ಗದಗ: ಪ್ರಸ್ತುತ ಜಾರಿಯಲ್ಲಿರುವ ಎಸ್ಎನ್ಎಫ್ ಮಾನದಂಡದ ಸೂತ್ರವನ್ನು ಬದಲಾಯಿಸಿದರೆ ಮಾತ್ರ ಗ್ರಾಮೀಣ ಭಾಗದ ಹಾಲು ಉತ್ಪಾದಕ ಸಹಕಾರ ಸಂಘಗಳು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯ ಸಹಕಾರ ಹಾಲು ಉತ್ಪಾದಕರ ಮಹಾಮಂಡಳದ ಕೆಎಂಎಫ್ ನಿರ್ದೇಶಕ ಎಚ್.ಜಿ. ಹಿರೇಗೌಡರ ಹೇಳಿದರು.
ನಗರದ ಹಳೆಯ ಬಸ್ ನಿಲ್ದಾಣದ ಎದುರಿಗಿರುವ ಪಶು ವೈದ್ಯಕೀಯ ಪಾಲಿಕ್ಲಿನಿಕ್ ಸಭಾಭವನದಲ್ಲಿ ಗುರುವಾರ, ಸಹಕಾರ ಇಲಾಖೆ, ಕೆಎಂಎಫ್, ಜಿಲ್ಲಾ ಸಹಕಾರ ಯುನಿಯನ್, ಪಶುಪಾಲನಾ ಇಲಾಖೆ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಆಶ್ರಯದಲ್ಲಿ ಗದಗ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗಾಗಿ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತವು ಹಾಲು ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಪ್ರಥಮ ಸ್ಥಾನದಲ್ಲಿದ್ದು, ನಿತ್ಯ 1.10 ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದರಲ್ಲಿ ಕರ್ನಾಟಕದ ಕೊಡುಗೆ ಪ್ರಮುಖವಾಗಿದೆ ಎಂದರು.ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ(ಆಡಳಿತ) ಡಾ. ಎಚ್. ಬಿ. ಹುಲುಗಣ್ಣವರ, ತಾಲೂಕು ಮುಖ್ಯ ಪಶುವೈದ್ಯಾದಿಕಾರಿ ಡಾ. ಎಚ್.ವೈ. ಹೊನ್ನಿನಾಯಕ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕ ಎಸ್.ಕೆ. ಕುರಡಗಿ ಮುಂತಾದವರು ಮಾತನಾಡಿದರು.
ಜಾನುವಾರು ರೋಗಗಳು ಹಾಗೂ ತಡೆಗಟ್ಟುವಿಕೆ ಕುರಿತು ಒಕ್ಕೂಟದ ವಿಶ್ರಾಂತ ವ್ಯವಸ್ಥಾಪಕ ನಿರ್ದೇಶಕ ಡಾ. ವೀರೇಶ ತರಲಿ, ಶುದ್ಧ ಹಾಗೂ ಅಧಿಕ ಹಾಲು ಉತ್ಪಾದನೆ ಕುರಿತು ಚಿಕ್ಕಹಂದಿಗೋಳದ ಪಶುವೈದ್ಯಾಧಿಕಾರಿ ಡಾ. ರವೀಂದ್ರಕುಮಾರ್ ನಾಯ್ಕರ, ಪಶು ಆಹಾರ ಮತ್ತು ಮೇವಿನ ಬೆಳೆಗಳ ಕುರಿತು ಕೆಎಚ್ಎಫ್ ತರಬೇತಿ ಕೇಂದ್ರದ ನಿವೃತ್ತ ಜಂಟಿ ನಿರ್ದೇಶಕ ಡಾ. ಎಂ. ಬಿ. ಮಡಿವಾಳರ ಉಪನ್ಯಾಸ ನೀಡಿದರು. ಒಕ್ಕೂಟದ ಸೌಲಭ್ಯಗಳ ಬಗ್ಗೆ ನರಗುಂದ ತಾಲೂಕು ವಿಸ್ತರಣಾಧಿಕಾರಿ ಡಿ.ಐ. ನದಾಫ್ ಮಾಹಿತಿ ನೀಡಿದರು.ಸಹಕಾರ ಅಭಿವೃದ್ಧಿ ಅಧಿಕಾರಿ ಬಿ. ಆರ್. ನಿಡಗುಂದಿ, ಡಾ. ಆರ್.ವೈ. ಗುರಿಕಾರ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟೇಲ, ಕಿರಣಕುಮಾರ ಹುಗ್ಗಿ ಉಪಸ್ಥಿತರಿದ್ದರು. ಲಕ್ಕುಂಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕಿ ಅನ್ನಪೂರ್ಣ ರಿತ್ತಿ ಪ್ರಾರ್ಥಿಸಿದರು. ಗದಗ ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ವಿಸ್ತರಣಾಧಿಕಾರಿ ದಿಲೀಪ್ ಐ. ನದಾಫ್ ವಂದಿಸಿದರು.