ಕಾವೇರಿ ನೀರು ಕಳ್ಳತನ ಪತ್ತೆಗೆ ಬ್ಲೂ ಪೋರ್ಸ್‌

KannadaprabhaNewsNetwork |  
Published : Jun 01, 2025, 04:47 AM ISTUpdated : Jun 01, 2025, 06:57 AM IST
Cauvery River

ಸಾರಾಂಶ

ಕಾವೇರಿ ನೀರಿನ ಕಳ್ಳತನ, ಅನಧಿಕೃತವಾಗಿ ಕೊಳಚೆ ಹಾಗೂ ಮಳೆ ನೀರನ್ನು ಚರಂಡಿ (ಸ್ಯಾನಿಟರಿ) ಕೊಳವೆಗೆ ಹರಿಸುವವರನ್ನು ಪತ್ತೆಹಚ್ಚಲು ಬೆಂಗಳೂರು ಜಲಮಂಡಳಿಯು ‘ಬ್ಲೂ ಫೋರ್ಸ್‌’ ಎಂಬ ಪಡೆ ಕಟ್ಟುತ್ತಿದೆ.

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು : ಕಾವೇರಿ ನೀರಿನ ಕಳ್ಳತನ, ಅನಧಿಕೃತವಾಗಿ ಕೊಳಚೆ ಹಾಗೂ ಮಳೆ ನೀರನ್ನು ಚರಂಡಿ (ಸ್ಯಾನಿಟರಿ) ಕೊಳವೆಗೆ ಹರಿಸುವವರನ್ನು ಪತ್ತೆಹಚ್ಚಲು ಬೆಂಗಳೂರು ಜಲಮಂಡಳಿಯು ‘ಬ್ಲೂ ಫೋರ್ಸ್‌’ ಎಂಬ ಪಡೆ ಕಟ್ಟುತ್ತಿದೆ.

ಕಾವೇರಿ 5ನೇ ಹಂತ ಸೇರಿದಂತೆ ಪ್ರತಿದಿನ ನಗರಕ್ಕೆ 2,225 ಎಂಎಲ್‌ಡಿ ಕಾವೇರಿ ನೀರನ್ನು ಪೂರೈಕೆ ಮಾಡುತ್ತಿದ್ದು, ಸುಮಾರು 11 ಲಕ್ಷಕ್ಕೂ ಅಧಿಕ ನೀರು ಪೂರೈಕೆಯ ಅಧಿಕೃತ ಸಂಪರ್ಕ ಹೊಂದಿದೆ. ಆದರೆ, ಕಾವೇರಿ ನೀರಿನ ಕಳ್ಳತನ, ತ್ಯಾಜ್ಯ ನೀರನ್ನು ಅನಧಿಕೃತವಾಗಿ ಸ್ಯಾನಿಟರಿ ಕೊಳವೆಗೆ ಹರಿಸುತ್ತಿರುವುದರಿಂದ ಬೆಂಗಳೂರು ಜಲಮಂಡಳಿಯು ಮಾಸಿಕ ಕೋಟ್ಯಾಂತರ ರು. ನಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಜಲಮಂಡಳಿಯು ಬ್ಲೂ ಪೋರ್ಸ್‌ ಎಂಬ ಪಡೆ ಸ್ಥಾಪಿಸುವುದಕ್ಕೆ ತಯಾರಿ ಮಾಡಿಕೊಂಡಿದೆ.

ಹೇಗೆ ಇರುತ್ತೆ ಈ ಬ್ಲೂಫೋರ್ಸ್‌?:

ಬೆಂಗಳೂರು ಜಲಮಂಡಳಿಯಲ್ಲಿ 43 ಉಪ ವಿಭಾಗಗಳಿದ್ದು, ಉಪ ವಿಭಾಗದ ಮಟ್ಟದಲ್ಲಿ ತಲಾ ಒಂದು ಬ್ಲೂ ಪೋರ್ಸ್‌ ರಚನೆ ಮಾಡಲಾಗುತ್ತಿದೆ. ಪ್ರತಿ ತಂಡದಲ್ಲಿ ತಲಾ ಒಬ್ಬ ಮಾಜಿ ಸೈನಿಕ, ಅವರೊಂದಿಗೆ ಜಲಮಂಡಳಿಯ ಮೂರು ಮಂದಿ ಅಧಿಕಾರಿ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ತಂಡಗಳು ಆಯಾ ಉಪ ವಿಭಾಗ ಮಟ್ಟದಲ್ಲಿ ನಿರಂತರವಾಗಿ ಪರಿಶೀಲನೆ ನಡೆಸಿ ಅನಧಿಕೃತ ನೀರು, ತ್ಯಾಜ್ಯ ಸಂಪರ್ಕ ಪತ್ತೆ ಮಾಡುವ ಕಾರ್ಯ ಮಾಡಬೇಕಾಗಲಿದೆ.

ಪಡೆಯ ಕಾರ್ಯ ಏನು?:

ಪ್ರತಿ ಉಪ ವಿಭಾಗದ ಮಟ್ಟದಲ್ಲಿ ಸುಮಾರು 30 ಸಾವಿರ ಸಂಪರ್ಕಗಳಿವೆ. ಎಷ್ಟು ಕಟ್ಟಡಗಳು ನೀರಿನ ಸಂಪರ್ಕ ಪಡೆದುಕೊಂಡಿವೆ. ಇನ್ನೂ ಎಷ್ಟು ಕಟ್ಟಡ ನೀರಿನ ಸಂಪರ್ಕ ಪಡೆದುಕೊಂಡಿಲ್ಲ. ಆ ಕಟ್ಟಡಗಳ ನೀರಿನ ಮೂಲ ಏನು?, ಸ್ಯಾನಿಟರಿ ನೀರನ್ನು ಎಲ್ಲಿ ಹರಿಸಲಾಗುತ್ತಿದೆ ಎಂಬುದನ್ನು ಪತ್ತೆ ಮಾಡುವ ಕಾರ್ಯವನ್ನು ನಿರ್ವಹಿಸಲಿದ್ದಾರೆ. ಒಂದು ವೇಳೆ ಅನಧಿಕೃತವಾಗಿ ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ತ್ಯಾಜ್ಯ ನೀರನ್ನು ಹರಿಸುವುದು ಕಂಡು ಬಂದರೆ ದಂಡ ವಿಧಿಸುವ ಕಾರ್ಯ ಮಾಡಲಿದ್ದಾರೆ. ಜತೆಗೆ, ಅಧಿಕೃತವಾಗಿ ನೀರಿನ ಸಂಪರ್ಕ ಪಡೆದುಕೊಂಡ ಕಟ್ಟಡಗಳಲ್ಲಿಯೂ ಜಲಮಂಡಳಿಯ ಮೀಟರ್‌ಗಳನ್ನು ಬೈಪಾಸ್‌ ಮಾಡಿ ನೀರಿನ ಕಳ್ಳತನ ಮಾಡಲಾಗುತ್ತಿದೆಯಾ ಎಂಬುದನ್ನೂ ಪರಿಶೀಲನೆ ಮಾಡಲಿದ್ದಾರೆ.

ಲೆಕ್ಕಕ್ಕೆ ದೊರೆಯ ನೀರಿನ ಪ್ರಮಾಣ ಕಡಿಮೆ:

ನಗರಕ್ಕೆ ಪೂರೈಕೆ ಆಗುತ್ತಿರುವ ನೀರಿನಲ್ಲಿ ಸುಮಾರು ಶೇ.28 ರಷ್ಟು ಕಾವೇರಿ ನೀರು ಜಲಮಂಡಳಿಯ ಲೆಕ್ಕಕ್ಕೆ ದೊರೆಯುತ್ತಿಲ್ಲ. ಹಳೇ ಕೊಳವೆಗಳಲ್ಲಿ ಸೋರಿಕೆಯಿಂದ ಪ್ರಮಾಣವೂ ಇದೆ. ಜತೆಗೆ, ನೀರಿನ ಕಳ್ಳತನದಿಂದಲೂ ಸೋರಿಕೆ ಆಗುತ್ತಿದೆ. ನಿರಂತರ ಪರೀಶಿಲನೆಯಿಂದ ತಡೆಯ ಬಹುದಾಗಿದೆ. ಆ ಕಾರ್ಯಕ್ಕೆ ಬ್ಲೂ ಪೋರ್ಸ್‌ ಸಹಕಾರಿಯಾಗಲಿದೆ. ಇದರಿಂದ ಲೆಕ್ಕಕ್ಕೆ ದೊರೆಯ ನೀರಿನ ಪ್ರಮಾಣದಲ್ಲಿಯೂ ಇಳಿಕೆ ಆಗಲಿದೆ ಎಂಬುದು ಜಲಮಂಡಳಿಯ ಲೆಕ್ಕಚಾರವಾಗಿದೆ.

ಮಾಸಿಕ ₹50 ಲಕ್ಷ ವೆಚ್ಚ

ಬ್ಲೂ ಫೋರ್ಸ್‌ ತಂಡದಲ್ಲಿನ ಸಿಬ್ಬಂದಿ ವೇತನ, ಬಳಕೆ ಮಾಡುವ ವಾಹನದ ಇಂಧನ ವೆಚ್ಚ ಸೇರಿದಂತೆ ಮಾಸಿಕ ಸುಮಾರು ₹50 ಲಕ್ಷ ವೆಚ್ಚವಾಗಲಿದೆ ಎಂದು ಜಲಮಂಡಳಿಯ ಅಧಿಕಾರಿಗಳು ಲೆಕ್ಕಚಾರ ಹಾಕಿದ್ದಾರೆ.

ಮಳೆ ನೀರನ್ನು ಕೊಳವೆಗೆ ಹರಿಸಿದರೆ ₹5000 ದಂಡ

ನಗರದಲ್ಲಿ ಮಳೆಯ ನೀರನ್ನು ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ಹರಿಸುತ್ತಿರುವುದರಿಂದ ಮಳೆ ಬಂದಾಗ ಮ್ಯಾನ್‌ ಹೋಲ್‌ಗಳು ಉಕ್ಕುತ್ತಿರುವುದರಿಂದ ಇಡೀ ರಸ್ತೆ ಗೊಬ್ಬು ವಾಸನೆ ಉಂಟಾಗುತ್ತಿದೆ. ಈ ಕುರಿತು ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ, ಮಳೆ ನೀರನ್ನು ಸ್ಯಾನಿಟರಿ ಕೊಳವೆ ಹರಿಸುವವರಿಗೆ ₹5 ಸಾವಿರ ದಂಡ ವಿಧಿಸುವುದಕ್ಕೆ ತೀರ್ಮಾನಿಸಲಾಗಿದ್ದು, ಒಂದೆರಡು ದಿನದಲ್ಲಿ ಈ ಕುರಿತು ಜಲಮಂಡಳಿ ಅಧಿಕೃತ ಆದೇಶ ಹೊರಡಿಸಲಿದೆ.

16 ಸಾವಿರ ಅಕ್ರಮ ಸಂಪರ್ಕ ಪತ್ತೆಜಲಮಂಡಳಿಯು ಹೊಂದಿರುವ ಸಂಪರ್ಕಗಳ ಪೈಕಿ 3.16 ಲಕ್ಷ ಸಂಪರ್ಕಗಳನ್ನು ಪರಿಶೀಲನೆ ಮಾಡಲಾಗಿದ್ದು, ಈ ಪೈಕಿ 16 ಸಾವಿರಕ್ಕೂ ಅಧಿಕ ಅನಧಿಕೃತವಾಗಿ ತ್ಯಾಜ್ಯ ನೀರನ್ನು ಜಲಮಂಡಳಿಯ ಸ್ಯಾನಿಟರಿ ಕೊಳವೆಗೆ ಹರಿಸುವುದನ್ನು ಪತ್ತೆ ಮಾಡಲಾಗಿದೆ. ಈ ಪೈಕಿ 11,877ಕ್ಕೆ ನೋಟಿಸ್‌ ನೀಡಲಾಗಿದ್ದು, 8902 ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

PREV
Read more Articles on

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ