ಮೈಷುಗರ್‌ನಲ್ಲಿ ಬಾಯ್ಲಿಂಗ್ ಹೌಸ್ ಕಾಮಗಾರಿ ಆರಂಭ: ಸಿ.ಡಿ.ಗಂಗಾಧರ್

KannadaprabhaNewsNetwork |  
Published : Nov 14, 2026, 01:30 AM IST
೧೩ಕೆಎಂಎನ್‌ಡಿ-೧ಮಂಡ್ಯದ ಮೈಷುಗರ್ ಕಚೇರಿಯಲ್ಲಿ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿ.ನಾಗರಾಜಪ್ಪ ನಡೆಸಿರುವ ಅಕ್ರಮ- ಅವ್ಯವಹಾರ ಪ್ರಕರಣ ಸಾಬೀತಾಗಿ ₹೧೨೭ ಕೋಟಿ ವಸೂಲಾತಿಗೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿತ್ತು. ಈ ಸಂಬಂಧ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಬಳಿ ಇದ್ದು ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ. ಸರ್ಕಾರದಿಂದ ಆದೇಶ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಖಾನೆ ಆಡಳಿತ ಮಂಡಳಿ ಪ್ರಬಲ ಒತ್ತಡ ಹೇರಲಾಗುತ್ತಿದೆ. ಸರ್ಕಾರದ ಆದೇಶ ಹೊರಬಿದ್ದ ಬಳಿಕ ಆಸ್ತಿ ಮುಟ್ಟುಗೋಲಿಗೆ ಜಿಲ್ಲಾಡಳಿತದ ಮೂಲಕ ಕ್ರಮ ವಹಿಸಲಾಗುವುದು ಎಂದು ಸಿ.ಡಿ.ಗಂಗಾಧರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಮೈಷುಗರ್ ಕಾರ್ಖಾನೆಯಲ್ಲಿ ನೂತನ ಬಾಯ್ಲಿಂಗ್ ಹೌಸ್ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡಿದ್ದು, ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಂಡು ಪ್ರಾಯೋಗಿಕ ಚಾಲನೆ ನೀಡಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು.

ಕಾರ್ಖಾನೆಯ ಅತಿಥಿಗೃಹದಲ್ಲಿ ಶುಕ್ರವಾರ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುಣೆ ಮೂಲದ ಕಂಪನಿಯೊಂದಕ್ಕೆ ಬಾಯ್ಲಿಂಗ್ ಹೌಸ್ ಕಾಮಗಾರಿಯ ಟೆಂಡರ್ ಪಡೆದುಕೊಂಡಿದ್ದು, ಈಗಾಗಲೇ ಸಿವಿಲ್ ಕಾಮಗಾರಿಗಳು ಆರಂಭಗೊಂಡಿವೆ. ಏಪ್ರಿಲ್ ಅಂತ್ಯದೊಳಗೆ ಮುಗಿಸುವಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಷ್ಟರೊಳಗೆ ಮುಗಿಸದಿದ್ದರೆ ಆಗುವ ನಷ್ಟವನ್ನು ಟೆಂಡರ್ ಪಡೆದ ಕಂಪನಿಯವರೇ ತುಂಬಿಕೊಡಬೇಕೆಂಬ ಕರಾರನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಬಾಯ್ಲಿಂಗ್ ಹೌಸ್ ಕಾಮಗಾರಿ ಪೂರ್ಣಗೊಂಡರೆ ನಿತ್ಯ ಕನಿಷ್ಠ ೪ ಸಾವಿರ ಟನ್‌ನಿಂದ ೫ ಸಾವಿರ ಟನ್‌ವರೆಗೆ ಕಬ್ಬನ್ನು ಅರೆಯುವುದಕ್ಕೆ ಸಾಧ್ಯವಾಗಲಿದೆ. ೨೦೨೭- ೨೮ನೇ ಸಾಲಿನಿಂದ ಕಾರ್ಖಾನೆಯ ಕಬ್ಬು ಅರೆಯುವ ಸಾಮರ್ಥ್ಯ ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸ್ಪಷ್ಟಪಡಿಸಿದರು.

೨೦೨೬- ೨೭ನೇ ಸಾಲಿನಲ್ಲಿ ೪.೩೮ ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿದ್ದು, ಇದುವರೆಗೆ ೨.೧೦ ಲಕ್ಷ ಟನ್ ಕಬ್ಬನ್ನು ನುರಿಸಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಶೇ.೬.೬೯ ಇದ್ದ ಇಳುವರಿ ಈ ಸಾಲಿನಲ್ಲಿ ಶೇ.೮.೧೮ಕ್ಕೆ ಏರಿಕೆಯಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆರ್‌ಬಿ ಟೆಕ್ ಕಂಪನಿ ಪ್ರತಿ ಮೆಟ್ರಿಕ್ ಟನ್ ಕಬ್ಬಿಗೆ ೨೦೨೨-೨೩ನೇ ಸಾಲಿನಲ್ಲಿ ₹೭೭೫, ೨೩-೨೪ರಲ್ಲಿ ₹೭೭೫, ೨೪-೨೫ ಮತ್ತು ೨೫-೨೬ರಲ್ಲಿ ₹೯೦೦ ಬಿಡ್ ಮಾಡಿದ್ದರೂ ಇಳುವರಿ ಪ್ರಮಾಣ ಹೆಚ್ಚಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ೨೦೨೬- ೨೭ನೇ ಸಾಲಿನಲ್ಲಿ ಶ್ರೇಯಾ ಮ್ಯಾನ್‌ಪವರ್ ಕಂಪನಿ ಪ್ರತಿ ಟನ್ ಕಬ್ಬಿಗೆ ₹೮೮೦ ಬಿಡ್ ಮಾಡಿ ಶೇ.೮.೧೮ಕ್ಕೆ ಇಳುವರಿಯನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಮೂರು ವರ್ಷಗಳಲ್ಲಿ ಆರ್.ಬಿ.ಟೆಕ್ ಕಂಪನಿಯಿಂದ ಕಂಪನಿಗೆ ಆದ ನಷ್ಟದ ಬಾಬ್ತು ₹೩.೨೬ ಕೋಟಿ ಹಣವನ್ನು ವಸೂಲಿ ಮಾಡಿರುವುದಾಗಿ ಹೇಳಿದರು.

ಪ್ರಸಕ್ತ ವರ್ಷ ೧,೬೩,೦೭೦ ಕ್ವಿಂಟಾಲ್ ಸಕ್ಕರೆ ಮಾರಾಟದಿಂದ ₹೭೨ ಕೋಟಿ ಹಣ ಬಂದಿದೆ. ಪ್ರತಿ ಕ್ವಿಂಟಾಲ್ ಸಕ್ಕರೆಯನ್ನು ₹೫೦೩೦ಕ್ಕೆ ಮಾರಾಟ ಮಾಡಲಾಗಿದೆ. ಇನ್ನೂ ೨ ರಿಂದ ೩ ಸಾವಿರ ಕ್ವಿಂಟಾಲ್ ಸಕ್ಕರೆ ದಾಸ್ತಾನು ಇರುವುದಾಗಿ ತಿಳಿಸಿದ ಸಿ.ಡಿ.ಗಂಗಾಧರ್, ೨೦೨೪- ೨೫ನೇ ಸಾಲಿನಲ್ಲಿ ಕಾಕಂಬಿಯನ್ನು ಪ್ರತಿ ಮೆಟ್ರಿಕ್ ಟನ್‌ಗೆ ₹೧೨,೮೫೦ , ೨೫-೨೬ನೇ ಸಾಲಿನಲ್ಲಿ ₹೧೨,೪೫೦ ಹಾಗೂ ೨೬-೨೭ನೇ ಸಾಲಿನಲ್ಲಿ ₹೧೩,೧೦೦ ಹಾಗೂ ಈ ಸಾಲಿನಲ್ಲಿ ₹೧೧,೩೦೦ ಬೆಲೆಗೆ ಮಾರಾಟ ಮಾಡಿರುವುದಾಗಿ ಸ್ಪಷ್ಟಪಡಿಸಿದರು.

ಕಾರ್ಖಾನೆಯ ಸಹ ವಿದ್ಯುತ್ ಘಟಕದಲ್ಲಿ ಕಳೆದ ಮೂರು ಸಾಲಿನಿಂದ ಒಟ್ಟು ೨,೮೨,೬೦,೦೦೦ ಯೂನಿಟ್ ಉತ್ಪಾದಿಸಿ ಪ್ರತಿ ಯೂನಿಟ್‌ಗೆ ₹೬.೦೭ನಂತೆ ಒಟ್ಟು ₹೧೭,೧೫,೩೮,೨೦೦ಕ್ಕೆ ಮಾರಾಟ ಮಾಡಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿರುವುದಾಗಿ ಹೇಳಿದರು.

ನಾಗರಾಜಪ್ಪ ಆಸ್ತಿ ಜಪ್ತಿಗೆ ಕ್ರಮ:

ಮೈಷುಗರ್ ಕಾರ್ಖಾನೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ವಿ.ನಾಗರಾಜಪ್ಪ ನಡೆಸಿರುವ ಅಕ್ರಮ- ಅವ್ಯವಹಾರ ಪ್ರಕರಣ ಸಾಬೀತಾಗಿ ₹೧೨೭ ಕೋಟಿ ವಸೂಲಾತಿಗೆ ರಾಜ್ಯ ಉಚ್ಛ ನ್ಯಾಯಾಲಯ ಆದೇಶಿಸಿತ್ತು. ಈ ಸಂಬಂಧ ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗಳ ಬಳಿ ಇದ್ದು ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳಬೇಕಿದೆ. ಸರ್ಕಾರದಿಂದ ಆದೇಶ ಮಾಡಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಖಾನೆ ಆಡಳಿತ ಮಂಡಳಿ ಪ್ರಬಲ ಒತ್ತಡ ಹೇರಲಾಗುತ್ತಿದೆ. ಸರ್ಕಾರದ ಆದೇಶ ಹೊರಬಿದ್ದ ಬಳಿಕ ಆಸ್ತಿ ಮುಟ್ಟುಗೋಲಿಗೆ ಜಿಲ್ಲಾಡಳಿತದ ಮೂಲಕ ಕ್ರಮ ವಹಿಸಲಾಗುವುದು ಎಂದು ಸಿ.ಡಿ.ಗಂಗಾಧರ್ ಹೇಳಿದರು.

೧೬ಕ್ಕೆ ಕಾರ್ಖಾನೆಯಲ್ಲಿ ಕಬ್ಬು ಅರೆಯುವಿಕೆ ಸ್ಥಗಿತ:

೨೦೨೬- ೨೭ನೇ ಸಾಲಿನ ಕಬ್ಬು ನುರಿಸುವ ಹಂಗಾಮನ್ನು ನ.೧೬ರಂದು ಸಂಜೆ ೬ ಗಂಟೆಗೆ ಅಧಿಕೃತವಾಗಿ ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್ ಹೇಳಿದರು. ೨೦೨೭-೨೮ನೇ ಸಾಲಿಗೆ ಮೈಷುಗರ್ ಕಾರ್ಖಾನೆ ನಿತ್ಯ ಸುಮಾರು ೪ ಸಾವಿರ ಟನ್ ಕಬ್ಬು ನುರಿಸುವ ಸಂಬಂಧ ಬಾಯ್ಲಿಂಗ್ ಹೌಸ್ ನವೀಕರಣ ಕಾರ್ಯ ತುರ್ತಾಗಿ ಕೈಗೊಳ್ಳಬೇಕಿರುವುದರಿಂದ ಕಬ್ಬು ನುರಿಸುವ ಕೆಲಸವನ್ನು ನಿಲ್ಲಿಸಲಾಗುತ್ತಿದೆ. ಒಪ್ಪಿಗೆ ಕಬ್ಬಿನಲ್ಲಿ ಉಳಿದಿರುವ ೨೭ ಸಾವಿರ ಟನ್ ಕಬ್ಬನ್ನು ಅಕ್ಕ-ಪಕ್ಕದ ಕಂಪನಿಗೆ ಸರಬರಾಜು ಮಾಡಿಸಲು ವ್ಯವಸ್ಥೆ ಮಾಡಲಾಗಿದೆ. ಕಬ್ಬು ನಿಲುಗಡೆಗೆ ಅವಕಾಶವಾಗದಂತೆ ಕಬ್ಬನ್ನು ತೆಗೆದುಕೊಂಡು ಹೋದ ದಿನವೇ ಅರೆಯುವುದಕ್ಕೂ ಕ್ರಮ ವಹಿಸಲಾಗಿದೆ ಎಂದು ನುಡಿದರು.

ಅಧ್ಯಕ್ಷ ಸ್ಥಾನದ ಜವಾಬ್ದಾರಿ ಸಮರ್ಥವಾಗಿ ನಿರ್ವಹಣೆ:

ಕಳೆದ ಮೂರು ವರ್ಷಗಳಲ್ಲಿ ಕಾರ್ಖಾನೆಯ ಅಧ್ಯಕ್ಷನಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ ತೃಪ್ತಿ ಇದೆ. ೧ ಮಾರ್ಚ್ ೨೦೨೪ರಂದು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಕಂಪನಿಯ ಸ್ಥಿತಿ- ಗತಿಗಳನ್ನು ಸುಧಾರಿಸಲು ಸರ್ಕಾರದ ಸಹಕಾರ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಖಾನೆಯು ಸಮರ್ಥವಾಗಿ ಕಾರ್ಯನಿರ್ವಹಿಸುವ ಮಟ್ಟಕ್ಕೆ ತಂದಿದ್ದೇನೆ. ಸರ್ಕಾರದಿಂದ ಆರಂಭದಲ್ಲಿ ₹೫೦ ಕೋಟಿ, ಆನಂತರದಲ್ಲಿ ₹೧೦ ಕೋಟಿ ಸೇರಿ ₹೬೦ ಕೋಟಿ ಹಣವನ್ನು ಮಾತ್ರ ಪಡೆದಿದ್ದೇವೆ. ೨೦೨೬-೨೭ನೇ ಸಾಲಿನಲ್ಲಿ ಸರ್ಕಾರದ ಅನುದಾನವಿಲ್ಲದೆ ಎಲ್ಲಾ ವ್ಯವಹಾರಗಳನ್ನು ಕಾನೂನುಬದ್ಧವಾಗಿ ನಡೆಸಿರುವುದಾಗಿ ಸಿ.ಡಿ.ಗಂಗಾಧರ್ ಹೇಳಿದರು.

ಸರ್ಕಾರದ ಸಾಲವನ್ನು ಹೊರತುಪಡಿಸಿದರೆ ಸರ್ಕಾರೇತರ ಸಂಸ್ಥೆಗಳಿಂದ ನಯಾಪೈಸೆ ಸಾಲ ಬಾಕಿ ಇರುವುದಿಲ್ಲ. ಬೆಂಗಳೂರಿನ ಜೆ.ಸಿ.ರಸ್ತೆಯಲ್ಲಿರುವ ಮೈಷುಗರ್ ಕಚೇರಿ ಸಂಕೀರ್ಣದ ಬಾಡಿಗೆ ಹಣದ ಮೊತ್ತವನ್ನು ₹೧೬ ಲಕ್ಷದಿಂದ ₹೩೭ ಲಕ್ಷ ಕ್ಕೇರಿಸಿ ಆರ್ಥಿಕ ಪರಿಸ್ಥಿತಿಯನ್ನು ಉತ್ತುಂಗ ಸ್ಥಿತಿಗೆ ಬರುವಂತೆ ಮಾಡಿರುವುದಾಗಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ