ಕೂಡ್ಲಿಗಿ: ನಮ್ಮ ತಂದೆ ಬಡಜನತೆಯ ಕಲ್ಯಾಣ ಬಯಸಿದ್ದರು. ಎರಡು ಬಾರಿ ಶಾಸಕರಾಗಿ ಕೂಡ್ಲಿಗಿ ಕ್ಷೇತ್ರದ ಜನತೆಯ ಹಿತ ಬಯಸಿ ಹತ್ತು ಹಲವು ಕಲ್ಯಾಣ ಕಾರ್ಯ ಮಾಡುವುದರ ಮೂಲಕ ಜನಮನದಲ್ಲಿ ಉಳಿದಿದ್ದಾರೆ. ನಾನು ಸಹ ಅವರ ಹಾದಿಯಲ್ಲಿಯೇ ಸಾಗುತ್ತಿದ್ದೇನೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಮಾಜಿ ಶಾಸಕ ದಿ.ಎನ್.ಟಿ. ಬೊಮ್ಮಣ್ಣ ಸ್ಮರಣಾರ್ಥವಾಗಿ ತುಮಕೂರಿನ ಅಕ್ಷರಾ ಐ ಫೌಂಡೇಶನ್, ತಾಲೂಕು ಆರೋಗ್ಯ ಇಲಾಖೆ ಹಾಗೂ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅಭಿಮಾನಿ ಬಳಗದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಾನ್ನಿಧ್ಯ ವಹಿಸಿದ್ದ ಕೂಡ್ಲಿಗಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷ ಪ್ರಶಾಂತಸಾಗರ ಶಿವಾಚಾರ್ಯ ಮಾತನಾಡಿ, ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೆಚ್ಚು ಶ್ರಮಿಸುತ್ತಿದ್ದಾರೆ. ಚುನಾವಣಾ ಪೂರ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದ್ದ ಶ್ರೀನಿವಾಸ್ ಶಾಸಕರಾದ ನಂತರವೂ ಆ ಕಾರ್ಯವನ್ನು ಮುಂದುವರಿಸಿರುವುದು ಅವರಲ್ಲಿರುವ ಬಡಜನರ ಬಗೆಗಿನ ಕಾಳಜಿಯನ್ನು ತೋರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಕಾವಲ್ಲಿ ಶಿವಪ್ಪನಾಯಕ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶ್ರೀಕಂಠಾಪುರ ವೆಂಕಟೇಶ್, ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ಧನಗೌಡ, ಕಾಂಗ್ರೆಸ್ ಮುಖಂಡ ಎನ್.ಟಿ.ತಮ್ಮಣ್ಣ, ಸಿಪಿಐ ಸುರೇಶ್ ತಳವಾರ, ಪಪಂ ಉಪಾಧ್ಯಕ್ಷೆ ಲೀಲಾವತಿ ಪ್ರಭಾಕರ್, ಸ್ಥಾಯಿಸಮಿತಿ ಅಧ್ಯಕ್ಷ ಸೈಯದ್ ಶುಕೂರ್, ತಾಪಂ ಮಾಜಿ ಸದಸ್ಯೆ ಶೃತಿ ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ್‌ಕುಮಾರ್, ಪಿಎಸ್‌ಐ ಸಿ.ಪ್ರಕಾಶ್, ಮುಖಂಡರಾದ ಡಿ.ನಾಗರಾಜಪ್ಪ, ಮಲ್ಲಾಪುರ ಭರಮಪ್ಪ, ವಿಭೂತಿ ವೀರಣ್ಣ, ಎನ್.ವಿ.ತಮ್ಮಣ್ಣ, ಮಾದಿಹಳ್ಳಿ ನಜೀರ್, ಜೂನಿಯರ್ ಕಾಲೇಜು ಪ್ರಾಚಾರ್ಯೆ ಡಾ.ಟಿ.ಕೊತ್ಲಮ್ಮ, ಡಾ.ಶಾಂತಯ್ಯ, ಎ.ಎಂ.ವೀರಯ್ಯ, ಚೌಡಮ್ಮ, ಬಾಷಾ ಸಾಬ್ ಸೇರಿ ಇತರರಿದ್ದರು.
ಶಾಸಕರೇ ನೇತ್ರತಜ್ಞರಾಗಿ ಸೇವೆ: ಕೂಡ್ಲಿಗಿಯಲ್ಲಿ ನಡೆದ ಶಿಬಿರದಲ್ಲಿ ನೇತ್ರ, ಸ್ತ್ರೀರೋಗ ಸೇರಿ ಹಲವು ಕಾಯಿಲೆಗಳ ಕುರಿತು 1600ಕ್ಕೂ ಹೆಚ್ಚಿನ ಜನರು ಆರೋಗ್ಯ ತಪಾಸಣೆ ಮಾಡಲಾಯಿತು. ಶಾಸಕ ಹಾಗೂ ನೇತ್ರತಜ್ಞ ಡಾ.ಎನ್.ಟಿ.ಶ್ರೀನಿವಾಸ್ ಶಾಸಕ ಎಂಬ ಹಮ್ಮು ಬಿಮ್ಮು ಇಲ್ಲದೇ ಸ್ವತಃ ಕಣ್ಣಿನ ಪರೀಕ್ಷೆಗೆ ಮುಂದಾದರು. 13 ತಜ್ಞ ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯ ನಿರ್ವಹಿಸಿದರು. 250ಕ್ಕೂ ಹೆಚ್ಚಿನ ಜನರ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.ಕೂಡ್ಲಿಗಿ ಪಟ್ಟಣದ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿದರು.