ಕನ್ನಡಪ್ರಭ ವಾರ್ತೆ ಬೀದರ್
ತಾಲೂಕಿನ ಮನ್ನಳ್ಳಿ ಗ್ರಾಮದ ಬಸ್ ನಿಲ್ದಾಣದಲ್ಲಿ ಆಕರ್ಷಕ ಪುಸ್ತಕ ಗೂಡು ಆರಂಭಿಸಲಾಗಿದೆ.ಈ ಪುಸ್ತಕಗೂಡಿರುವ ಬಸ್ ನಿಲ್ದಾಣಕ್ಕೆ ಕಣ್ಮನ ಸೆಳೆಯುವ ಬಗೆ-ಬಗೆಯ ಬಣ್ಣಗಳನ್ನು ಬಳಿಯಲಾಗಿದೆ. ಜೊತೆಗೆ ಓದುಗರನ್ನು ಸೆಳೆಯಲು ‘ಜಗತ್ತನ್ನು ಬೆಳಗಿಸಲು ಒಬ್ಬ ಸೂರ್ಯಬೇಕು, ಬದುಕನ್ನು ಬದಲಿಸಲು ಒಂದು ಪುಸ್ತಕ ಸಾಕು, ಮನುಷ್ಯನಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ ಹೀಗೆ ವಿವಿಧ ಉಲ್ಲೇಖಗಳನ್ನು ಬರೆಯಲಾಗಿರುವ ಈ ಪುಸ್ತಕ ಗೂಡಿನಲ್ಲಿ ಕಥೆ, ಕಾದಂಬರಿ, ಕವನ ಸೇರಿದಂತೆ ವಿವಿಧ ಬಗೆಯ ಪುಸ್ತಕ ಉಚಿತವಾಗಿ ಸಿಗಲಿವೆ. ಈ ಪುಸ್ತಕ ಗೂಡಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದ ತಾಪಂ ಕಾರ್ಯನಿರ್ವಹಕ ಅಧಿಕಾರಿ ಕಿರಣ ಪಾಟೀಲ್ , ಗ್ರಾಮೀಣ ಜನರಲ್ಲಿ ಅಕ್ಷರ ಪ್ರೀತಿ ಮೂಡಿಸುವ ನಿಟ್ಟಿನಲ್ಲಿ ಪುಸ್ತಕ ಗೂಡುಗಳನ್ನು ನಿರ್ಮಿಸಲಾಗುತ್ತಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯದಲ್ಲಿ ಈ ಪುಸ್ತಕ ಗೂಡಿಗೆ ಭೇಟಿ ನೀಡಿ ಪುಸ್ತಕಗಳನ್ನು ಓದಬಹುದು. ಅದೇ ರೀತಿ ಪ್ರಯಾಣಿಕರು ತಮ್ಮ ಪ್ರಯಾಣದ ಮಧ್ಯೆ ಪುಸ್ತಕಗಳಿಗೆ ಕಣ್ಣಾಯಿಸಬಹುದು ಎಂದು ಹೇಳಿದರು.ಮುಂದಿನ ದಿನಗಳಲ್ಲಿ ತಾಲೂಕು ಪಂಚಾಯತ್ ವತಿಯಿಂದ ಜನವಾಡ, ಆಣದೂರ, ಕಾಮಠಾಣ ಮತ್ತು ಚಾಂಬೊಳ್‌ನಲ್ಲಿ ಪುಸ್ತಕ ಗೂಡುಗಳನ್ನು ನಿರ್ಮಿಸಲಾಗುವುದು ಎಂದರು.ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕನಕರಾಯ ಮಾತನಾಡಿ, ಇತ್ತೀಚಿಗೆ ತಂತ್ರಜ್ಞಾನ ಹೆಚ್ಚಿನದಂತೆ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಈ ಹಿನ್ನೆಲೆ ಯಲ್ಲಿ ಪುಸ್ತಕ ಗೂಡು ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತರಲಾಗಿದೆ ಸಾರ್ವಜನಿಕರು, ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಇದರ ಲಾಭ ಪಡೆಯಬೇಕು ಎಂದರು.ಮನ್ನಳ್ಳಿ ಪಿಯುಸಿ ಕಾಲೇಜಿನ ವಿದ್ಯಾರ್ಥಿ ಗೀತಾ ಮಾತನಾಡಿ, ಈ ಪುಸ್ತಕ ಗೂಡಿನ ನಿರ್ಮಾಣದಿಂದ ನಮಗೆ ಸಾಕಷ್ಟು ಪುಸ್ತಕಗಳನ್ನು ಓದಲು ಅನುಕೂಲ ವಾಗಲಿದೆ. ಈ ಹಿಂದೆ ಪಠ್ಯಯನ್ನು ಹೊರತುಪಡಿಸಿ ಕಥೆ, ಕಾದಂಬರಿ ಸೇರಿದಂತೆ ಬೇರೆ ಬೇರೆ ಪುಸ್ತಕ ಓದಬೇಕು ಎನ್ನುವ ಬಯಕೆಯಿತ್ತು ಆದರೆ ಆರ್ಥಿಕ ತೊಂದರೆಯಿಂದ ಅದು ಸಾಧ್ಯವಾಗುತ್ತಿರಲಿಲ್ಲ ಆದರೆ ಪುಸ್ತಕ ಗೂಡಿನಿಂದ ಆ ಕನಸು ಈಡೇರಲಿದೆ ಎಂದರು.