ಕನ್ನಡಪ್ರಭ ವಾರ್ತೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕನ್ನಡಪರ ನಿರ್ಣಯ ಅಂಗೀಕಾರಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೌನ ವಹಿಸಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಈ ಕುರಿತು ಕನ್ನಡಪ್ರಭ ಶನಿವಾರದ ಸಂಚಿಕೆಯಲ್ಲಿ ಕನ್ನಡದ ಹೋರಾಟದಲ್ಲಿ ಕಸಾಪ ಮೌನವೇಕೆ? ಎಂಬ ಶೀರ್ಷಿಕೆಯಡಿ ಈ ಕುರಿತು ವಿಶೇಷ ವರದಿಯ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಅಧಿಕೃತ ನಿಲುವನ್ನು ಪ್ರಕಟಿಸಿದೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ಕನ್ನಡಪರ ನಿರ್ಣಯ ಅಂಗೀಕಾರಕ್ಕೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮೌನ ವಹಿಸಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಈ ಕುರಿತು ಕನ್ನಡಪ್ರಭ ಶನಿವಾರದ ಸಂಚಿಕೆಯಲ್ಲಿ ಕನ್ನಡದ ಹೋರಾಟದಲ್ಲಿ ಕಸಾಪ ಮೌನವೇಕೆ? ಎಂಬ ಶೀರ್ಷಿಕೆಯಡಿ ಈ ಕುರಿತು ವಿಶೇಷ ವರದಿಯ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತನ್ನ ಅಧಿಕೃತ ನಿಲುವನ್ನು ಪ್ರಕಟಿಸಿದೆ. ಗಡಿ ವಿಚಾರದಲ್ಲಿ ಕಸಾಪದ ಧೋರಣೆ ಸ್ಪಷ್ಟಗೊಂಡಿದೆ. ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಳಾ ಮೆಟಗುಡ್ಡ ಅವರು ಶನಿವಾರ ಪ್ರಕಟಣೆ ಹೊರಡಿಸಿ, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಎಲ್ಲ ಕನ್ನಡಿಗರ ಒಕ್ಕೊರಲ ಧ್ವನಿಯಾಗಿದೆ. ಗಡಿ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಸಲುವಾಗಿ ಮಹಾಜನ ವರದಿಯನ್ನು ಸರ್ಕಾರಗಳು ಒಪ್ಪಿಕೊಂಡಿರುವಾಗ ಮತ್ತೆ ಮತ್ತೆ ಗಡಿ ಸಮಸ್ಯೆಯನ್ನು ಪ್ರಚಾರಗೊಳಿಸುವುದು ಒಳ್ಳೆಯದಲ್ಲ. ಮಹಾಜನ ವರದಿಯ ಅನುಷ್ಠಾನ ಆಗಲೇಬೇಕು ಎನ್ನುವುದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಗ್ಗಟ್ಟಿನ ಧ್ವನಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಕಳೆದ ಕೆಲ ದಿನಗಳಿಂದ ಕನ್ನಡಪರ ಸಂಘಟನೆಗಳು ಮಹಾನಗರ ಪಾಲಿಕೆಯಲ್ಲಿ ಕನ್ನಡಪರ ನಿರ್ಣಯ ಅಂಗೀಕಾರಕ್ಕೆ ಒತ್ತಾಯಿಸುತ್ತಿದ್ದರೂ, ಜಿಲ್ಲಾ ಕಸಾಪ ಹಾಗೂ ಸಾಹಿತ್ಯ ವಲಯದಿಂದ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಚರ್ಚೆಗೆ ಕಾರಣವಾಗಿತ್ತು. ಕನ್ನಡದ ಅಸ್ತಿತ್ವದ ಪ್ರಶ್ನೆಯಲ್ಲಿ ಕಸಾಪ ಮೌನ ಏಕೆ? ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಹಾಗೂ ಕನ್ನಡಪರ ಹೋರಾಟಗಾರರು ಎತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಕಟವಾದ ಕನ್ನಡಪ್ರಭದ ವಿಶೇಷ ವರದಿಯು ಸಾಹಿತ್ಯ ವಲಯದ ಮೌನವನ್ನು ಪ್ರಶ್ನಿಸಿತ್ತು. ಇದರ ಬೆನ್ನಲ್ಲೇ ಕಸಾಪ ಅಧ್ಯಕ್ಷೆ ಮಂಗಾ ಮೆಟಗುಡ್ಡ ತಮ್ಮ ನಿಲುವನ್ನು ಬಹಿರಂಗಪಡಿಸಿರುವುದು ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ.
ಕಸಾಪ ಪ್ರಕಟಣೆಯಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ವಿಚಾರದಲ್ಲಿ ಜಿಲ್ಲಾ ಘಟಕದ ನಿಲುವು ಸ್ಪಷ್ಟಗೊಂಡಿದ್ದು, ಮಹಾಜನ ವರದಿ ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ. ಇದರಿಂದ ಗಡಿ ವಿಚಾರದಲ್ಲಿ ಕನ್ನಡಪರ ಸಂಘಟನೆಗಳು, ಸಾಹಿತ್ಯ ವಲಯ ಮತ್ತು ಜನಪ್ರತಿನಿಧಿಗಳು ಒಂದೇ ಧ್ವನಿಯಲ್ಲಿ ಮಾತನಾಡಬೇಕೆಂಬ ಅಭಿಪ್ರಾಯಕ್ಕೆ ಮತ್ತಷ್ಟು ಬಲ ದೊರೆತಿದೆ. ಆದರೆ, ಹೋರಾಟ ಆರಂಭವಾದ ಆರಂಭಿಕ ಹಂತದಲ್ಲೇ ಈ ರೀತಿಯ ಸ್ಪಷ್ಟ ನಿಲುವು ಹೊರಬಂದಿದ್ದರೆ ಇನ್ನಷ್ಟು ಪರಿಣಾಮಕಾರಿಯಾಗುತ್ತಿತ್ತು ಎಂಬ ಅಭಿಪ್ರಾಯವೂ ಕನ್ನಡಪರರ ವಲಯದಿಂದ ಕೇಳಿಬರುತ್ತಿದೆ. ಆದಾಗ್ಯೂ, ತಡವಾದರೂ ಕಸಾಪ ತನ್ನ ನಿಲುವು ಸ್ಪಷ್ಟಪಡಿಸಿರುವುದನ್ನು ಸ್ವಾಗತಿಸಿದ್ದಾರೆ. ಗಡಿ ಪ್ರಶ್ನೆ ರಾಜಕೀಯ ಚರ್ಚೆಯ ವಿಷಯವಾಗಿರಬಹುದು. ಆದರೆ ಬೆಳಗಾವಿಯ ಕನ್ನಡತನದ ವಿಚಾರದಲ್ಲಿ ಕನ್ನಡಿಗರ ಧ್ವನಿ ಒಂದೇ ಆಗಿರಬೇಕು. ಆ ಒಗ್ಗಟ್ಟಿನ ಧ್ವನಿಗೆ ಈಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತೂ ಅಧಿಕೃತವಾಗಿ ಸೇರ್ಪಡೆಯಾಗಿರುವುದು ಗಮನಾರ್ಹ ಬೆಳವಣಿಗೆ.ಕೋಟ್....ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದು ಎಲ್ಲ ಕನ್ನಡಿಗರ ಒಕ್ಕೊರಲ ಧ್ವನಿಯಾಗಿದೆ. ಮಹಾಜನ ವರದಿಯ ಅನುಷ್ಠಾನ ಆಗಲೇಬೇಕು ಎನ್ನುವುದು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಒಗ್ಗಟ್ಟಿನ ಧ್ವನಿಯಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.