ಸಂಡೂರು: ಜಗತ್ತಿನ ಬದಲಾವಣೆಯು ಪುಸ್ತಕದಿಂದ ಸಾಧ್ಯವಾಗಿದೆ. ಅಕ್ಷರದ ಅರಿವು ಬಿತ್ತುವ ಸಾಧನಗಳು ಪುಸ್ತಕಗಳಾಗಿವೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಯು.ಭೂಪತಿ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯು. ಭೂಪತಿ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ, ಪುಸ್ತಕಗಳು ವ್ಯಕ್ತಿತ್ವ ವಿಕಸನದ ಸಾಧನಗಳಾಗಿವೆ. ಶಾಲಾ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶವನ್ನು ನಮ್ಮ ಟ್ರಸ್ಟ್ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಚ್.ಬಿ. ಚಂದ್ರಪ್ಪ ಮಾತನಾಡಿ, ಪುಸ್ತಕಗಳು ಮನುಕುಲದ ಆಸ್ತಿಯಾಗಿದ್ದು, ಜ್ಞಾನವನ್ನು ಕೊಡುವ ದೀಪದಂತಿವೆ. ಇಂತಹ ಪುಸ್ತಕಗಳನ್ನು ನೀಡಿದ ಯು. ಭೂಪತಿ ಸ್ಮಾರಕ ಟ್ರಸ್ಟ್ನ ಕಾರ್ಯ ಅನುಕರಣೀಯವಾದದ್ದು ಎಂದರು.ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಸಂಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯು. ಭೂಪತಿ ಸ್ಮಾರಕ ಟ್ರಸ್ಟ್ ವತಿಯಿಂದ ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.