ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 12 ನಿರ್ದೇಶಕ ಸ್ಥಾನಗಳಿಗೆ ಸೆ.12 ರಂದು ಚುನಾವಣೆ ನಿಗಧಿಯಾಗಿದ್ದು ಒಟ್ಟು 53 ನಾಮಪತ್ರಗಳು ಸಲ್ಲಿಕೆಯಾಗಿವೆ.ಬ್ಯಾಂಕ್ ನ ಹಾಲಿ ಅಧ್ಯಕ್ಷ ಡಿ.ಸುಧಾಕರ್ ಸೇರಿದಂತೆ ಶಾಸಕ ಟಿ.ರಘುಮೂರ್ತಿ ನಾಮಪತ್ರ ಸಲ್ಲಿಸಿದ್ದಾರೆ. ಟಿ.ರಘುಮೂರ್ತಿ ನಾಮಪತ್ರ ಸಲ್ಲಿಸಲು ಕೆಲ ತಾಂತ್ರಿಕ ಸಮಸ್ಯೆ ಎದುರಾಗಿದ್ದು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ತೀರ್ಪು ಷರತ್ತಿಗೆ ಒಳಪಟ್ಟು ಅವರು ನಾಮಪತ್ರ ಸಲ್ಲಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಸುಮಾರು 200 ಸೊಸೈಟಿಗಳು ಸಾಲ ವಸೂಲಾತಿ ಸೇರಿದಂತೆ ಇತರೆ ಅಭಿವೃದ್ಧಿ ಚಟುವಟಿಕೆಯಲ್ಲಿ ಪಾಲ್ಗೊಳ್ಳದ ಕಾರಣ ಬೈಲಾ ಪ್ರಕಾರ ಅನರ್ಹಗೊಂಡಿವೆ. ಇಂತಹ ಕೆಲ ಸೊಸೈಟಿಗಳ ಪ್ರತಿನಿಧಿಯಾಗಿ ಶಾಸಕ ರಘುಮೂರ್ತಿ ನಾಮಪತ್ರ ಸಲ್ಲಿಸಬೇಕಾಗಿತ್ತು. ಹಾಗಾಗಿ ಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಶಾಸಕ ರಘುಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಟ್ಟಿಲ್ಲ.ತಕ್ಷಣವೇ ಹೈಕೋರ್ಟ್ ಮೊರೆ ಹೋದ ರಘುಮೂರ್ತಿ ನಾಮಪತ್ರ ಸಲ್ಲಿಸುವ ಅವಕಾಶ ಕೋರಿದ್ದಾರೆ. ನ್ಯಾಯಾಲಯದ ನಿರ್ದೇಶನ ಮಾತ್ರ ಬಾಕಿ ಇದೆ. ಏತನ್ಮಧ್ಯೆ ನ್ಯಾಯಾಲಯದ ತೀರ್ಪಿಗೆ ಒಳಪಟ್ಟು ನಾಮಪತ್ರ ಸಲ್ಲಿಸುತ್ತಿರುವುದಾಗಿ ರಘುಮೂರ್ತಿ ಹೇಳಿದ್ದಾರೆ.
ಕೋವಿಡ್ ಹಾಗೂ ಬರದ ಕಾರಣಕ್ಕೆ ಚಳ್ಳಕೆರೆ ಭಾಗದ ಬಹುತೇಕ ಸೊಸೈಟಿಗಳು ಸಾಲ ವಸೂಲಾತಿಯಲ್ಲಿ ಹಿನ್ನಡೆ ಸಾಧಿಸಿವೆ. ಇದು ಸರ್ಕಾರಕ್ಕೂ ಗೊತ್ತಿರುವ ವಿಷಯ. ಇದೊಂದೇ ಕಾರಣ ಮುಂದಿಟ್ಟುಕೊಂಡು ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಸದೇ ಇರುವುದು ತರವಲ್ಲದ ನಡೆಯಾಗಿದೆ. ಈ ವಿಚಾರದಲ್ಲಿ ವ್ಯವಸ್ಥಿತ ಸಂಚು ನಡೆಸಲಾಗಿದ್ದು,ತಾವು ನ್ಯಾಯಾಲಯದ ಮೊರೆ ಹೋಗುವುದ ಅರಿತು ಮೊದಲೇ ಕೇವಿಯಟ್ ಸಲ್ಲಿಸಲಾಗಿದೆ ಎಂದು ಶಾಸಕ ರಘುಮೂರ್ತಿ ಆರೋಪಿಸಿದ್ದಾರೆ.
ಜಿಲ್ಲೆಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘ, ಹಾಲು ಒಕ್ಕೂಟ, ಅರ್ಬನ್ ಬ್ಯಾಂಕುಗಳು ಸೇರಿದಂತೆ ಒಟ್ಟು 419 ಸೊಸೈಟಿಗಳು ಡಿಸಿಸಿ ಬ್ಯಾಂಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಸೊಸೈಟಿಗಳು ಸುಸ್ತಿದಾರರಾಗಿದ್ದರೆ, ಕೇವಲ ಆಡಳಿತಾಧಿಕಾರಿ ನಡೆಸಿಕೊಂಡು ಹೋಗುತ್ತಿರುವ ಸೊಸೈಟಿಗಳು ಮತದಾನಕ್ಕೆ ಅರ್ಹತೆ ಪಡೆಯುವುದಿಲ್ಲ ಎಂಬುದು ಆಡಳಿತ ಮಂಡಳಿ ಅಭಿಪ್ರಾಯ. ಶಾಸಕ ಟಿ.ರಘುಮೂರ್ತಿ ಪ್ರತಿನಿಧಿಸುವ ಚಿತ್ರದುರ್ಗ ತಾಲೂಕಿನ ಕಡಬನಕಟ್ಟಿ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕಿನೊಡನೆ ವ್ಯವಹಾರ ನಡೆಸಿಲ್ಲ, ಸಾಲ ವಸೂಲಾತಿ ಕೂಡಾ ಸರಿಯಾಗಿಲ್ಲ ಎಂಬ ಅಂಶವ ತೋರಿಸಲಾಗಿದೆ.ಡಿಸಿಸಿ ಬ್ಯಾಂಕ್‌ಗೆ ಒಟ್ಟು 6 ವರ್ಗಗಳಲ್ಲಿ ನಿರ್ದೇಶಕರನ್ನು ಆಯ್ಕೆ ಮಾಡಲಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಟಿಎಪಿಸಿಎಂಎಸ್, ಪಟ್ಟಣ ವ್ಯಾಪ್ತಿಯ ಅರ್ಬನ್ ಬ್ಯಾಂಕುಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳು, ನೇಕಾರ ಮತ್ತಿತರೆ ಸೊಸೈಟಿಗಳು ಹಾಗೂ ಕೈಗಾರಿಕೆ ಮತ್ತಿತರೆ ಸಹಕಾರಿ ವಲಯಗಳಿಂದ ಪ್ರತಿನಿಧಿಗಳು ಈ ಚುನಾವಣೆಗೆ ಸ್ಪರ್ಧೆ ಮತ್ತು ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ.
ಶಾಸಕ ಟಿ.ರಘುಮೂರ್ತಿ ಅವರಿಗೆ ನಾಮಪತ್ರ ಸಲ್ಲಿಸಲು ಸಾಧ್ಯವಾಗದೇ ಇರುವ ವಾತಾವರಣ ಸೃಷ್ಟಿಯಾಗಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿ ಗಂಭೀರ ಚರ್ಚೆಗಳಾಗುತ್ತಿವೆ. ಸಚಿವ ಮತ್ತು ಶಾಸಕರ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ದಶಕಗಳಿಂದ ಡಿ.ಸುಧಾಕರ್ ಡಿಸಿಸಿ ಬ್ಯಾಂಕ್ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಬೇರೆಯವರು ಪ್ರವೇಶ ಮಾಡುವುದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ತಂತ್ರಗಳ ಹೆಣೆಯುತ್ತಾರೆ. ರಘುಮೂರ್ತಿ ಅವರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡುವುದು ತಂತ್ರಗಾರಿಕೆ ಭಾಗವೆನ್ನುತ್ತಿವೆ ಕೆಲ ಕಾಂಗ್ರೆಸ್ ಮೂಲಗಳು.