ಶಿವಕುಮಾರ ಕುಷ್ಟಗಿ
ಗದಗ: ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದರಿಂದ ಭೀಕರ ಬರಗಾಲದ ಛಾಯೆ ಆವರಿಸಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿರುವ ಒಟ್ಟು 32 ಕೆರೆಗಳಲ್ಲಿ ಒಂದೇ ಒಂದು ಕೆರೆಯೂ ಭರ್ತಿಯಾಗದೇ ಕೆರೆಯಲ್ಲಿ ಅಲ್ಲೊಂದಿಷ್ಟು, ಇಲ್ಲೊಂದಿಷ್ಟು ನೀರು ನಿಂತಿದೆ. ಕಳೆದ ಒಂದು ದಶಕದಲ್ಲೇ ಇಂತಹ ಆತಂಕಕಾರಿ ಪರಿಸ್ಥಿತಿ ಎದುರಾಗಿರಲಿಲ್ಲ.ಸಣ್ಣ ನೀರಾವರಿ ಕೆರೆಗಳ ಹಿನ್ನೀರನ್ನೇ ನಂಬಿಕೊಂಡು ಜಿಲ್ಲೆಯಲ್ಲಿ ಒಟ್ಟು 7741 ಹೆ. ಪ್ರದೇಶದಲ್ಲಿ ಬೆಳೆ ಬೆಳೆಯಲಾಗುತ್ತಿತ್ತು. ಆದರೆ, ಪ್ರಸ್ತುತ ಕೆರೆಗಳಲ್ಲಿ ನೀರಿನ ಹನಿಯೂ ಇಲ್ಲದಿರುವುದರಿಂದ ಈ ಬಾರಿ ಕೃಷಿಕರಿಗೆ ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ನೇರ ಮತ್ತು ತೀವ್ರ ಹಾನಿ ತೋಟಗಾರಿಕಾ ಬೆಳೆಗಳ ಮೇಲೆ ಉಂಟಾಗುತ್ತಿದ್ದು, ದಾಳಿಂಬೆ, ಪಪ್ಪಾಯಿ, ಮಾವು ಮತ್ತು ತರಕಾರಿ ಬೆಳೆದ ರೈತರು ಕೊಳವೆ ಬಾವಿಗಳಲ್ಲೂ ನೀರಿಲ್ಲದೆ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ.
ಜಿಲ್ಲೆಯ 7 ತಾಲೂಕುಗಳ ವ್ಯಾಪ್ತಿಯಲ್ಲಿ ಈ ಜಲಕ್ಷಾಮದ ಬಿಸಿ ತಟ್ಟಿದ್ದು, ಸಣ್ಣ ನೀರಾವರಿ ಇಲಾಖೆಯಡಿ ಮುಂಡರಗಿ ತಾಲೂಕಿನಲ್ಲಿ 11, ಗಜೇಂದ್ರಗಡ 8, ಶಿರಹಟ್ಟಿ 5, ಗದಗ 4, ಲಕ್ಷ್ಮೇಶ್ವರ 3 ಹಾಗೂ ರೋಣ ತಾಲೂಕಿನಲ್ಲಿ 1 ಕೆರೆ ಸೇರಿ ಒಟ್ಟು 32 ಕೆರೆಗಳಿವೆ. ನರಗುಂದ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯ ಯಾವುದೇ ಕೆರೆಗಳೇ ಇಲ್ಲದಿರುವುದು ಗಮನಾರ್ಹ.ನೀರಿನ ಸಂಗ್ರಹ: ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿನ ಎಲ್ಲ 32 ಕೆರೆಗಳು ಸೇರಿ ಪ್ರಸ್ತುತ ಲಭ್ಯವಿರುವ ಒಟ್ಟು ನೀರಿನ ಸಂಗ್ರಹ ಮಟ್ಟ ಕೇವಲ 1385 ಎಂಸಿಎಫ್ಟಿ (ಮಿಲಿಯನ್ ಕ್ಯುಬಿಕ್ ಫೀಟ್) ಮಾತ್ರವಿದೆ. ಜಿಲ್ಲೆಯಲ್ಲಿ ಶೇ. 90ಕ್ಕಿಂತ ಹೆಚ್ಚು, ಭರ್ತಿಯಾಗದೇ ಇರುವ ಕೆರೆಗಳೇ ಬರ ಸ್ಥಿತಿಯ ತೀವ್ರತೆಗೆ ಉತ್ತಮ ಸಾಕ್ಷಿಯಾಗಿದೆ.
ಒಟ್ಟು 32 ಕೆರೆಗಳ ಪೈಕಿ ಶೇ. 1ರಿಂದ 30ರಷ್ಟು ನೀರು ತುಂಬಿರುವ ಕೆರೆಗಳು 18, ಶೇ. 30ರಿಂದ 50ರಷ್ಟು ನೀರಿರುವ ಕೆರೆಗಳು 12 ಇದ್ದರೆ, ಶೇ. 50ರಿಂದ 90ರಷ್ಟು ನೀರು ಹೊಂದಿರುವ ಕೆರೆಗಳ ಸಂಖ್ಯೆ ಕೇವಲ 2. ಜುಲೈ ಅಂತ್ಯಕ್ಕೆ ಬಂದರೂ ಕೆರೆಗಳು ಭರ್ತಿಯಾಗದೇ ಇರುವುದು ಸಹಜವಾಗಿಯೇ ಎಲ್ಲರಲ್ಲಿಯೂ ಆತಂಕಕ್ಕೆ ಕಾರಣವಾಗಿದೆ.
ಅಂತರ್ಜಲ ಕುಸಿತ: ಕೆರೆಗಳು ಬಟಾ ಬಯಲಾದ ಪರಿಣಾಮ ಜಿಲ್ಲಾದ್ಯಂತ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಕೆರೆ ಅಚ್ಚುಕಟ್ಟು ಪ್ರದೇಶದ ಸಾವಿರಾರು ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗೆ ಸಾಕಾಗುತ್ತಿಲ್ಲ. ಕೇವಲ ಕೃಷಿಯಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಮೇವಿನ ತೀವ್ರ ಅಭಾವ ಸೃಷ್ಟಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಮಳೆಯ ಅಭಾವದಿಂದಾಗಿ ವಾಣಿಜ್ಯ ಬೆಳೆಗಳಾದ ಈರುಳ್ಳಿ, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ಸಂಪೂರ್ಣ ಒಣಗಿವೆ.
ಬರಪೀಡಿತ ಪ್ರದೇಶ: ಸರ್ಕಾರ ತಕ್ಷಣವೇ ಎಚ್ಚೆತ್ತು ಗದಗ ಜಿಲ್ಲೆಯನ್ನು ತೀವ್ರ ಬರಪೀಡಿತ ಪ್ರದೇಶವೆಂದು ಘೋಷಿಸಿ, ಕೃಷಿ ಮತ್ತು ತೋಟಗಾರಿಕಾ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹಾಗೂ ಪರ್ಯಾಯ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ವೈ.ಎನ್. ಗೌಡರ ತಿಳಿಸಿದರು.ಒಟ್ಟು ಕೆರೆಗಳು: 32ಪೂರ್ಣ ಭರ್ತಿಯಾದ ಕೆರೆಗಳು - 00
ಶೇ. 50-90 ನೀರಿರುವ ಕೆರೆಗಳು- 02ಶೇ. 30-50 ನೀರಿರುವ ಕೆರೆಗಳು - 12
ಶೇ. 1- 30 ನೀರಿರುವ ಕೆರೆಗಳು - 18