ. ಪ್ರಕಾಶ್ ಮಣಿಜೀಯವರ 18ನೇ ಪುಣ್ಯ ಸ್ಮೃತಿ ದಿನದ ಪ್ರಯುಕ್ತ ನಡೆದ ಬೃಹತ್ ರಕ್ತದಾನ ಅಭಿಯಾನ ಉದ್ಘಾಟಿಸಿ ಮಾತನಾಡಿದರು.ಸಮಾಜದಲ್ಲಿ ವಿದ್ಯಾದಾನ, ಅಂಗಾಂಗದಾನ, ಅನ್ನದಾನದ ನಡುವೆ ರಕ್ತದಾನ ಬಹುಪುಣ್ಯದ ಕೆಲಸವಾಗಿದೆ. ಅವಶ್ಯಕತೆ ಯಿರುವ, ತುರ್ತು ಸ್ಥಿತಿಯಲ್ಲಿರುವ ರೋಗಿಗಳನ್ನು ಉಳಿಸಲು ರಕ್ತದಾನ ಬಹುಮುಖ್ಯವಾಗಿದೆ. ಹೀಗಾಗಿ ಯುವಸಮೂಹ ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಮತ್ತೊಂದು ಜೀವ ಉಳಿಸಲು ಮುಂದಾಗಬೇಕಿದೆ ಎಂದರು.ರಕ್ತ ಕಣದಲ್ಲಿ ಋಣಾತ್ಮಕ ಮತ್ತು ಧನಾತ್ಮಕಗಳೆಂಬ ಅಂಶಗಳಿವೆ. ವಿಶೇಷವಾಗಿ ’ಓ’ ರಕ್ತಕಣ ತುಂಬಾ ವಿರಳವಾಗಿದೆ. ತುರ್ತು ಸಂದರ್ಭದಲ್ಲಿ ಸಿಗುವುದು ಬಹಳಷ್ಟು ಕಷ್ಟ ಸಾಧ್ಯ. ಬಿಳಿ ರಕ್ತ ಕಣ ದೇಹದಲ್ಲಿ ಕ್ಷೀಣಿಸಿದರೆ ಜೀವಕ್ಕೆ ಕುತ್ತು ಬಂದಂತೆ. ಹೀಗಾಗಿ ಪ್ರತಿಯೊಬ್ಬರು ಕನಿಷ್ಠ ವರ್ಷಕ್ಕೆ ಎರಡ್ಮೂರು ಬಾರಿ ರಕ್ತದಾನ ಮಾಡಿದರೆ ದೇಹ ಆರೋಗ್ಯದಿಂದ ಕೂಡಿರುತ್ತದೆ ಎಂದು ಹೇಳಿದರು.ಪ್ರಜಾಪಿತ ಬ್ರಹ್ಮಕುಮಾರಿ ಜಿಲ್ಲಾ ಸಂಚಾಲಕಿ ಭಾಗ್ಯ ಪ್ರಾಸ್ತಾವಿಕವಾಗಿ ಮಾತನಾಡಿ 1936 ರಲ್ಲಿ ದಾದಿಯವರು ಸಂಸ್ಥೆಗೆ ಪಾದಾರ್ಪಣೆ ಮಾಡಿ ಸಾಮಾಜಿಕ ಚಟುವಟಿಕೆ ಮುಖೇನಾ ದೇಶ, ವಿದೇಶಗಳಲ್ಲಿ ಹೆಸರು ಸಂಪಾದಿಸಿದ್ದಾರೆ. ಉಳ್ಳವರ ಕುಟುಂಬಕ್ಕೆ ಸೇರಿದ ದಾದಿಯವರು ಜನಸ್ನೇಹಿ ಕಾರ್ಯ ಆಯ್ಕೆಮಾಡಿಕೊಂಡು ಮುನ್ನಡೆದವರು ಎಂದರು.ಭಾರತ ಮತ್ತು ನೇಪಾಳ ರಾಷ್ಟ್ರಗಳಲ್ಲಿ ಕಳೆದ 2 ದಿನಗಳಿಂದ ಬ್ರಹ್ಮಕುಮಾರೀಸ್ ಸಂಸ್ಥೆ ಬೃಹತ್ ರಕ್ತದಾನ ಶಿಬಿರವನ್ನು ಎಲ್ಲೆಡೆ ಆಯೋಜಿಸಿದೆ. ಇದಕ್ಕೆ ಮೂಲ ಪ್ರೇರಣೆ ಡಾ. ಪ್ರಕಾಶ್‌ಮಣಿಜೀಯವರ ಅಮೂಲ್ಯ ಸೇವೆ. ಹೀಗಾಗಿ ಅವರ ಆದರ್ಶ ಅಳವಡಿಸಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸೂಪರಿಟೆಂಡೆಂಟ್ ಡಾ. ಚಂದ್ರಶೇಖರ್ ಮಾತನಾಡಿ, ಅಪಘಾತ ಅಥವಾ ಡೆಂಘೀ ಪ್ರಕರಣಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದೆ. ಆ ನಿಟ್ಟಿನಲ್ಲಿ ಬ್ರಹ್ಮಕುಮಾರೀಸ್ ಸಂಸ್ಥೆ ರಕ್ತದಾನ ಶಿಬಿರದ ಮೂಲಕ ಸಾಮಾಜಿಕ ಚಟುವಟಿಕೆಗೆ ಮುಂದಾಗಿ ಜೀವ ಉಳಿಸುವಂಥ ಸತ್ಕಾರ್ಯ ಮಾಡಿರುವುದು ಉತ್ತಮ ಕೆಲಸ ಎಂದು ಹೇಳಿದರು.18 ವರ್ಷ ಮೇಲ್ಪಟ್ಟ ಆರೋಗ್ಯವಂತರು ರಕ್ತದಾನದಲ್ಲಿ ಪಾಲ್ಗೊಳ್ಳಬಹುದು. ಕನಿಷ್ಠ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಿದಲ್ಲಿ ಶರೀರದಲ್ಲಿ ಹೊಸ ರಕ್ತ ಉತ್ಪತ್ತಿಯಾಗಿ ಮಾರಕ ಕಾಯಿಲೆ ತಡೆಗಟ್ಟಬಹುದು. ಯಾವುದೇ ವ್ಯಕ್ತಿ ರಕ್ತ ಸಂಪೂರ್ಣ ವಾಗಿ ಪರಿಶೀಲಿಸಿದ ನಂತರವೇ ಬೇರೆ ವ್ಯಕ್ತಿಗೆ ನೀಡಲಾಗುವುದು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಶೀಲಾ ದಿನೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರ ಮ್ ಅಮಟೆ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್, ಹೋಲಿಕ್ರಾಸ್ ಆಸ್ಪತ್ರೆ ಆಡಳಿತಾಧಿಕಾರಿ ಲೂಸೀ ಜಾನ್, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಪ್ರದೀಪ್‌ಗೌಡ, ಜೆಸಿಐ ಅಧ್ಯಕ್ಷ ಪ್ರದೀಪ್ ಕೋಟೆ, ಎನ್‌ಐಎಂಎ ರಾಜ್ಯ ಉಪಾಧ್ಯಕ್ಷ ಡಾ. ಕೆ.ಎ.ಅನೀತ್‌ಕುಮಾರ್, ಟೌನ್ ಮಹಿಳಾ ಸಮಾಜ ಅಧ್ಯಕ್ಷೆ ನೇತ್ರಾ ವೆಂಕಟೇಶ್, ಅಣುವೃತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ, ಲಯನ್ಸ್ ಕಾರ್ಯದರ್ಶಿ ಗೋಪಿಕೃಷ್ಣ, ಕನ್ನಡಸೇನೆ ಮಹಿಳಾ ಅಧ್ಯಕ್ಷೆ ಚೈತ್ರಗೌಡ ಉಪಸ್ಥಿತರಿದ್ದರು. 24 ಕೆಸಿಕೆಎಂ 1ಚಿಕ್ಕಮಗಳೂರಿನ ರೋಟರಿ ಸಭಾಂಗಣದಲ್ಲಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾದಿ ಡಾ. ಪ್ರಕಾಶ್‌ಮಣಿಜೀಯವರ ಪುಣ್ಯ ಸ್ಮೃತಿ ದಿನದ ಪ್ರಯುಕ್ತ ಭಾನುವಾರ ಏರ್ಪಡಿಸಿದ್ದ ಬೃಹತ್ ರಕ್ತದಾನ ಅಭಿಯಾನವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು.
----------------------------------