ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಪುಸ್ತಕ ಓದುವ ಅಭ್ಯಾಸ ವ್ಯಕ್ತಿಯ ಜ್ಞಾನವನ್ನು ವಿಸ್ತರಿಸುವುದಷ್ಟೇ ಅಲ್ಲದೆ, ವ್ಯಕ್ತಿಯ ಗೌರವ, ಘನತೆ ಹಾಗೂ ವ್ಯಕ್ತಿತ್ವವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಶಕ್ತಿ ಹೊಂದಿದೆ ಎಂದು ನಗರಸಭೆ ಉಪಾಧ್ಯಕ್ಷ ಬಂತಿ ವೆಂಕಟೇಶ್ ಹೇಳಿದರು.
ಎಂಎಸ್‌ವಿ ಶಾಲೆಯ ಸಂಸ್ಥಾಪಕ ಎ.ಸುಬ್ರಹ್ಮಣ್ಯ ಮಾತನಾಡಿ, ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಯಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಕ್ಕಳು ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತರಾಗದೆ ಸಾಹಿತ್ಯ, ವಿಜ್ಞಾನ, ಜೀವನಚರಿತ್ರೆ, ಇತಿಹಾಸ, ಸಂಸ್ಕೃತಿ ಸೇರಿ ವಿವಿಧ ವಿಷಯಗಳ ಪುಸ್ತಕಗಳನ್ನು ಓದಬೇಕು. ವೈವಿಧ್ಯಮಯ ಪುಸ್ತಕಗಳ ಅಧ್ಯಯನದಿಂದ ಅವರ ಜ್ಞಾನ ವಿಸ್ತಾರವಾಗುವುದರ ಜೊತೆಗೆ ಭಾಷಾ ಕೌಶಲ್ಯ, ಚಿಂತನಾ ಶಕ್ತಿ, ಸೃಜನಶೀಲತೆ ಹಾಗೂ ವ್ಯಕ್ತಿತ್ವ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಓದುವ ಅಭ್ಯಾಸ ಮಕ್ಕಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಮನೆಗೊಂದು ಗ್ರಂಥಾಲಯ ಎಂಬ ಪರಿಕಲ್ಪನೆ ಸಮಾಜದಲ್ಲಿ ಓದುವ ಸಂಸ್ಕೃತಿಗೆ ಹೊಸ ಚೈತನ್ಯ ನೀಡಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಗಂಗರಾಜ ಶಿರವಾರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತ ಸಮಿತಿ ಸದಸ್ಯರಾದ ಪ್ರಮಿಳಾ ಮಹಾದೇವ್, ರಬ್ಬನಹಳ್ಳಿ ಕೆಂಪಣ್ಣ, ಗೌಹರ್ ಜಾನ್, ಬಿ.ಆರ್. ಪ್ರದೀಪ್ ಕುಮಾರ್, ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ವಾಣಿಜ್ಯೋದ್ಯಮಿ ಎಂ.ಎಲ್. ಮಂಜುನಾಥ್, ರಾಷ್ಟ್ರೀಯ ಯೋಗಪಟು ಎಂ.ಎಲ್. ಆಶಾ, ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಎಂ.ನಾಗರಾಜ್, ನಾಗದಳ ನಟರಾಜ್ ಉಪಸ್ಥಿತರಿದ್ದರು.