ಮನೆಯ ಬಾಗಿಲು ಮೀಟಿ ಚಿನ್ನಾಭರಣ ಕಳವು

KannadaprabhaNewsNetwork | Published : Dec 3, 2024 12:34 AM

ಸಾರಾಂಶ

ಘಟನೆ ನಡೆದ ನಂತರ ಗ್ರಾಮಸ್ಥರು ಕೆ.ಆರ್. ನಗರ‌ ಪೊಲೀಸ್ ಠಾಣೆಗೆ ಕರೆ ಮಾಡಿದರೂ ಕೂಡ ಬೆಳಗ್ಗೆ 10 ಗಂಟೆಯವರೆಗೆ ಪೊಲೀಸರು ಸ್ಥಳಕ್ಕೆ ಬಂದಿಲ್ಲಾ ಜತೆಗೆ 122 ಸಹಾಯವಾಣಿಗೆ ಸಾಕಷ್ಟು ಬಾರಿ ಕರೆ ಮಾಡಿದರು ಯಾರೂ ಕರೆ ಸ್ವೀಕರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಮನೆಗೆ ನುಗ್ಗಿದ ನಾಲ್ಕು ಮಂದಿ ಕಳ್ಳರ ತಂಡ ಬೀರುವಿನ ಬಾಗಿಲು ಮುರಿದು ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ತಾಲೂಕಿನ‌ ಹೆಬ್ಬಾಳು ಹೋಬಳಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಬೆಳಗಿನ ಜಾವ 1.10ರ ಸುಮಾರಿನಲ್ಲಿ ಈ ಘಟನೆ ನಡೆದಿದ್ದು ಗ್ರಾಮದ ಚಂದ್ರಶೇಖರ್ ಎಂಬವರ ಮನೆ ಬಾಗಿಲನ್ನು ‌ಹಾರೆಯಿಂದ ಮೀಟಿ ಒಡೆದು ಹಾಕಿ ನಂತರ ಮನೆಗೆ ನುಗ್ಗಿ ಕಳ್ಳತನ ಮಾಡಲಾಗಿದೆ. ಮನೆಯ ಬೀರುವಿನ ಬಾಗಿಲನ್ನ ಒಡೆದು ಬೀರುವಿನಲ್ಲಿದ್ದ ಅಂದಾಜು 70 ಗ್ರಾಂ. ಚಿನ್ನ ಮತ್ತು 600 ಗ್ರಾಂ. ಬೆಳ್ಳಿ ಹಾಗು15 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಘಟನೆಯ ವೇಳೆ ಮನೆಯ ಮಾಲೀಕ ಚಂದ್ರ ಶೇಖರ್, ಅವರ ಮಗ ಮತ್ತು ಸೊಸೆ ಮನೆಯಲ್ಲಿದ್ದರು. ಕಳ್ಳತನ ಮಾಡುತ್ತಿರುವುದು ಗೊತ್ತಿದ್ದರೂ ಯಾವುದೇ ಪ್ರತಿರೋಧ ತೋರದೆ ಪಕ್ಕದ ರೂಮಿನಲ್ಲಿ ಅವಿತುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದಕ್ಕು ಮೊದಲು ಇದೇ ತಂಡ ಗ್ರಾಮದ ಮಲೆ ಮಹದೇಶ್ವರ ಬೆಟ್ಟದ ಠಾಣೆಯ ಇನ್‌ ಸ್ಪೆಕ್ಟರ್‌ ಜಗದೀಶ್, ರೈತ ಸಂಘದ ನಟರಾಜು, ಮಹದೇವ್ ಮತ್ತು ರಾಜೇಂದ್ರ ಅವರ ಮನೆಗಳ ಬೀಗ ಒಡೆದು ಮನೆಗೆ ನುಗ್ಗವ ಪ್ರಯತ್ನ ಮಾಡಿತ್ತು. ಆದರೆ ಮನೆಯವರ ಕಿರುಚಾಟದಿಂದ ಕಳ್ಳರು ಪರಾರಿಯಾಗಿದ್ದರು.

ಸ್ಥಳಕ್ಕೆ ಬಾರದ ಪೊಲೀಸರು: ಘಟನೆ ನಡೆದ ನಂತರ ಗ್ರಾಮಸ್ಥರು ಕೆ.ಆರ್. ನಗರ‌ ಪೊಲೀಸ್ ಠಾಣೆಗೆ ಕರೆ ಮಾಡಿದರೂ ಕೂಡ ಬೆಳಗ್ಗೆ 10 ಗಂಟೆಯವರೆಗೆ ಪೊಲೀಸರು ಸ್ಥಳಕ್ಕೆ ಬಂದಿಲ್ಲಾ ಜತೆಗೆ 122 ಸಹಾಯವಾಣಿಗೆ ಸಾಕಷ್ಟು ಬಾರಿ ಕರೆ ಮಾಡಿದರು ಯಾರೂ ಕರೆ ಸ್ವೀಕರಿಸದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಚ್ಚಿ ಬಿದ್ದ ಗ್ರಾಮಸ್ಥರು: ಮಾರಗೌಡನಹಳ್ಳಿ ಗ್ರಾಮದ ಇತಿಹಾಸದಲ್ಲಿಯೇ ಏಕಕಾಲದಲ್ಲಿ ನಾಲ್ಕು ಮನೆಗಳ ಬಾಗಿಲು ಒಡೆದು ಕಳ್ಳತನಕ್ಕೆ ವಿಫಲ ಯತ್ನ ಮತ್ತು ಇನ್ನೊಂದು ಮನೆಯೊಂದರಲ್ಲಿ ಕಳ್ಳತನವಾಗಿರುವ ಘಟನೆ ನಡೆದಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಘಟನೆ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this article