ಹಾವೇರಿ: ಕರ್ನಾಟಕದಲ್ಲಿ ಒಣ ಮೆಣಸಿನಕಾಯಿ ಉತ್ಪಾದನೆ ಹೆಚ್ಚಾಗಿ ಬೆಲೆ ಕುಸಿತ ಉಂಟಾಗಿದ್ದು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಕೇಂದ್ರ ಸರ್ಕಾರ ಕರ್ನಾಟಕದ ರೈತರು ಬೆಳೆದ ಒಣಮೆಣಸಿನಕಾಯಿ ಖರೀದಿಗೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.ಈ ಕುರಿತು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಹಾಗೂ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.ದೇಶದಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳು ಮೆಣಸಿನಕಾಯಿ ಬೆಳೆಯುವ ರಾಜ್ಯಗಳಾಗಿದ್ದು, ಮೆಣಸಿನಕಾಯಿ ಇಡೀ ದೇಶದಲ್ಲಿ ಎಲ್ಲರೂ ಉಪಯೋಗಿಸುವ ಪದಾರ್ಥವಾಗಿದ್ದು, ವಿದೇಶಗಳಿಗೂ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ. ಮೆಣಸಿನಕಾಯಿ ಬೆಳೆ ಅತ್ಯಂತ ಸೂಕ್ಷ್ಮ ಬೆಳೆಯಾಗಿದ್ದು, ಅದನ್ನು ಕೀಟಗಳ ಹಾವಳಿಯಿಂದ ಕಾಪಾಡಿಕೊಂಡು ರಕ್ಷಣೆ ಮಾಡುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದು ತಿಳಿಸಿದ್ದಾರೆ.ಕಳೆದ ವರ್ಷ ಮೆಣಸಿನಕಾಯಿ ಉತ್ಪಾದನೆ ಸಾಮಾನ್ಯವಾಗಿದ್ದರೂ ಆಂತರಿಕ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಹೊಟ್ಟೆಬಾಕುತನದಿಂದ ದೊಡ್ಡ ಪ್ರಮಾಣದ ಮೆಣಸಿನಕಾಯಿ ಮಾರಾಟವಾಗದೇ ಹಾಗೇ ಉಳಿದಿದ್ದು, ರೈತರನ್ನು ಸಂಕಷ್ಟಕ್ಕೀಡು ಮಾಡಿದೆ. ರಸಗೊಬ್ಬರ ಕೀಟನಾಶಕಗಳ ಬೆಲೆ ಹೆಚ್ಚಳದಿಂದಾಗಿ ಮೆಣಸಿನಕಾಯಿ ಬೆಳೆಯಲು ಸಾಕಷ್ಟು ವೆಚ್ಚವಾಗುತ್ತಿದೆ. ಇದರಿಂದ ಮೆಣಸಿನಕಾಯಿ ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಆಂಧ್ರಪ್ರದೇಶದ ರೈತರು ಬೆಳೆದ ಮೆಣಸಿನಕಾಯಿ ಖರೀದಿಸಲು ತೀರ್ಮಾನಿಸಿ ಆ ರೈತರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ, ಇದರಲ್ಲಿ ಕರ್ನಾಟಕದ ರೈತರು ಸೇರ್ಪಡೆಯಾಗಿಲ್ಲ. ಈ ಯೋಜನೆ ಅಡಿ ಕರ್ನಾಟಕದ ರೈತರೂ ಬೆಳೆದ ಮೆಣಸಿನಕಾಯಿಯನ್ನೂ ಖರಿದಿಸುವುದು ಅತ್ಯಂತ ಮುಖ್ಯ. ಇದರಿಂದ ಕರ್ನಾಟಕದ ರೈತರಿಗೂ ಅನುಕೂಲವಾಗಲಿದೆ ಎಂದಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದರೆ 100 ಗ್ರಾಂ ಚಿನ್ನದ ಪದಕ