ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಬೊಮ್ಮನಾಯಕನಹಳ್ಳಿ ಗ್ರಾಮದ ನಿವಾಸಿಗಳ ದೈನಂದಿನ ಸಂಚಾರವೇ ದುಸ್ತರವಾಗಿದ್ದು, ಸರ್ವಿಸ್ ರಸ್ತೆ ಅಥವಾ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಪಿ. ಸ್ವರೂಪ್ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಮಾತುಕತೆ ನಡೆಸಿದರು.
ಕನ್ನಡಪ್ರಭ ವಾರ್ತೆ ಹಾಸನ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ಬೊಮ್ಮನಾಯಕನಹಳ್ಳಿ ಗ್ರಾಮದ ನಿವಾಸಿಗಳ ದೈನಂದಿನ ಸಂಚಾರವೇ ದುಸ್ತರವಾಗಿದ್ದು, ಸರ್ವಿಸ್ ರಸ್ತೆ ಅಥವಾ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂದು ಆಗ್ರಹಿಸಿ ಸ್ಥಳೀಯರು ಶುಕ್ರವಾರ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ವಿಷಯ ತಿಳಿದು ಸ್ಥಳಕ್ಕೆ ಶಾಸಕ ಎಚ್.ಪಿ. ಸ್ವರೂಪ್ ಹಾಗೂ ಡಿವೈಎಸ್ಪಿ ಗಂಗಾಧರಪ್ಪ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಇದೇ ವೇಳೆ ಮಾಧ್ಯಮಕ್ಕೆ ಗ್ರಾಮದ ಸ್ಥಳೀಯ ನಿವಾಸಿ ರಾಘವೇಂದ್ರ, ರಾಮಕೃಷ್ಣ ಹಾಗೂ ಇತರರು ಹೇಳಿಕೆ ನೀಡಿ, ಹೆದ್ದಾರಿ ನಿರ್ಮಾಣಕ್ಕಾಗಿ ಗ್ರಾಮಸ್ಥರು ಹಿಂದೆ ತಮ್ಮ ಜಮೀನುಗಳನ್ನು ಬಿಟ್ಟುಕೊಟ್ಟಿದ್ದರೂ, ಇದೀಗ ಅದೇ ಗ್ರಾಮಸ್ಥರಿಗೆ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ವಿಸ್ ರಸ್ತೆ ಇಲ್ಲದೆ ಸ್ಥಳೀಯರು ಅಪಾಯಕಾರಿ ರೀತಿಯಲ್ಲಿ ಹೆದ್ದಾರಿ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಭಾಗದಲ್ಲಿ ಅಪಘಾತಗಳು ಹೆಚ್ಚಾಗುತ್ತಿವೆ ಎಂದು ನಿವಾಸಿಗಳು ದೂರಿದರು. ಬೊಮ್ಮನಾಯಕನಹಳ್ಳಿ ಗ್ರಾಮದ ಸುಮಾರು ೬೦ ಎಕರೆ ಜಮೀನನ್ನು ೧೯೯೧ರಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆಗ ಪ್ರತಿ ಎಕರೆಗೆ ಸುಮಾರು ೩೫ ಸಾವಿರ ರು. ಪರಿಹಾರ ನೀಡಲಾಗಿತ್ತು. ತಮ್ಮ ಜಮೀನುಗಳನ್ನು ಅಭಿವೃದ್ಧಿ ಕಾಮಗಾರಿಗಾಗಿ ಬಿಟ್ಟುಕೊಟ್ಟ ಗ್ರಾಮಸ್ಥರಿಗೆ ಕನಿಷ್ಠ ಸಂಚಾರ ವ್ಯವಸ್ಥೆಯನ್ನಾದರೂ ಕಲ್ಪಿಸಬೇಕಿತ್ತು. ಆದರೆ ಸರ್ವಿಸ್ ರಸ್ತೆ, ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ಯಾವುದನ್ನೂ ಒದಗಿಸದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ದಾಟುವಾಗ ಪ್ರತಿದಿನವೂ ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಈ ಭಾಗದಲ್ಲಿ ಈಗಾಗಲೇ ಅನೇಕ ಅಪಘಾತಗಳು ಸಂಭವಿಸಿದ್ದು, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡು ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಳಲು ತೋಡಿಕೊಂಡರು. ಆರಂಭದಲ್ಲಿ ರೂಪಿಸಿದ್ದ ಯೋಜನೆಗಳಲ್ಲಿ ಪದೇ ಪದೇ ಬದಲಾವಣೆ ಮಾಡಿರುವುದರಿಂದಲೇ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು. ಹೆದ್ದಾರಿ ಕಾಮಗಾರಿ ವೇಳೆ ಯುಜಿಡಿ ಹಾಗೂ ಕುಡಿಯುವ ನೀರಿನ ಪೈಪ್‌ಗಳಿಗೆ ಹಾನಿಯಾಗಿದ್ದು, ಇದರಿಂದ ಸ್ಥಳೀಯರಿಗೆ ಹೆಚ್ಚುವರಿ ತೊಂದರೆ ಉಂಟಾಗಿದೆ ಎಂದು ನಿವಾಸಿಗಳು ದೂರಿದರು. ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಮೂಲಭೂತ ಸೌಲಭ್ಯಗಳ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಅವರು ಹೇಳಿದರು.ಹಾನಿಗೊಳಗಾದ ಯುಜಿಡಿ ಸೇರಿದಂತೆ ವಿವಿಧ ಸಾರ್ವಜನಿಕ ಮೂಲಸೌಕರ್ಯಗಳ ದುರಸ್ತಿಗೆ ಸಂಬಂಧಿಸಿದಂತೆ ಸೂಕ್ತ ಪರಿಹಾರ ಅಥವಾ ಅನುದಾನ ನೀಡುತ್ತಿಲ್ಲ. ರೈತರು ತಮ್ಮ ಜಮೀನುಗಳಿಗೆ ತೆರಳಲು, ಜಾನುವಾರುಗಳನ್ನು ಕರೆದುಕೊಂಡು ಹೋಗಲು ಹಾಗೂ ಕೃಷಿ ವಾಹನಗಳ ಸಂಚಾರಕ್ಕೆ ಸಹ ಸೂಕ್ತ ಮಾರ್ಗವಿಲ್ಲ. ಹೀಗಾಗಿ ಗ್ರಾಮಸ್ಥರ ದೈನಂದಿನ ಬದುಕೇ ಸಂಕಷ್ಟಕ್ಕೆ ಸಿಲುಕಿದೆ ಎಂದು ಸ್ಥಳೀಯರು ವಿವರಿಸಿದರು. ಸರ್ವಿಸ್ ರಸ್ತೆ ನಿರ್ಮಾಣ ಸಾಧ್ಯವಾಗದಿದ್ದರೆ ಅಂಡರ್‌ಪಾಸ್ ಅಥವಾ ಮೇಲ್ಸೇತುವೆ ನಿರ್ಮಿಸಿ ಸುರಕ್ಷಿತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಬಗ್ಗೆ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡುವವರೆಗೂ ಹೋರಾಟ ಮುಂದುವರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.ಬಾಕ್ಸ್:: ಪೊಲೀಸರೊಂದಿಗೆ ಮಾತಿನ ಚಕಮಕಿದಿಢೀರ್ ಹೆದ್ದಾರಿ ತಡೆ ನಡೆಸಲು ಮುಂದಾದ ಪ್ರತಿಭಟನಾಕಾರರನ್ನು ಪೊಲೀಸರು ತಡೆಯಲು ಮುಂದಾದಾಗ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಮನವೊಲಿಸಲು ಮುಂದಾದರೂ, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದರು. ಸಮಸ್ಯೆಗೆ ತಕ್ಷಣದ ಪರಿಹಾರದ ಭರವಸೆ ಬೇಕೆಂದು ಒತ್ತಾಯಿಸಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.ಸ್ಥಳಕ್ಕೆ ಶಾಸಕ ಸ್ವರೂಪ್ ಭೇಟಿವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಪಿ. ಸ್ವರೂಪ್ ಪ್ರತಿಭಟನಾಕಾರರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕುರಿತು ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಬೊಮ್ಮನಾಯಕನಹಳ್ಳಿ ಗ್ರಾಮದ ಬೈಪಾಸ್ ರಸ್ತೆಯ ಸಮಸ್ಯೆಯನ್ನು ಗ್ರಾಮಸ್ಥರು ಪ್ರತಿಭಟನೆ ಮೂಲಕ ಗಮನಕ್ಕೆ ತಂದಿದ್ದಾರೆ. ಈ ಹಿಂದೆ ೧೯೯೧ರಲ್ಲಿ ಗ್ರಾಮದ ರೈತರು ಸುಮಾರು ೬೦ ಎಕರೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟಿದ್ದಾರೆ ಎಂದು ಹೇಳಿದರು. ಆ ಸಂದರ್ಭದಲ್ಲಿ ಸರ್ಕಾರ ಪ್ರತಿ ಎಕರೆಗೆ ಸುಮಾರು ೩೫ ಸಾವಿರ ರು. ಪರಿಹಾರ ನೀಡಿತ್ತು. ತಮ್ಮ ಜಮೀನುಗಳನ್ನು ಹೆದ್ದಾರಿ ನಿರ್ಮಾಣಕ್ಕಾಗಿ ನೀಡಿರುವ ಗ್ರಾಮಸ್ಥರ ಅನುಕೂಲಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ತಿಳಿಸಿದರು. ಆದರೆ ಸ್ಥಳೀಯರಿಗೆ ಅಂಡರ್‌ಪಾಸ್ ವ್ಯವಸ್ಥೆಯನ್ನೂ ನೀಡದೆ, ಸರ್ವಿಸ್ ರಸ್ತೆಯನ್ನೂ ನಿರ್ಮಿಸದೆ ಏಕಾಏಕಿ ರಸ್ತೆ ಕಾಮಗಾರಿ ಕೈಗೊಂಡಿರುವುದರಿಂದ ಗ್ರಾಮಸ್ಥರು ಪ್ರತಿಭಟನೆ ನಡೆಸುವಂತಾಗಿದೆ ಎಂದು ಹೇಳಿದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಚರ್ಚೆ ನಡೆಸಿದ್ದು, ಗ್ರಾಮಸ್ಥರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೈತರು ತಮ್ಮ ಜಮೀನುಗಳಿಗೆ ತೆರಳಲು, ಹಸು-ಕರುಗಳನ್ನು ಕರೆದುಕೊಂಡು ಹೋಗಲು ಹಾಗೂ ವಾಹನಗಳ ಸಂಚಾರಕ್ಕೆ ಅಗತ್ಯ ರಸ್ತೆ ವ್ಯವಸ್ಥೆ ಮಾಡಿಕೊಡುವ ಕುರಿತು ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ಸ್ವರೂಪ್ ತಿಳಿಸಿದರು. ಚನ್ನಪಟ್ಟಣ ವೃತ್ತದಲ್ಲಿಯೂ ಇದೇ ರೀತಿಯ ಸಂಚಾರ ಸಮಸ್ಯೆ ಇದ್ದು, ಅಲ್ಲಿಯೂ ಅಂಡರ್‌ಪಾಸ್ ನಿರ್ಮಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಹಾಸನಾಂಬಾ ಜಾತ್ರೆ ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವುದರಿಂದ ಅದರೊಳಗೆ ಕಾಮಗಾರಿ ಪೂರ್ಣಗೊಳ್ಳುವುದು ಕಷ್ಟವಾಗಬಹುದು. ಆದರೂ ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.