ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ಶಿಕ್ಷಕರ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಕೊಪ್ಪಳ
ಮಕ್ಕಳು ತಮ್ಮ ಪಾಲಕರಿಗಿಂತಲೂ ಶಿಕ್ಷಕರ ಮಾತನ್ನೇ ಹೆಚ್ಚು ಪಾಲಿಸುತ್ತಾರೆ. ಶಿಕ್ಷಕರ ನಡೆನುಡಿಯನ್ನೇ ಅನುಸರಿಸುತ್ತಾರೆ. ಹೀಗಾಗಿ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಪಾಲಕರಿಗಿಂತಲೂ ಶಿಕ್ಷಕರ ಹೊಣೆಗಾರಿಕೆಯೇ ದೊಡ್ಡದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.ನಗರದ ಮಧುಶ್ರೀ ಗಾರ್ಡನ್‌ನಲ್ಲಿ ಕೊಪ್ಪಳ ಖಾಸಗಿ ಶಾಲೆಗಳ ಒಕ್ಕೂಟದಿಂದ ಆಯೋಜಿಸಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ, ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಹಾಗೂ ಶಿಕ್ಷಕರ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಆದ್ದರಿಂದ ಶಿಕ್ಷಕರು ಅತ್ಯಂತ ಜವಾಬ್ದಾರಿಯಿಂದ ವರ್ತನೆ ಮಾಡಬೇಕು. ಶಾಲೆಯಲ್ಲಿರುವಾಗ ಸೇರಿದಂತೆ ಸಾರ್ವಜನಿಕವಾಗಿಯೂ ಅವರನ್ನು ಮಕ್ಕಳು ಅನುಸರಿಸುವುದರಿಂದ ಅವರ ನಡೆ, ನುಡಿಯಲ್ಲಿ ಅತ್ಯುತ್ತಮವಾಗಿರುವುದನ್ನೇ ಅಳವಡಿಸಿಕೊಳ್ಳಬೇಕು. ಇಂಥ ದೊಡ್ಡ ಜವಾಬ್ದಾರಿ ಹೊತ್ತಿರುವ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದರು.ಖಾಸಗಿ ಶಿಕ್ಷಣ ಸಂಸ್ಥೆಗಳು ದುಡ್ಡು ಮಾಡುತ್ತವೆ ಎಂಬ ಭಾವನೆ ಇದೆ. ಆದರೆ, ಇಲ್ಲಿ ಸಮಸ್ಯೆಗಳಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳೂ ಕಷ್ಟಕರ ವಾತಾವರಣದಲ್ಲಿ ನಡೆಯುತ್ತಿವೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರು ಹೆಚ್ಚು ಶ್ರಮಿಸುತ್ತಾರೆ. ಅವರ ನೀಡುವ ಸಂದೇಶ ಬಹುದೊಡ್ಡ ಪರಿಣಾಮ ಬೀರುತ್ತದೆ ಎಂದರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾವಟರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಿಇಒ ಶಂಕರಯ್ಯ ಟಿ.ಎಸ್., ಹಿರಿಯ ವಕೀಲ ಆರ್.ಬಿ. ಪಾನಘಂಟಿ, ಎಸ್‌ಎಫ್‌ಎಸ್ ಶಾಲೆಯ ಫಾ.ಜಬಮಲೈ ಮಾತನಾಡಿದರು.ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕಾಧ್ಯಕ್ಷ ಬಸವರಾಜ ತಳಕಲ್, ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳಾದ ಪ್ರಹ್ಲಾದ್ ಅಗಳಿ, ಗಿರೀಶ್ ಕಣವಿ, ಬಸವರಾಜ ಬಳ್ಳೊಳ್ಳಿ, ಕೃಷ್ಣ ಕಬ್ಬೇರ, ಆರ್.ಎಚ್. ಅತ್ತನೂರು, ಮಲ್ಲಿಕಾರ್ಜುನ, ಶಿವಕುಮಾರ್ ಕುಕನೂರು, ಹುಲುಗಪ್ಪ ಇತರರು ಇದ್ದರು.