ಒಳ ಮೀಸಲಾತಿ ಜಾರಿಯಾಗದಿದ್ದರೆ ರಕ್ತಪಾತ

KannadaprabhaNewsNetwork |  
Published : Aug 17, 2025, 04:02 AM IST
 | Kannada Prabha

ಸಾರಾಂಶ

ತುಳಿತಕ್ಕೆ ಒಳಗಾದವರು ಉಳಿದವರ ಜೊತೆ ಪೈಪೋಟಿ ಮಾಡಲಾಗದ ಕಾರಣಕ್ಕೆ ಒಳ ಮೀಸಲಾತಿ ಅನಿವಾರ್ಯ

ಕನ್ನಡಪ್ರಭ ವಾರ್ತೆ ವಿಜಯಪುರ

ಒಳ ಮೀಸಲಾತಿ ವರದಿ ಆ.19ರೊಳಗಾಗಿ ಜಾರಿಯಾಗದಿದ್ದರೆ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಆಡಳಿತ ಮಾಡಲು ಬಿಡುವುದಿಲ್ಲ, ರಕ್ತಪಾತವಾಗಲಿದೆ ಎಂದು ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.19ರೊಳಗಾಗಿ ಒಳಮೀಸಲಾತಿ ವರದಿ ಜಾರಿಯಾಗದಿದ್ದರೆ ಕಾಂಗ್ರೆಸ್ ನಾಯಕರನ್ನು ರಸ್ತೆ ಮೇಲೆ ತಿರುಗಾಡಲು ಬಿಡೋದಿಲ್ಲ. ನಾವು ಯಾವುದೇ ಸಮಾಜದ ವಿರುದ್ಧವಲ್ಲ. ನಮ್ಮ ಹಕ್ಕು ನಮಗೆ ಕೊಡಿ. ನುಡಿದಂತೆ ನಡೆದ ಸರ್ಕಾರ ಅಂತಿರಾ. ಆದರೆ ಒಳ ಮೀಸಲಾತಿ ಏಕೆ ಜಾರಿ ಮಾಡುತ್ತಿಲ್ಲ? ನುಡಿದಂತೆ ನಡೆದ ಸರ್ಕಾರದ ನಾಲಿಗೆ ಕತ್ತರಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಮಾತೆತ್ತಿದರೆ ದಲಿತ ನಾಯಕ ಎನ್ನುವ ಮಲ್ಲಿಕಾರ್ಜುನ ಖರ್ಗೆ, ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಬೀಗುವ ಸಿಎಂ ಸಿದ್ದರಾಮಯ್ಯ ತಮ್ಮದೇ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ನೀಡಿದ ಭರವಸೆ ಈಡೇರಿಸುತ್ತಿಲ್ಲವೇಕೆ? ವರದಿಯಲ್ಲಿ ಲೋಪ ದೋಷಗಳಿದ್ದರೆ ಸರಿಪಡಿಸಲು ಅವಕಾಶವಿದ್ದರೂ ಸರ್ಕಾರ ಸರಿಪಡಿಸಿ ಜಾರಿಗೊಳಿಸುತ್ತಿಲ್ಲವೇಕೆ?. ಮುಖ್ಯಮಂತ್ರಿಗಳು ನೇಮಕ ಮಾಡಿದ ಆಯೋಗಗಳ ವರದಿಯನ್ನು ಜಾರಿ ಮಾಡಲು ವಿಳಂಬ ಮಾಡುತ್ತಿರುವುದೇಕೆ?. ಸರ್ಕಾರ ಯಾವುದೇ ರೀತಿಯಲ್ಲಿ ವರದಿ ಅನುಷ್ಠಾನಗೊಳಿಸಿದರೂ ನಮ್ಮ ಸಮ್ಮತಿಯಿದೆ. ಮೊದಲು ವರದಿ ಅನುಷ್ಠಾನಗೊಳ್ಳಲಿ ಎಂದು ಆಗ್ರಹಿಸಿದರು.

ಹಾವನೂರ ಆಯೋಗ, ಸದಾಶಿವ ಆಯೋಗ, ಕಾಂತರಾಜ ಆಯೋಗ, ನಾಗಮೋಹನದಾಸ ನೇತೃತ್ವದ ಆಯೋಗಗಳೆಲ್ಲವನ್ನೂ ಕಾಂಗ್ರೆಸ್ ನೇಮಕ ಮಾಡಿರುವಂತಹದ್ದು. ಅದರಲ್ಲಿ ಜಾತಿ ವಿವರಗಳಿವೆ. ಎಲ್ಲ ಮಾಹಿತಿ ಕೈಯಲ್ಲೇ ಇದೆ. ಅದರಲ್ಲಿ ಯಾವುದೇ ವರದಿ ಜಾರಿ ಮಾಡಿದರೂ ಸಮ್ಮತಿಯಿದೆ. ಇಲ್ಲವಾದರೆ ಬಿಜೆಪಿ ಆಡಳಿತಾವಧಿಯಲ್ಲಿ ಸಲ್ಲಿಸಿದ ಮಾಧುಸ್ವಾಮಿ ವರದಿಯಾದರೂ ಜಾರಿಗೊಳಿಸಿ. ಅನವಶ್ಯಕವಾಗಿ ವಿಳಂಬ ಮಾಡಿ ದಲಿತರಲ್ಲಿ ಜಗಳ ಹಚ್ಚುವ ಕೆಲಸ ಬಿಡಿ ಎಂದು ದೂರಿದರು.

ಒಳ ಮೀಸಲಾತಿಗಾಗಿ ಆಂಧ್ರದಿಂದ ಮಾದಿಗರ ಮೀಸಲಾತಿ ಹೋರಾಟ ಆರಂಭವಾಯಿತು. ಈ ಹೋರಾಟ ರಾಜ್ಯಕ್ಕೂ ವಿಸ್ತರಿಸಿತು. ಆಗ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ ಅವರು 2004ರಲ್ಲಿ ನ್ಯಾ.ಸದಾಶಿವ ಆಯೋಗವನ್ನೇನೋ ರಚಿಸಿದರು. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಅಧಿಕಾರವಧಿಯಲ್ಲಿ ನ್ಯಾ.ಸದಾಶಿವ ಅವರು ಆಯೋಗಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಸ್ವತಃ ಯಡಿಯೂರಪ್ಪ ಅವರ ಬಳಿ ಹೋಗಿ ₹15 ಕೋಟಿಗೆ ಬೇಡಿಕೆ ಇರಿಸಿದ್ದೆ. ಆಗ ಯಡಿಯೂರಪ್ಪ ₹13 ಕೋಟಿ ನೀಡಿದರು. ಸದಾಶಿವ ಆಯೋಗವು ರಾಜ್ಯದ 29 ಸಾವಿರ ಹಳ್ಳಿಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡಿ 2009ರಲ್ಲಿ ವರದಿ ನೀಡಿತು. ಆಗ ಬಿಜೆಪಿಗೆ ಬಹುಮತ ಇಲ್ಲದ ಕಾರಣ ವರದಿ ಸ್ವೀಕರಿಸಲು ಆಗಲಿಲ್ಲ. ಯಾವುದೇ ಪಕ್ಷ ಅಧಿಕಾರ ಕಳೆದುಕೊಳ್ಳಲು ಇಷ್ಟಪಡದ ಕಾರಣ ಆ ವರದಿ ನನೆಗುದಿಗೆ ಬಿದ್ದಿತು ಎಂದು ತಿಳಿಸಿದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್ ಒಳ ಮೀಸಲಾತಿ ಕೊಡುವುದಾಗಿ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ನಮೂದಿಸಿತು. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿದ್ದರೂ ಒಳ ಮೀಸಲಾತಿ ಜಾರಿಗೊಳಿಸಲಿಲ್ಲ. ಅನಧಿಕೃತವಾಗಿ ಅಂಕಿ-ಸಂಖ್ಯೆ ಬಿಡುಗಡೆಗೊಳಿಸಿ ಜಗಳ ಹಚ್ಚುವ ಕೆಲಸ ಮಾಡಿದರು. ಬಳಿಕ ಕೊರಮ, ಕೊರಚದವರಿಗೆ ಮೀಸಲಾತಿ ಕಸಿಯುವ ಹುನ್ನಾರ ನಡೆದಿದೆ ಎಂದು ಬಿಜೆಪಿ ವಿರುದ್ಧ ಹುನ್ನಾರ ನಡೆಸಿದರು. ಹೀಗಾಗಿ ಬಸವರಾಜ ಬೊಮ್ಮಾಯಿ ಅವಧಿಯಲ್ಲಿ ಮಾಧುಸ್ವಾಮಿ ನೇತೃತ್ವದಲ್ಲಿ ಕಮಿಟಿ ರಚಿಸಿ ಎಲ್ಲ ಜಾತಿಯವರನ್ನು ಸದಸ್ಯರನ್ನಾಗಿಸಲಾಯಿತು. ಆ ಕಮಿಟಿ ಎಲ್ಲ ವರ್ಗದ ಜನರ ಅಭಿಪ್ರಾಯ ಪಡೆದು 2023 ಮಾರ್ಚ್‌ನಲ್ಲಿ ವರದಿ ಬಿಡುಗಡೆ ಮಾಡಿದಾಗ ಲಂಬಾಣಿ ಹಾಗೂ ಭೋವಿ ಜನಾಂಗದವರನ್ನು ಎತ್ತಿ ಕಟ್ಟಿ ಯಡಿಯೂರಪ್ಪ ಅವರ ಮನೆಗೆ ಕಲ್ಲು ಹೊಡಿಸಿದರು. ಹೀಗಾಗಿ ಅದಷ್ಟಕ್ಕೇ ಉಳಿಯಿತು. ಆರು ಇದ್ದ ಜಾತಿ 101 ಆದರೂ ನಾವೆಲ್ಲರನ್ನೂ ಒಪ್ಪಿಕೊಂಡೇ ಮುನ್ನಡೆದಿದ್ದೇವೆ. ಆದರೆ ಕಾಂಗ್ರೆಸ್ ಮಾತ್ರ ಎಸ್‌ಸಿ ಜನಾಂಗದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತದೆ ಎಂದು ಹೇಳಿದರು.

ದೇಶದಲ್ಲಿ ಆರಂಭದಲ್ಲಿ ಪರಿಶಿಷ್ಟ ಜಾತಿಯಲ್ಲಿ 6 ಹಾಗೂ ಪರಿಶಿಷ್ಟ ಪಂಗಡದಲ್ಲಿ 6 ಜಾತಿಗಳಿದ್ದವು. ಇದೀಗ ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳು ಹಾಗೂ ಪರಿಶಿಷ್ಟ ಪಂಗಡದಲ್ಲಿ 56 ಜಾತಿಗಳನ್ನು ಸೇರ್ಪಡೆಗೊಳಿಸಲಾಗಿದೆ. ಪರಿಣಾಮ ತುಳಿತಕ್ಕೆ ಒಳಗಾದವರು ಉಳಿದವರ ಜೊತೆ ಪೈಪೋಟಿ ಮಾಡಲಾಗದ ಕಾರಣಕ್ಕೆ ಒಳ ಮೀಸಲಾತಿ ಅನಿವಾರ್ಯವಾಗಿದೆ ಎಂದು ಗೋವಿಂದ ಕಾರಜೋಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ
ವೃದ್ಧೆ ಮನೆಯಲ್ಲಿ ಚಿನ್ನ ಕದ್ದಿದ್ದಮಹಿಳಾ ಕೇರ್‌ಟೇಕರ್‌ ಸೆರೆ