ಹೊಸ ಲೇಖಕರು ಸಾಹಿತ್ಯ ಪರಂಪರೆ ಹಿನ್ನೆಲೆಯನ್ನು ಅರಿಯಿರಿ: ಲಕ್ಷ್ಮಣ್‌ರಾವ್‌

KannadaprabhaNewsNetwork | Published : Sep 15, 2024 1:51 AM

ಸಾರಾಂಶ

ಬರವಣಿಗೆ ಕ್ಷೇತ್ರಕ್ಕೆ ಬರುವವರು, ಈಗಷ್ಟೇ ಬಂದವರು ಸಾಹಿತ್ಯ ಪರಂಪರೆಯ ಹಿನ್ನೆಲೆಯನ್ನು ಅರಿಯಬೇಕು. ಹೊಸತನದ ಅನನ್ಯತೆ ಮೂಡಿಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬರವಣಿಗೆ ಕ್ಷೇತ್ರಕ್ಕೆ ಬರುವವರು, ಈಗಷ್ಟೇ ಬಂದವರು ಸಾಹಿತ್ಯ ಪರಂಪರೆಯ ಹಿನ್ನೆಲೆಯನ್ನು ಅರಿಯಬೇಕು. ಹೊಸತನದ ಅನನ್ಯತೆ ಮೂಡಿಸಿಕೊಳ್ಳಬೇಕು ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಶನಿವಾರ ಅನಂತ್ ಹರಿತ್ಸ ಅವರ ‘ಆನ ಬಂದಳು’'''' ಕಥಾ ಸಂಕಲನ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸಾಹಿತ್ಯವನ್ನು ಓದಿ, ಅಕಾಡೆಮಿಕ್ ಆಗಿ ಸಾಹಿತ್ಯ ಓದದಿದ್ದರೂ ಕೂಡ ಸಾಹಿತ್ಯ ಪರಂಪರೆಯ ಹಿನ್ನೆಲೆ ಅರಿವು ಮೂಡಿಸಿಕೊಳ್ಳಬೇಕು. ಆಗ ನಾವು ಬರವಣಿಗೆ, ಸಾಹಿತ್ಯ ಕ್ಷೇತ್ರದಲ್ಲಿ ಪ್ರಸ್ತುತ ಯಾವ ಹಂತದಲ್ಲಿದ್ದೇವೆ. ಏನನ್ನು ಬರೆಯಬೇಕು ಎಂಬುದರ ಅರಿವು ಇರುತ್ತದೆ. ಸಾಹಿತ್ಯ ಕ್ಷೇತ್ರ ಸೇರಿ ಯಾವುದೇ ಕ್ಷೇತ್ರದಲ್ಲಿ ಹೆಸರು ಮಾಡುವುದು ಸುಲಭವಲ್ಲ. ಹೊಸತನದ ಅನನ್ಯತೆಯನ್ನು ಮೂಡಿಸಿಕೊಳ್ಳಬೇಕು. ಹಾಗಾದಲ್ಲಿ ಸಾಹಿತ್ಯ ವಲಯ ನಿಮ್ಮನ್ನು ಬೇಗ ಒಪ್ಪಿಕೊಳ್ಳುತ್ತದೆ ಎಂದರು.

‘ಕನ್ನಡಪ್ರಭ’ ಪುರವಣಿ ಸಂಪಾದಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಮಾತನಾಡಿ, ಬರೆಯುವ ಹೊತ್ತಿನಲ್ಲಿ ಸುಳ್ಳು ಬರಲು ಸಾಧ್ಯವಿಲ್ಲ. ಬರೆಯುವಾಗ ಲೇಖಕನಲ್ಲಿ ಮೂಡುವ ಪ್ರಾಮಾಣಿಕತೆಯೇ ಸಾಹಿತ್ಯವನ್ನು ಬಹಳ ಉನ್ನತವಾಗಿರಿಸಿ ಎಲ್ಲರ ಮನಸ್ಸಿಗೆ ತಟ್ಟುತ್ತದೆ. ಲೇಖಕ ತಡವಾಗಿ ಬರೆದ ಎಂದರೆ ಎಲ್ಲರಿಂದ ಉಂಟಾದ ಪ್ರಭಾವ ಕಾರಣವಲ್ಲ, ತನ್ನನ್ನು ಆ ಕೃತಿಗೆ ಸಿದ್ಧಪಡಿಸಿಕೊಳ್ಳಲು ಸಮಯ ತೆಗೆದುಕೊಂಡಿದ್ದಾನೆ ಎಂದರ್ಥ ಎಂದರು.

‘ಹೊಸ ಕತೆಗಾರರಿಗೆ ಹಿರಿಯ ಲೇಖಕರ ನೆರಳು, ವಿಮರ್ಶಕರ ಮೆಚ್ಚುಗೆ ಹಾಗೂ ಕಥಾ ಸ್ಪರ್ಧೆಗಳ ಗೆಲುವಿನ ಪ್ರಶ್ನೆ, ಸಾಮಾಜಿಕವಾಗಿ ಒಪ್ಪಿಗೆ ಪಡೆಯುವುದು ಸವಾಲಾಗಿ ಕಾಡುತ್ತವೆ. ಆದರೆ, ಇವನ್ನೆಲ್ಲ ಮೀರಿ ಬರೆಯಲ್ಪಟ್ಟ ಕತೆಗಳು ತಾಜಾತನ ಹೊಂದಿರುತ್ತದೆ. ‘ಆನ ಬಂದಳು’ ಇದೆ ರೀತಿ ತಾಜಾತನ ಹೊಂದಿದೆ’ ಎಂದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತು ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಮಾತನಾಡಿ, ಹಿಂದೆ ಬರವಣಿಗೆಯಲ್ಲಿ ಪ್ರಕೃತಿಯ ಪ್ರಭಾವ ಇರುತ್ತಿತ್ತು. ಆದರೆ ಇಂದು ಪ್ರಕೃತಿ ಉಳಿದಿಲ್ಲ. ಹೀಗಾಗಿ ಸತ್ವಯುತ ಬರವಣಿಗೆಯೂ ಇಲ್ಲ. ಆದರೆ, ಇಂತಹ ಯಾವ ಬೆಂಬಲವೂ ಇಲ್ಲದೆ ಕಥಾ ಶಕ್ತಿ ಬೆಳೆಸಿಕೊಳ್ಳಬಹುದು ಎಂಬುದನ್ನು ಅನಂತ ಹರಿತ್ಸ ಕತೆಗಳು ಹೇಳುತ್ತಿವೆ ಎಂದರು.

ನಿರ್ದೇಶಕ ಟಿ.ಎಸ್. ನಾಗಾಭರಣ ಮಾತನಾಡಿ, ‘ನಾನು ಕಂಡಂತೆ ಆತ್ಮಕಥೆಗಳಲ್ಲಿ ಸತ್ಯಕಥೆಗಳಿಲ್ಲ. ವ್ಯಕ್ತಿ ಇದ್ದಾಗ ಅವರ ಬಗ್ಗೆ ಹೇಳುವುದು ಸುಲಭವಲ್ಲ. ಅವರು ಹೋದ ನಂತರ ಹೇಳುತ್ತಾರೆ. ಇದು ಸಾಂಸ್ಕೃತಿಕ ಲೋಕ ಕಂಡುಕೊಂಡ ಮಧ್ಯ ಮಾರ್ಗ. ಯಾವ ಚೌಕಟ್ಟಿನೊಳಗೂ ಇಳಿಯದೆ, ಮನಸ್ಸು ಹೇಳಿದಂತೆ ಕೇಳಿ ಎಂದರು.

ಕಥೆಗಾರ ಅನಂತ ಹರಿತ್ಸ ಮಾತನಾಡಿ, ಕತೆ ಹುಟ್ಟಿದ ಹಿನ್ನೆಲೆಯನ್ನು ಹೇಳಿದರು. ಬಳಿಕ ‘ಗಾನ ಸೌರಭ’ ಕಾರ್ಯಕ್ರಮ ನಡೆಯಿತು.

-----

ಫೋಟೋ

ಅನಂತ್ ಹರಿತ್ಸ ಅವರ ‘ಆನ ಬಂದಳು’ ಕಥಾ ಸಂಕಲನವನ್ನು ಗಣ್ಯರು ಲೋಕಾರ್ಪಣೆ ಮಾಡಿದರು.

Share this article