ನನಸಾಗುವತ್ತ ಡಿಸಿಸಿ ಬ್ಯಾಂಕ್ ಬೇಡಿಕೆ- ಅಮಿತ್ ಶಾಗೆ ಬೊಮ್ಮಾಯಿ ಅಭಿನಂದನೆ

KannadaprabhaNewsNetwork |  
Published : Feb 25, 2026, 02:15 AM IST
24ಎಚ್‌ವಿಆರ್‌7-ಬಸವರಾಜ ಬೊಮ್ಮಾಯ | Kannada Prabha

ಸಾರಾಂಶ

ಒಂದು ದಶಕದ ಜಿಲ್ಲೆಯ ಜನರ ಬೇಡಿಕೆಯಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ನನಸಾಗುವ ಕಾಲ ಸನ್ನಿಹಿತವಾಗುವ ನಿರೀಕ್ಷೆ ಹುಟ್ಟುಹಾಕಿದೆ. ಒಂದು ಜಿಲ್ಲೆ, ಒಂದು ಡಿಸಿಸಿ ಬ್ಯಾಂಕ್‌ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್‌ ಶಾ ಹಸಿರು ನಿಶಾನೆ ತೋರಿದ್ದು, ಇದು ಹಾವೇರಿ ಜಿಲ್ಲೆಗೂ ಅನುಕೂಲವಾಗಲಿದೆ.

ಹಾವೇರಿ: ಒಂದು ದಶಕದ ಜಿಲ್ಲೆಯ ಜನರ ಬೇಡಿಕೆಯಾದ ಪ್ರತ್ಯೇಕ ಡಿಸಿಸಿ ಬ್ಯಾಂಕ್ ನನಸಾಗುವ ಕಾಲ ಸನ್ನಿಹಿತವಾಗುವ ನಿರೀಕ್ಷೆ ಹುಟ್ಟುಹಾಕಿದೆ. ಒಂದು ಜಿಲ್ಲೆ, ಒಂದು ಡಿಸಿಸಿ ಬ್ಯಾಂಕ್‌ಗೆ ಕೇಂದ್ರ ಸಹಕಾರ ಸಚಿವರೂ ಆಗಿರುವ ಅಮಿತ್‌ ಶಾ ಹಸಿರು ನಿಶಾನೆ ತೋರಿದ್ದು, ಇದು ಹಾವೇರಿ ಜಿಲ್ಲೆಗೂ ಅನುಕೂಲವಾಗಲಿದೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಅವರು, ಹಾವೇರಿ- ಗದಗ ಜಿಲ್ಲೆಯ ರೈತರ ಬಹಳ ದಿನದ ಕನಸು ಬೇಡಿಕೆ ಈಡೇರುವ ಕಾಲ ಬಂದಿದೆ. ಭಾರತ ಸರ್ಕಾರದ ಸಹಕಾರ ಇಲಾಖೆ ಒಂದು ಜಿಲ್ಲೆ ಒಂದು ಡಿಸಿಸಿ ಬ್ಯಾಂಕ್ ಎಂಬ ನೀತಿಯಡಿ ಈಗಾಗಲೇ ನಬಾರ್ಡ್‌ಗೆ ಸೂಚನೆ ಕೊಟ್ಟಿದ್ದು, ಹಾವೇರಿ ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವ ಕನಸು ನನಸಾಗಲಿದೆ. ಈ ಕುರಿತು 2025 ಅಕ್ಟೋಬರ್ 30ರಂದು ನಬಾರ್ಡ್ ಜನರಲ್ ಮ್ಯಾನೇಜರ್, ರೆಜಿಸ್ಟ್ರಾರ್ ಕೋ ಆಪರೇಟಿವ್ ಸೊಸೈಟಿಗೆ ಪತ್ರ ಬರೆದಿದ್ದು, ಪತ್ರದಲ್ಲಿ ಧಾರವಾಡ, ಹಾವೇರಿ, ಗದಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಮಾಡುವ ಬಗ್ಗೆ ಡಿಸಿಸಿ ಬ್ಯಾಂಕ್ ಧಾರವಾಡ ಕೂಡಲೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪ್ರತ್ಯೇಕ ಡಿಸಿಸಿ ಬ್ಯಾಂಕ್‌ಗೆ ಬೇಕಾದ ಆರ್ಥಿಕ, ಕಾನೂನಾತ್ಮಕ ಕ್ರಮಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ಡಿಸಿಸಿ ಬ್ಯಾಂಕ್‌ ಮತ್ತು ಪ್ರತ್ಯೇಕ ಹಾಲು ಒಕ್ಕೂಟ ಎರಡೂ ಕನಸು ನನಸಾಗಲಿದೆ. ನಾನು ಸಿಎಂ ಆಗಿದ್ದಾಗ ಹಾವೇರಿಗೆ ಹಾಲು ಒಕ್ಕೂಟವಾಗಿತ್ತು, ಈಗ ಮೆಗಾ ಡೈರಿ ಶೀಘ್ರ ಆರಂಭವಾಗಲಿದೆ. ಅದೇ ರೀತಿ ಈಗ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವ ಎಲ್ಲ ಸಾಧ್ಯತೆಗಳು ಇದೆ. ಕೇಂದ್ರ ಸಹಕಾರ ಸಚಿವರೂ ಆದ ಗೃಹ ಸಚಿವ ಅಮಿತ್ ಶಾ ಅವರ ದೂರದೃಷ್ಠಿಯಿಂದ ಇದು ಸಾಕಾರಗೊಳ್ಳಲಿದೆ. ಅದಕ್ಕಾಗಿ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ರಜಿಸ್ಟ್ರಾರ್‌ ಕೋ ಆಪರೇಟಿವ್ ಸೊಸೈಟಿಯವರು ಜ. 31ರಂದು ಪತ್ರ ಬರೆದು ಸೂಚಿಸಿದೆ. ಭಾರತ ಸರ್ಕಾರ ಒಂದು ಜಿಲ್ಲೆಗೆ ಒಂದು ಬ್ಯಾಂಕ್ ತೀರ್ಮಾನ ಕೈಗೊಂಡರೂ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳದಿರುವುದು ದುರಾದೃಷ್ಟಕರ. ಸಹಕಾರ ಮಂತ್ರಿಯೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ಜಿಲ್ಲೆಗೆ ಹೊಸ ಡಿಸಿಸಿ ಬ್ಯಾಂಕ್ ಮಾಡುವ ಎಲ್ಲ ಜಿಲ್ಲೆಗಳ ಬೇಡಿಕೆ ಈಡೇರಿಸಲು ಕ್ರಮ ಕೈಗೊಂಡು ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಲು ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

ನಾನು ಡಿಸಿಸಿ ಬ್ಯಾಂಕ್ ಎಂಡಿ ಮತ್ರು ಜಿಎಂ ಜೊತೆಗೆ ಮಾತನಾಡಿದ್ದೇನೆ. ಬರುವ ತಿಂಗಳು ಡಿಸಿಸಿ ಬ್ಯಾಂಕ್ ಬೋರ್ಡ್ ಮೀಟಿಂಗ್‌ನಲ್ಲಿ ಎಲ್ಲ ಶಿಫಾರಸ್ಸುಗಳಿಗೆ ಒಪ್ಪಿಗೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಲು ಅಧ್ಯಕ್ಷರು ಮತ್ತು ನಿರ್ದೇಶಕ ಮಂಡಳಿಗೆ ಕೇಳಿಕೊಳ್ಳುತ್ತೇನೆ. ಕೂಡಲೆ ಈ ಬಗ್ಗೆ ಕ್ರಮ ತೆಗೆದುಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ರಾಜ್ಯ ಸರ್ಕಾರ ಕಳುಹಿಸಿದರೆ, ಬರುವ ಆರ್ಥಿಕ ವರ್ಷದಲ್ಲಿಯೇ ಹಾವೇರಿಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಆಗುವುದು ನಿಶ್ಚಿತ. ಇದಕ್ಕೆ ಎಲ್ಲರ ಸಹಕಾರವನ್ನು ಕೋರುತ್ತೇನೆ. ಜತೆಗೆ, ಮತ್ತೊಮ್ಮೆ ವೈಯಕ್ತಿಕವಾಗಿ ಕೇಂದ್ರದ ಗೃಹ ಮತ್ತು ಸಹಕಾರ ಸಚಿವರೂ ಆದ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜನಪ್ರತಿನಿಧಿಗಳು ಜಡ; ಅಖಂಡ ಬಳ್ಳಾರಿಯ ಪ್ರವಾಸೋದ್ಯಮಕ್ಕೆ ಬರ !
ಗ್ರಾಮ ಸಹಾಯಕರಿಗೂ ನಿವೇಶನ ನೀಡಲು ಮನವಿ