ಬಿಎಂಟಿಸಿ ಬಸ್‌ಗೆ ಬೆಂಕಿಗೆ ಬಾಂಬ್‌ಕಾರಣ: ಜಾಲತಾಣದಲ್ಲಿ ವೈರಲ್‌!

KannadaprabhaNewsNetwork |  
Published : Jul 14, 2024, 01:38 AM IST
ಬೆಂಕಿಗೆ ಆಹುತಿ ಆಗಿದ್ದ ಬಿಎಂಟಿಸಿ ಬಸ್‌. | Kannada Prabha

ಸಾರಾಂಶ

ನಗರದ ಅನಿಲ್‌ ಕುಂಬ್ಳೆ ವೃತ್ತದಲ್ಲಿ ನಡೆದ ಬಿಎಂಟಿಸಿ ಬಸ್‌ ಬೆಂಕಿ ಅವಘಡಕ್ಕೆ ಮ್ಯಾಗ್ನೆಟಿಕ್‌ ಬಾಂಬ್‌ ಸ್ಫೋಟವೇ ಕಾರಣ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ನಗರದ ಅನಿಲ್‌ ಕುಂಬ್ಳೆ ವೃತ್ತದಲ್ಲಿ ನಡೆದ ಬಿಎಂಟಿಸಿ ಬಸ್‌ ಬೆಂಕಿ ಅವಘಡಕ್ಕೆ ಮ್ಯಾಗ್ನೆಟಿಕ್‌ ಬಾಂಬ್‌ ಸ್ಫೋಟವೇ ಕಾರಣ ಎಂದು ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆ.

ಪಾಕಿಸ್ತಾನ್‌ ಫಸ್ಟ್‌ ಎಂಬ ‘ಎಕ್ಸ್‌’ ಖಾತೆಯಲ್ಲಿ ಬಿಎಂಟಿಸಿ ಬಸ್‌ ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವ ವಿಡಿಯೋ ಹಂಚಿಕೊಂಡು ‘ಭಾರತದ ಬೆಂಗಳೂರು ನಗರದಲ್ಲಿ ಬಸ್‌ವೊಂದನ್ನು ಗುರಿಯಾಗಿಸಿ ಮ್ಯಾಗ್ನೆಟಿಕ್‌ ಬಾಂಬ್‌ ಹಾಕಲಾಗಿದೆ. ಈ ಬಸ್‌ನಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ(ಡಿಆರ್‌ಡಿಒ) ಮೂರು ಎಂಜಿನಿಯರ್‌ಗಳು ಪ್ರಯಾಣಿಸುತ್ತಿದ್ದು, ಘಟನೆಯಲ್ಲಿ ಈ ಮೂವರೂ ಮೃತಪಟ್ಟಿರುವ ಸಾಧ್ಯತೆಯಿದೆ. ಈ ಘಟನೆಯೂ ಡಿಆರ್‌ಡಿಒದ ಎಚ್‌ಎಎಲ್ ತೇಜಸ್‌ ವಿಮಾನ ಪರೀಕ್ಷಾ ಕೇಂದ್ರದ ಪಶ್ಚಿಮಕ್ಕೆ 4 ಕಿ.ಮೀ. ದೂರದಲ್ಲಿ ನಡೆದಿದೆ’ ಎಂದು ಬರೆದುಕೊಳ್ಳಲಾಗಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.ಸುಳ್ಳು ಸುದ್ದಿ: ಡಿಸಿಪಿ ಶೇಖರ್‌

ವೈರಲ್‌ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಗರ ಕೇಂದ್ರ ವಿಭಾಗದ ಡಿಸಿಪಿ ಶೇಖರ್‌, ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಮ್ಯಾಗ್ನೆಟಿಂಗ್‌ ಬಾಂಬ್ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಹಾಗೂ ಆಧಾರರಹಿತ ಸುದ್ದಿ ಹರಡಲಾಗಿದೆ, ವಾಸ್ತವದಲ್ಲಿ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಎಂಜಿನ್‌ನಲ್ಲಿ ಉಂಟಾದ ಅತಿಯಾದ ಶಾಖ ಕಾರಣ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದಿದ್ದಾರೆ.

ಸುಟ್ಟು ಭಸ್ಮವಾಗಿದ್ದ ಬಸ್‌

ಎಂ.ಜಿ.ರಸ್ತೆಯ ಅನಿಲ್‌ ಕುಂಬ್ಳೆ ವೃತ್ತದಲ್ಲಿ ಜು.9ರಂದು ಬೆಳಗ್ಗೆ ಸುಮಾರು 8.40ಕ್ಕೆ ಚಲಿಸುತ್ತಿದ್ದ ಕೆಎ 57 ಎಫ್‌ 1232 ನೋಂದಣಿ ಸಂಖ್ಯೆಯ ಬಿಎಂಟಿಸಿ ಬಸ್‌ನ ಎಂಜಿನ್‌ನಲ್ಲಿ ದಿಢೀರ್‌ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ ಮೆರೆದು ಬಸ್‌ ನಿಲ್ಲಿಸಿ, ಬಸ್‌ನಲ್ಲಿದ್ದ 30 ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ