ಹುಬ್ಬಳ್ಳಿ:
ಮುಡಾ ಹಗರಣದ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಡಲೇಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ನೇರವಾಗಿ ಸಿದ್ದರಾಮಯ್ಯ ಇದ್ದಾರೆ. ವಿಜಯನಗರದಲ್ಲಿ ನಿಮಗೆ ಸೈಟ್ ಯಾಕೆ ಕೊಟ್ಟರು. 2013ರ ಚುನಾವಣೆ ಅಫಿಡ್‌ವಿಟ್‌ನಲ್ಲಿ ಸಿದ್ದರಾಮಯ್ಯ ಮಾಹಿತಿ ಕೊಟ್ಟಿಲ್ಲ. ತಮ್ಮ ಪ್ರಭಾವ ಬಳಸಿ 14 ಸೈಟ್ ಹೊಡೆದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಕೊಟ್ಟರು ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ನೀವು ಬೇಡವೆಂದು ಅನ್ನಬೇಕಿತ್ತು. ಯಾಕೆ ತೆಗೆದುಕೊಂಡರಿ ಎಂದು ಪ್ರಶ್ನಿಸಿದ ಜೋಶಿ, ಬಿಜೆಪಿಯವರಿದ್ದಾರೆ ಎಂದರೆ ಅವರ ಮೇಲೂ ಕ್ರಮವಾಗಲಿ. ನೀವು ಏನೂ ಮಾಡಿಲ್ಲ ಅಂದರೆ ಸಿಬಿಐ ತನಿಖೆಗೆ ಒಪ್ಪಿಸಲು ಏಕೆ ಭಯ. ಸಿಬಿಐ ತನಿಖೆಗೊಪ್ಪಿಸಿ ಎಂದು ಆಗ್ರಹಿಸಿದರು.100 ಪರ್ಸೆಂಟ್ ಸರ್ಕಾರ:
ರಾಜ್ಯದಲ್ಲಿ ಇರುವುದು ನೂರು ಪರ್ಸೆಂಟ್ ಭ್ರಷ್ಟ ಸರ್ಕಾರ. ಸಿದ್ದರಾಮಯ್ಯ ಸರ್ಕಾರ ಪರಮ ಕಡುಭ್ರಷ್ಟ ಸರ್ಕಾರ. ಒಂದುವರೆ ವರ್ಷದಲ್ಲಿ ಸರ್ಕಾರ ಭಯಂಕರ ಭ್ರಷ್ಟಾಚಾರ ಶುರು ಮಾಡಿದೆ. ಸಾವಿರಾರು ಕೋಟಿ ಹಣ ಸಂಗ್ರಹ ಮಾಡಿ ತೆಲಂಗಾಣಕ್ಕೆ ಕೊಟ್ಟಿದೆ. ಈ ಕುರಿತು ಹೇಳಿಕೆ ನೀಡಿದಾಗ ಕಾಂಗ್ರೆಸ್ ಆಕ್ಷೇಪಿಸಿತ್ತು. ಒಂದು ಸಾವಿರ ಕೋಟಿ ಹಣ ಸಂಗ್ರಹ ಆಗಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದಕ್ಕೆ ಕಾಂಗ್ರೆಸ್ ನಾಯಕರು ತೀವೃ ಆಕ್ಷೇಪ ವ್ಯಕ್ತಪಡಿಸಿದ್ದರು. ವಾಲ್ಮೀಕಿ ನಿಗಮದ ಹಗರಣ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರಗೆ ಗೊತ್ತಿದ್ದೆ ಮಾಡಿದ್ದು ಎಂದು ಆರೋಪಿಸಿದರು.ಯಾವುದೇ ಆರೋಪ ಇಲ್ಲದೆ ನಮ್ಮ ಮೇಲೆ 40 ಪರ್ಸೆಂಟ್ ಕಮೀಷನ್ ಅರೋಪ ಮಾಡಿದ್ದರು. ಇದು 100 ಪರ್ಸೆಂಟ್ ಭ್ರಷ್ಟ ಸರ್ಕಾರ. ಈ ಬಗ್ಗೆ ರಾಹುಲ್ ಗಾಂಧಿ ಇವತ್ತಿನವರೆಗೂ ಒಂದೂ ಮಾತನಾಡಿಲ್ಲ. 40 ದಿನ ಆದರೂ ನಾಗೇಂದ್ರಗೆ ನೋಟಿಸ್ ಕೊಟ್ಟಿರಲಿಲ್ಲ. ಇಡಿ ಎಂಟ್ರಿ ಆದಾಗ ನೋಟಿಸ್ ಕೊಟ್ಟಿದ್ದರು. ಐಷಾರಾಮಿ ಹೋಟೆಲ್‌ಗೆ ಕರೆದು ವಿಚಾರಣೆ ಮಾಡುವ ನಾಟಕ ಮಾಡಿದರು. ಐಷಾರಾಮಿ ಹೋಟೆಲ್ ಬಿಲ್ ಕಟ್ಟಿದ್ದು ಕೂಡಾ ಎಸ್ಐಟಿ ಎಂದು ಜೋಶಿ ಆರೋಪಿಸಿದರು.
ಲಾಡ್‌ಗೆ ಟಾಂಗ್:ನರೇಂದ್ರ ಮೋದಿ ಮತ್ತು ಪ್ರಹ್ಲಾದ ಜೋಶಿ ರಾಜೀನಾಮೆ ಕೊಡಬೇಕು ಎಂದು ಸಚಿವ ಸಂತೋಷ ಲಾಡ್ ಹೇಳಿಕೆಗೆ ತಿರುಗೇಟು ನೀಡಿದ ಜೋಶಿ, ಇಂತಹ ಚಿಲ್ಲರೆ, ಅಸಂಬದ್ಧ ಹೇಳಿಕೆಗೆ ಉತ್ತರ ಕೊಡಲ್ಲ. ಮೋದಿ ಏನ್ ಸೈಟ್ ತೆಗೆದುಕೊಂಡಿದ್ದಾರಾ? ಎಂದರು.