ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ನೇತ್ರಾವದಿ ನದಿಯಲ್ಲಿ ಈಜಾಡಲು ತೆರಳಿ ನೀರುಪಾಲಾಗಿದ್ದ ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ನಿವಾಸಿ ಪ್ರಸಾದ್ (38) ಅವರ ಮೃತದೇಹ ಪತ್ತೆಯಾಗಿದೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿದ್ದರು.ಸೋಮವಾರ ಸಂಜೆ ನೇತ್ರಾವತಿ ನದಿಯಲ್ಲಿ ಈಜಾಡಲು ಮೂವರು ಇಳಿದಿದ್ದರು. ಈ ವೇಳೆ ಪ್ರಸಾದ್ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ನಾಪತ್ತೆಯಾಗಿದ್ದರು. ಸೋಮವಾರ ತಡರಾತ್ರಿ ಶವವನ್ನು ಮೇಲೆತ್ತಲಾಗಿದೆ. ಉಳಿದ ಇಬ್ಬರನ್ನು ರಕ್ಷಿಸಲಾಗಿತ್ತು.
ಬೆಳಾಲು ಗ್ರಾಮದ ಸುರುಳಿ ಕುಂಡಡ್ಕ ಎಂಬಲ್ಲಿಯ ಓಡಿ ಎಂಬವರ ಪುತ್ರ ಪ್ರಸಾದ್ ವಿವಾಹಿತರಾಗಿದ್ದು ಪತ್ನಿ, ಓರ್ವ ಪುತ್ರ ಇದ್ದಾನೆ.ಘಟನೆಯ ಬಗ್ಗೆ ಮಾಹಿತಿ ಪಡೆದ ಶೌರ್ಯ ತುರ್ತು ಸ್ಪಂದನ ಘಟಕದ ಸಂಯೋಜಕ ಸುಲೈಮಾನ್, ಕ್ಯಾಪ್ಟನ್ ಸಂತೋಷ್ ಮಾಚಾರ್, ಜಗದೀಶ್, ಸಂಜೀವ ಮೊದಲಾದವರು ಸ್ಥಳಕ್ಕೆ ತೆರಳಿ ಹುಡುಕಾಟ ನಡೆಸಿದರು. ಬಳಿಕ ಅಗ್ನಿಶಾಮಕ ದಳದ ಬೋಟ್ ಬಳಸಿ ನಿರಂತರ ಎರಡು ಗಂಟೆ ಕಾಲ ಹುಡುಕಾಟ ನಡೆಸಿದ್ದು ರಾತ್ರಿ 11 ಗಂಟೆ ವೇಳೆಗೆ ನದಿ ನೀರಿನ ಆಳದಲ್ಲಿ ಮೃತದೇಹ ಪತ್ತೆಯಾಯಿತು. ಬೆಳ್ತಂಗಡಿಯ ಮುಳುಗು ತಜ್ಞ ಇಸ್ಮಾಯಿಲ್, ಜೆಸಿಬಿ ಚಾಲಕ ಶಾಕೀರ್, ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ಅವಿನಾಶ್ ಭಿಡೆ, ರವೀಂದ್ರ ಉಜಿರೆ, ಕಿರಣ್, ರಮೇಶ್ ಕೂಡಿಗೆ,ಧನೇಶ್ ಉಜಿರೆ ಮತ್ತಿತರರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಘಟನೆಯ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಆರ್‌ಎಸ್ಎಸ್ ಪ್ರಚಾರಕ: ಪ್ರಸಾದ್ ಅವರು ಸಂಘದ ಪ್ರಚಾರಕರಾಗಿ 5 ವರ್ಷ ಕಾರ್ಯನಿರ್ವಹಿಸಿ ಪ್ರಸ್ತುತ ಪುತ್ತೂರು ಜಿಲ್ಲಾ ಧರ್ಮಜಾಗರಣ ಜಿಲ್ಲಾ ಸಂಯೋಜಕರಾಗಿದ್ದರು. ಎಲ್ಲರನ್ನೂ ನಗಿಸುವ ವ್ಯಕ್ತಿವುಳ್ಳ ಪ್ರಸಾದ್, ಸಮಾಜಕ್ಕಾಗಿ 7 ವರ್ಷ ಸಂಘದ ಪ್ರಚಾರಕನಾಗಿ ಜೀವನ ನೀಡಿದ ಸಾಮಾನ್ಯರ ಮನೆಯ ಹುಡುಗ. ಅವರ ಊರಿಗೆ ಅವರೇ ಮೊದಲ ಸ್ವಯಂಸೇವಕರಾಗಿದ್ದು. ಸಹಲ್ನಲ್ಲಿ ಸಾಹಸಿಗರಾಗಿದ್ದ ಇವರು ಹತ್ತದ ಬೆಟ್ಟ, ನೋಡದ ಜಲಪಾತ ನಮ್ಮ ಜಿಲ್ಲೆಯಲ್ಲಿ ಯಾವುದು ಇರಲಿಲ್ಲ. ಬೆಟ್ಟ ಹತ್ತುವ ತಾಕತ್ತು ಎಲ್ಲರಿಗಿಂತಲೂ ಜಾಸ್ತಿ ಇದ್ದರೂ, ಅವರೂ ಎಲ್ಲರನ್ನೂ ಬೆಟ್ಟದ ಮೇಲೆ ಹತ್ತಿಸುವ ತಾಳ್ಮೆ ಅವರಿಲ್ಲಿತ್ತು. ಎಷ್ಟೇ ಆಳವಿದ್ದರೂ ರಭಸವಿದ್ದರೂ ಎದುರಾಗಿ ಈಜುವ ವ್ಯಕ್ತಿಯಾಗಿದ್ದರು. ಸಂಘದ ಆಟ ಆಡಿಸುವುದರಲ್ಲಿ ನಿಸ್ಸೀಮ, ಗಣದಲ್ಲಿ ಎಷ್ಟೆ ಸಂಖ್ಯೆ ಇರಲಿ ಪ್ರಸಾದ್ ಅವರು ಆಟ ಆಡಿಸಿದರೆ ಉತ್ಸಾಹ ಇಮ್ಮಡಿಗೊಳ್ಳುತ್ತಿತು..ಕೆಂಜಾರು ಎಂಬಲ್ಲಿ ನಡೆದ ಸಾಂಘಿಕ್ ಸಮಯದಲ್ಲಿ ಪ್ರಸಾದ್ ಅವರು ಹಿಂದಿನವರ ಸೊಂಟಕ್ಕೆ ಟವೆಲ್ ಕಟ್ಟಿ ಬೈಕ್ ಒಡಿಸುತ್ತಿದ್ದುದನ್ನು ಅವರೊಂದಿಗಿನ ಸ್ವಯಂಸೇವಕರು ನೆನಪಿಸಿಕೊಳ್ಳುತ್ತಿದ್ದಾರೆ.ಪ್ರಚಾರಕರಾಗಿ ವಾಪಸ್ಸು ಬಂದ ಮೇಲೆ ಜೀವನವೇ ಪ್ರಯೋಗ ಎಂಬಂತೆ ಗೇರುಬೀಜ ವ್ಯಾಪಾರ, ಹೊಯಿಗೆ ವ್ಯಾಪಾರ, ಇಟ್ಟಿಗೆ ವ್ಯಾಪಾರ, ಕೃಷಿ, ಕಂಟ್ರಾಕ್ಟರ್ ಆಗಿ ಜೀವನದಲ್ಲಿ ಸ್ವಾವಲಂಬಿಯಾಗಿ ಬೆಳೆಯುತ್ತಿದರು. ಇಬ್ಬರು ತಂಗಿಯರನ್ನು ಓದಿಸಿದ್ದರು, ಒಬ್ಬಳಿಗೆ ಮದುವೆ ಮಾಡಿಸಿದರು, ತಮ್ಮನಿಗೆ ಜೀವನ ಕಟ್ಟಿಕೊಳ್ಳಲು ಪಿಕ್ಅಪ್ ತೆಗೆಸಿಕೊಟ್ಟರು. ಪುಟ್ಟ ಮನೆಯೊಂದನ್ನು ಕಟ್ಟಿಸಿದರು.. ಸಣ್ಣ ಮಗುವಿತ್ತು. ಸ್ವಯಂಸೇವಕರಿಗೆ ಪ್ರಸಾದಣ್ಣ ನಿಜ ಅರ್ಥದಲ್ಲಿ ಅಣ್ಣನೇ ಅಗಿದ್ದರು.