ದೊಡ್ಡಬಳ್ಳಾಪುರ: ಪುಸ್ತಕಗಳ ಓದಿನಿಂದ ನಮ್ಮ ಅರಿವು ವಿಸ್ತರಣೆ ಆಗುತ್ತದೆ. ಪುಸ್ತಕ ಪ್ರೀತಿ ಎಂದಿಗೂ ಸಂತಸವನ್ನು ನೀಡುವ ಹವ್ಯಾಸವಾಗಿದೆ ಎಂದು ಬೆಂಗಳೂರು ಉತ್ತರ ವಿವಿ ವಿಶ್ರಾಂತ ಕುಲಸಚಿವ ಡಾ.ಸುಂದರ್ ರಾಜ್ ಅರಸ್ ತಿಳಿಸಿದರು.
ಭಾರತದ ವೈವಿಧ್ಯತೆ ಮತ್ತು ಬಹುತ್ವವನ್ನು ಅರಿಯಲು ವಿದ್ಯಾರ್ಥಿಗಳಲ್ಲಿ ವಿಶೇಷ ಚಿಂತನೆ ಮೂಡಿಸುವ ವಿದ್ಯಾರ್ಥಿ ಜೀವನ ಬೇಕಾಗಿದೆ. ಇದಕ್ಕಾಗಿ ಉತ್ತಮ ಶಿಕ್ಷಕರ ಅಗತ್ಯವಿದೆ. ವಿದ್ಯಾರ್ಥಿಗಳು ಬದುಕನ್ನು ಕಾಣಲು ಕನಸು ಕಾಣಬೇಕಾಗಿದೆ. ಉತ್ತಮ ಸಾಧಕರಾಗಲು ಬಡತನ ವರವಾಗುತ್ತದೆ ಎಂದರು.
ಕನ್ನಡ ಭಾಷೆ ಸಾಹಿತಿಗಳು, ಶಿಕ್ಷಕರಿಗೆ ಸೀಮಿತವಲ್ಲ. ಭಾಷೆ ಬದುಕಾಗಬೇಕು. ಸರ್ಕಾರ ಮುನ್ನಡೆಸಬೇಕಾದ ವಿಶ್ವವಿದ್ಯಾಲಯಗಳು ಖಾಸಗೀಕರಣ ಆಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪುಸ್ತಕಗಳು ವಿದ್ಯಾರ್ಥಿಗಳ ಜೀವನ ಪ್ರೇರೇಪಿಸುವ, ಶಿಕ್ಷಣ ನೀಡುವ ಮತ್ತು ಪರಿವರ್ತಿಸುವ ಶಕ್ತಿಯಾಗಬೇಕಾಗಿದೆ ಎಂದರು.ನಿವೃತ್ತ ಉಪನ್ಯಾಸಕ ಡಾ.ಎ.ಓ.ಆವಲಮೂರ್ತಿ ಮಾತನಾಡಿ, ತಾಲೂಕಿನಲ್ಲಿ ಪ್ರತಿ ವರ್ಷ ಶಾಲಾ ಕಾಲೇಜುಗಳಲ್ಲಿ ನಡೆಯುವ ಸಾಹಿತ್ಯ, ವಿಜ್ಞಾನ ಮತ್ತು ಸಂಸ್ಕೃತಿ ಸಮಾಗಮ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನಕಾರಿ ಆಗುತ್ತಿದೆ. ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ'''''''' ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಕನ್ನಡ ಓದುವ ಹವ್ಯಾಸವನ್ನು ಉತ್ತೇಜಿಸುತ್ತದೆ. ಸ್ಪರ್ಧಾತ್ಮಕ ಮನೋಭಾವವನ್ನು ಹೆಚ್ಚಿಸುತ್ತದೆ ಎಂದರು.
ಜಿ.ಸುರೇಶ್, ಕೋದಂಡರಾಮ್, ಎಚ್.ಎನ್.ಪ್ರಕಾಶ್, ಬಿ.ಜಿ.ಅಮರನಾಥ್, ಕವಿತಾ, ರಮೇಶ್ ಪೂಜಾರಿ, ಸಿದ್ದರಾಜು, ಜಿ.ಸಿ.ಶಿವಕುಮಾರ್, ಸೂರ್ಯನಾರಾಯಣ್, ಗಿರೀಶ್, ಪ್ರವೀಣ್ , ಪುಸ್ತಕ ಪ್ರಯೋಜಕರುಗಳಾದ ಎ.ಸಿ.ಪಾಂಡು, ಎನ್.ಆನಂದಮೂರ್ತಿ, ಎಸ್.ಶ್ರೀಕಾಂತ್ ಮುಂತಾದವರು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಭವನದಲ್ಲಿ ಕನ್ನಡ ಪುಸ್ತಕ ಓದಿ ಬಹುಮಾನ ಗೆಲ್ಲಿ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.