ಒಂದು ಮೊಟ್ಟೆಯ ಬೆಲೆ...!

KannadaprabhaNewsNetwork |  
Published : Jul 16, 2026, 03:15 AM IST
ಹೊರೆ | Kannada Prabha

ಸಾರಾಂಶ

: ಸರ್ಕಾರಿ ಶಾಲೆಗಳ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ಮೊಟ್ಟೆ ವಿತರಣಾ ಯೋಜನೆ ಇದೀಗ ಮೊಟ್ಟೆ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಮಾರ್ಗಸೂಚಿಯಂತೆ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದ್ದು, ಒಂದು ಮೊಟ್ಟೆಗೆ ₹ 5, ಮೊಟ್ಟೆ ಬೇಯಿಸುವ ಇಂದಿನ ವೆಚ್ಚಕ್ಕೆ ₹ 0.50, ಮೊಟ್ಟೆ ಬೇಯಿಸಿ ಸುಲಿಯುವ ಅಡುಗೆ ಸಿಬ್ಬಂದಿ ಗೆ ₹0.30 ಹಾಗೂ ಸಾಗಾಣಿಕೆ ವೆಚ್ಚಕ್ಕೆ ₹0.20 ಸೇರಿ ಒಟ್ಟು ₹6.00 ನಿಗದಿಪಡಿಸಲಾಗಿದೆ.

ಮೌನೇಶ ವಿಶ್ವಕರ್ಮ

ಬಂಟ್ವಾಳ: ಸರ್ಕಾರಿ ಶಾಲೆಗಳ ಮಕ್ಕಳ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶದಿಂದ ಜಾರಿಯಲ್ಲಿರುವ ಮೊಟ್ಟೆ ವಿತರಣಾ ಯೋಜನೆ ಇದೀಗ ಮೊಟ್ಟೆ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರದ ಮಾರ್ಗಸೂಚಿಯಂತೆ ವಾರದಲ್ಲಿ ಆರು ದಿನ ಮಕ್ಕಳಿಗೆ ಮೊಟ್ಟೆ ವಿತರಿಸಲಾಗುತ್ತಿದ್ದು, ಒಂದು ಮೊಟ್ಟೆಗೆ ₹ 5, ಮೊಟ್ಟೆ ಬೇಯಿಸುವ ಇಂದಿನ ವೆಚ್ಚಕ್ಕೆ ₹ 0.50, ಮೊಟ್ಟೆ ಬೇಯಿಸಿ ಸುಲಿಯುವ ಅಡುಗೆ ಸಿಬ್ಬಂದಿ ಗೆ ₹0.30 ಹಾಗೂ ಸಾಗಾಣಿಕೆ ವೆಚ್ಚಕ್ಕೆ ₹0.20 ಸೇರಿ ಒಟ್ಟು ₹6.00 ನಿಗದಿಪಡಿಸಲಾಗಿದೆ.

ಆದರೆ ಪ್ರಸ್ತುತ ಮಾರುಕಟ್ಟೆಯಲ್ಲಿ ಒಂದು ಮೊಟ್ಟೆಯ ಬೆಲೆ ₹ 7.90ರಿಂದ ₹8 ಕ್ಕೆ ತಲುಪಿದೆ. ಹೀಗಾಗಿ ಪ್ರತಿ ಮೊಟ್ಟೆಗೆ ಕನಿಷ್ಠ ₹2ರಿಂದ 3 ರು. ನಷ್ಟು ಹೆಚ್ಚುವರಿ ವೆಚ್ಚವಾಗುತ್ತಿದೆ. ಈ ಹೆಚ್ಚುವರಿ ಮೊತ್ತವನ್ನು ಶಾಲೆಗಳೇ ಭರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಣ್ಣ ಶಾಲೆಗಳ ಸಂಕಷ್ಟ ಇನ್ನಷ್ಟು ಗಂಭೀರವಾಗಿದೆ. 30-40 ಮಕ್ಕಳಿರುವ ಶಾಲೆಗಳಿಗೆ ಮೊಟ್ಟೆ ಪೂರೈಕೆದಾರರು ವಾಹನದಲ್ಲಿ ಮೊಟ್ಟೆ ತಲುಪಿಸುವುದಿಲ್ಲ. ಹೀಗಾಗಿ ಶಿಕ್ಷಕರು ಸ್ಥಳೀಯ ಅಂಗಡಿಗಳಿಂದ ಚಿಲ್ಲರೆ ದರದಲ್ಲಿ ಮೊಟ್ಟೆ ಖರೀದಿಸಬೇಕಾಗುತ್ತದೆ. ಇದರಿಂದ ಅವರಿಗೆ ಪ್ರತಿ ಮೊಟ್ಟೆಗೆ ಇನ್ನಷ್ಟು ಹೆಚ್ಚುವರಿ ವೆಚ್ಚವಾಗುತ್ತಿದೆ.ಇನ್ನೊಂದೆಡೆ, ದೊಡ್ಡ ಶಾಲೆಗಳ ಪರಿಸ್ಥಿತಿಯೂ ಭಿನ್ನವಾಗಿಲ್ಲ. ನೂರಾರು ಅಥವಾ ಸಾವಿರಕ್ಕೂ ಹೆಚ್ಚು ಮೊಟ್ಟೆಗಳನ್ನು ಒಂದೇ ಬಾರಿ ಖರೀದಿಸುವ ಕಾರಣ ಅವರಿಗೆ ಸಗಟು ದರದಲ್ಲಿ ಸುಮಾರು ₹6.50-₹6.60ಕ್ಕೆ ಮೊಟ್ಟೆ ಸಿಗಬಹುದು. ಆದರೂ ಸರ್ಕಾರ ನಿಗದಿಪಡಿಸಿರುವ ₹5ರ ಮೊಟ್ಟೆ ದರಕ್ಕಿಂತ ಇದು ಹೆಚ್ಚಾಗಿರುವುದರಿಂದ ಪ್ರತಿ ಮೊಟ್ಟೆಗೆ ಸುಮಾರು ₹1.50ರಷ್ಟು ಹೆಚ್ಚುವರಿ ವೆಚ್ಚವಾಗುತ್ತದೆ. ಉದಾಹರಣೆಗೆ, ಒಂದು ಶಾಲೆಯಲ್ಲಿ ದಿನಕ್ಕೆ 1,000 ಮೊಟ್ಟೆ ವಿತರಿಸಿದರೆ ದಿನಕ್ಕೆ ಸುಮಾರು ₹1,500, ತಿಂಗಳಿಗೆ ಸುಮಾರು ₹40ಸಾವಿರಕ್ಕೂ ಅಧಿಕ ಹಣವನ್ನು ಭರಿಸಬೇಕಾಗುತ್ತದೆ. ಇದು ಶಾಲೆಗಳು ಹಾಗೂ ಶಿಕ್ಷಕರ ಮೇಲೆ ದೊಡ್ಡ ಆರ್ಥಿಕ ಹೊರೆಯಾಗಿದೆ.ಮಕ್ಕಳಿಗೆ ಯಾವುದೇ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಶಿಕ್ಷಕರು ತಮ್ಮ ಸ್ವಂತ ಹಣವನ್ನೇ ಹಾಕಿ ಯೋಜನೆ ಮುಂದುವರಿಸುತ್ತಿದ್ದಾರೆ. ಆದರೆ ಈ ಪರಿಸ್ಥಿತಿ ದೀರ್ಘಕಾಲ ಮುಂದುವರಿದರೆ ಶಿಕ್ಷಕರಿಗೆ ಆರ್ಥಿಕವಾಗಿ ತೀವ್ರ ಸಂಕಷ್ಟ ಉಂಟಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ಮೊಟ್ಟೆಯ ಅನುದಾನವನ್ನು ಸರ್ಕಾರ ತಕ್ಷಣ ಪರಿಷ್ಕರಿಸಬೇಕು ಅಥವಾ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಭರಿಸುವ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಶಿಕ್ಷಕರ ಪ್ರಮುಖ ಆಗ್ರಹವಾಗಿದೆ. ಇಲ್ಲವಾದರೆ ಮಕ್ಕಳ ಪೌಷ್ಟಿಕಾಂಶ ಯೋಜನೆಯ ಹೊರೆ ಶಿಕ್ಷಕರ ಜೇಬಿನ ಮೇಲೆಯೇ ಬೀಳುವ ಪರಿಸ್ಥಿತಿ ಮುಂದುವರಿಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಬೆಳುವಾಯಿ ಘಟಕಕ್ಕೆ ಮುರಳಿಧರ್ ಎಸ್. ಅಧ್ಯಕ್ಷರಾಗಿ ಆಯ್ಕೆ
ಪಂಚವರ್ಣಕ್ಕೆ ಹಸಿರು ರಥ ಹಸ್ತಾಂತರ