ತೆಲಂಗಾಣದಲ್ಲೂ ಕೈಗೆ ಬಲ ನೀಡಿದ ಬೋಸರಾಜು: ಮಲ್ಲು ಭಟ್ಟಿ

KannadaprabhaNewsNetwork |  
Published : Jun 22, 2025, 01:18 AM IST
21ಕೆಪಿಆರ್‌ಸಿಆರ್ 06: | Kannada Prabha

ಸಾರಾಂಶ

ಎನ್‌.ಎಸ್‌.ಬೋಸರಾಜು ಅವರಿಂದಾಗಿ ತೆಲಂಗಾಣದಲ್ಲಿ ಕಾಂಗ್ರೆಸ್‌ ನ ಸಂಘಟನಾ ಶಕ್ತಿ ಹೆಚ್ಚಳವಾಗಿದ್ದು, ಇದರಿಂದಾಗಿ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಎನ್‌.ಎಸ್‌.ಬೋಸರಾಜು ಅವರಿಂದಾಗಿ ತೆಲಂಗಾಣದಲ್ಲಿ ಕಾಂಗ್ರೆಸ್‌ ನ ಸಂಘಟನಾ ಶಕ್ತಿ ಹೆಚ್ಚಳವಾಗಿದ್ದು, ಇದರಿಂದಾಗಿ ಅಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ತೆಲಂಗಾಣ ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ತಿಳಿಸಿದರು.

ಇಲ್ಲಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್‌.ಎಸ್‌.ಬೋಸರಾಜು ಅವರ 79ನೇ ಜನ್ಮದಿನೋತ್ಸವ, ಅಭಿನಂದನೆ ಹಾಗೂ ‘ಚೈತನ್ಯ ಸಾಗರ’ ಗ್ರಂಥ ಲೋಕಾರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಗಾಂಧಿವಾದಿಯಾಗಿರುವ ಬೋಸರಾಜು ಅವರ ರಾಜಕೀಯ ಚಿಂತನೆ, ನಿರಂತರ ಪರಿಶ್ರಮ, ಸಂಘಟನಾ ಚಾತುರ್ಯದಿಂದಾಗಿ ತೆಲಂಗಾಣ ಉಸ್ತುವಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ತೆಲಂಗಾಣ ಚುನಾವಣೆಯಲ್ಲಿ ಅವರು ನೀಡಿದ ಸಲಹೆ, ಸೂಚನೆ ಹಾಗೂ ಮಾರ್ಗದರ್ಶನದ ಫಲವಾಗಿಯೇ ಅಲ್ಲಿ ಕಾಂಗ್ರೆಸ್‌ ಆಡಳಿತಕ್ಕೆ ಬಂದಿತು ಎಂದು ಹೇಳಿದರು.

ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌ ಮಾತನಾಡಿ, ಸಮಾಜದ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸ, ಅಭಿಮಾನ ಗಳಿಸಿಕೊಂಡಿರುವ ಬೋಸರಾಜು ಅವರು ತಮ್ಮ ಬದುಕಿನಲ್ಲಿ ಸಾರ್ಥಕತೆಯನ್ನು ಮೆರೆದಿದ್ದಾರೆ. ಆರು ದಶಕಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿಯೇ ಇದ್ದುಕೊಂಡು ಶ್ರಮಿಸಿದ ಬೋಸರಾಜು ಅವರನ್ನು ಶಾಸಕರಲ್ಲದಿದ್ದರೂ ಸಚಿವರನ್ನಾಗಿ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷ ಅವರ ಮೇಲೆ ವಿಶ್ವಾಸ ತೋರಿದೆ. ಇಷ್ಟು ವರ್ಷಗಳ ಕಾಲ ಅವರು ಪಕ್ಷಕ್ಕೆ ನಿಷ್ಠಾವಂತರಾಗಿ ದುಡಿಯುವ ಮೂಲಕ ಪಕ್ಷ ವಹಿಸಿದ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದಾರೆ ಎಂದು ಶ್ಲಾಘಿಸಿದರು.

ವಿಧಾನಸಭೆ ಸ್ಪೀಕರ್‌ ಯು.ಟಿ.ಖಾದರ್‌, ತೆಲಂಗಾಣ ಪಶುಸಂಗೋಪನಾ ಸಚಿವ ವಾಕಿಟಿ ಶ್ರೀಹರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಪಾಲ್ಗೊಂಡಿದ್ದರು.

ಕೃಷ್ಣಾ ನದಿಗೆ ಇನ್ನೊಂದು ಜಲಾಶಯ ನಿರ್ಮಿಸಿ:

ಸಮಾರಂಭದಲ್ಲಿ ತೆಲಂಗಾಣ ಸರ್ಕಾರದ ಪಶುಸಂಗೋಪನಾ, ಮೀನುಗಾರಿಕೆ, ಕ್ರೀಡೆ ಯುವ ಜನಸೇವಾ ಸಚಿವ ವಾಕಿಟಿ ಶ್ರೀಹರಿ ಅವರು ಮಾತನಾಡಿ, ಕರ್ನಾಟಕ ಬೇರೆ ಅಲ್ಲ, ಹೈದರಾಬಾದ್‌ ಬೇರೆ ಅಲ್ಲ, ಕರ್ನಾಟಕ ಬೇರೆ ಅಲ್ಲ ಮಕ್ತಲ್‌, ಮೆಹಬೂಬ್‌ನಗರ ಬೇರೆಯಲ್ಲ, ಕರ್ನಾಟಕ ಹಾಗೂ ತೆಲಂಗಾಣವು ಹಿಂದಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದು, ಭವಿಷ್ಯದಲ್ಲಿಯೂ ಜೊತೆ ಜೊತೆಯಾಗಿಯೇ ಸಾಗುವ ವಿಶ್ವಾಸವಿದೆ ಎಂದರು.

ಕೃಷ್ಣಾ ನದಿಯು ಕರ್ನಾಟಕ ಹಾಗೂ ತೆಲಂಗಾಣ ರಾಜ್ಯವನ್ನು ಒಂದಾಗಿಸಿದೆ. ಜೂರಾಲಾ ಜಲಾಶಯದ ಜೊತೆಗೆ ಅದರೆ ಹಿಂದೆ ಮತ್ತೊಂದು ಹೊಸ ಜಲಾಶಯ ನಿರ್ಮಿಸಿದ್ದೇ ಆದಲ್ಲಿ ಕರ್ನಾಟಕ ಹಾಗೂ ತೆಲಂಗಾಣದ ನದಿಪಾತ್ರಕ್ಕೆ ಇನ್ನಷ್ಟು ನೀರಾವರಿ ಒದಗಿಸುವುದರ ಮುಖಾಂತರ ರೈತರಿಗೆ ಅನುಕೂಲವಾಗಲಿದ್ದು ಆ ಕೆಲಸವನ್ನು ಎನ್‌.ಎಸ್‌.ಬೋಸರಾಜು ಅವರು ಮಾಡಿಕೊಡಬೇಕು ಎಂದು ಮನವಿ ಮಾಡಿದರು.

PREV

Recommended Stories

ಸೆಂಚುರಿ ಕ್ಲಬ್‌ ಸೇರಿಯೇ ಬಿಟ್ಟಿತು ಸು ಫ್ರಂ ಸೋ
ಶ್ರೀಕೃಷ್ಣನೆಂಬ ನಿತ್ಯ ಸತ್ಯನಿಗೆ ಜನ್ಮಾಷ್ಟಮೀ