ಶಂಕರ ಭಟ್ ತಾರೀಮಕ್ಕಿ
ನಾವು ಜನರಿಗೆ ನೀಡುವ ಸಂದೇಶ ಇದೇ ಆಗಿದೆ. ನಾವು ಹೇಗೆ ಜನರಿಗೆ ಮಾರ್ಗದರ್ಶನ ಮಾಡುತ್ತೇವೆಯೋ ಅಂತೆಯೇ ನಾವೂ ನಡೆದುಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಹೊಸತನವಿರಬೇಕು. ಇದನ್ನು ನಾವೇ ಮಾಡದಿದ್ದರೆ ಹೇಗೆ? ಗುರುಶಿಷ್ಯ ಸಂಬಂಧವೆಂದರೆ ತಂದೆ-ಮಕ್ಕಳ ಸಂಬಂಧವಿದ್ದಂತೆ. ಮಗ ಬೇಗ ಕೈಗೆ ಬಂದರೆ ತಂದೆಗೆ ನಿರಾಳ. ನಾವು ಪೀಠಕ್ಕೆ ಬಂದು ೩೩ ವರ್ಷಗಳಾದವು. ಈ ದೃಷ್ಟಿಯಿಂದ ಇದನ್ನು ಬೇಗವೆಂದು ಅಂದುಕೊಳ್ಳಲಾಗದು. ಯೋಗ್ಯರು ಸಿಗುವುದು ಕಷ್ಟವಾಗಿರುವ ಸಂದರ್ಭದಲ್ಲಿ ದೊರಕಿರುವ ಯೋಗ್ಯರನ್ನು ಬಿಡಬಾರದು. ಜತೆಗೆ ದೇವರ ಅನುಗ್ರಹವೂ ಸಿಕ್ಕಿದೆ. ಆದ್ದರಿಂದಲೇ ಸೂಕ್ತವಾದ ಸಮಯದಲ್ಲಿಯೇ ಉತ್ತರಾಧಿಕಾರಿಯ ನಿಯೋಜನೆಗೆ ಮುಂದಾಗಿದ್ದೇವೆ. ತನ್ಮೂಲಕ ಕ್ರಮೇಣ ಸಾಧನೆಗಾಗಿ ನಾವು ಜಪ-ತಪದ ಕಡೆಗೆ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತದೆ. ನಮ್ಮದು ತಂದೆ-ಮಗನ ಸಂಬಂಧ. ಆದ್ದರಿಂದಲೇ ಬೇಗ ಮಗ ತಯಾರಾಗಲೆಂಬುದು ನಮ್ಮ ಅಪೇಕ್ಷೆ. ಶಿಷ್ಯ ಸ್ವೀಕಾರದ ಈ ಸಂದರ್ಭದಲ್ಲಿ ತಮ್ಮ ಸಂದೇಶವೇನು?ಜೀವನದಲ್ಲಿ ಧರ್ಮ ಪರಿಪಾಲನೆ ಬಹುಮುಖ್ಯ. ಇಂದು ಜನರಿಗೆ ಧರ್ಮದ ಮಹತ್ವದ ಕುರಿತು ಅರಿವು ಕ್ಷೀಣಿಸುತ್ತಿದೆ. ನಿತ್ಯ ಜೀವನದಲ್ಲಿ ಧರ್ಮಕ್ಕೆ ಯಾವ ಮಹತ್ವವನ್ನೂ ನೀಡುತ್ತಿಲ್ಲ. ಉಳಿದ ವಿಚಾರಗಳಾದ ಸಂಪಾದನೆ, ಸಾಮಾಜಿಕ ಕಾರ್ಯ ಸೇರಿದಂತೆ ವಿವಿಧ ವಿಷಯಗಳಲ್ಲಿ ತೊಡಗಲು ಅವಕಾಶವಿರುತ್ತದೆಯಾದರೂ ಧರ್ಮಾಚರಣೆಯಲ್ಲಿ ತೊಡಗಿಕೊಳ್ಳಲು ಜನರಿಗೆ ಸಮಯವೂ ಸಿಗುತ್ತಿಲ್ಲ, ಶ್ರದ್ಧೆಯೂ ಕಾಣುತ್ತಿಲ್ಲ. ಹಾಗಾಗಿ ನಾವು ಜೀವನದಲ್ಲಿ ಅನೇಕ ಕಷ್ಟ, ನಷ್ಟ, ಸಮಸ್ಯೆ ಎದುರಿಸುತ್ತೇವೆ. ಧರ್ಮಾಚರಣೆಯ ಮೂಲಕ ನಮ್ಮ ಜೀವನವನ್ನು ನಿರ್ವಹಿಸತೊಡಗಿದಾಗ ನೆಮ್ಮದಿಯ ಜೀವನ ಲಭಿಸುತ್ತದೆ. ತನ್ಮೂಲಕ ನಮ್ಮಲ್ಲಿ ಚೈತನ್ಯ ರೂಪದ ಶಕ್ತಿ ವೃದ್ಧಿಯಾಗುತ್ತದೆ. ಅದಕ್ಕಾಗಿ ಪ್ರತಿಯೊಬ್ಬರ ಜೀವನದಲ್ಲಿ ಸ್ವಲ್ಪ ಸಮಯವನ್ನಾದರೂ ಧರ್ಮಾಚರಣೆಗಾಗಿ ಮೀಸಲಿಡಬೇಕು. ಪ್ರಸ್ತುತ ನಮಗೆದುರಾಗುವ ಸಮಸ್ಯೆ ಎದುರಿಸುವ ಶಕ್ತಿ ಕಡಿಮೆಯಾಗುತ್ತಿದ್ದು, ಜನರು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ನಿತ್ಯವೂ ಧರ್ಮಾಚರಣೆ ಅತ್ಯಗತ್ಯ. ಇಂತಹ ಧರ್ಮಾಚರಣೆಯ ಪ್ರೇರಣೆಯಿಂದಲೇ ಧರ್ಮದ ದಾರಿಯಲ್ಲಿ ಪ್ರತಿಯೊಬ್ಬರೂ ಮುನ್ನಡೆಯಬೇಕು.
ವೇ.ಮೂ. ನಾಗರಾಜ ಭಟ್ಟ ಅವರ ಸಂದರ್ಶನಪ್ರಶ್ನೆ: ಲೌಕಿಕ ಪ್ರಪಂಚದ ಪ್ರಸ್ತುತ ಸಂದರ್ಭದಲ್ಲಿ ಯಾರಿಗೂ ಎಳೆವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸುವ ಯೋಚನೆ ಬರುವುದು ವಿರಳ. ಆದರೆ ತಾವು ಸನ್ಯಾಸತ್ವ ಆಯ್ಕೆ ಮಾಡಿಕೊಂಡಿದ್ದೀರಿ. ಸನ್ಯಾಸತ್ವದ ಕುರಿತು ನಿಮಗೆ ಹೇಗೆ ಆಸಕ್ತಿ ಮೂಡಿತು?ಉ: ಸತ್ಯವಾದ ಮಾತು. ಈಗಿನ ಯುವಕರಲ್ಲಿ ಸನ್ಯಾಸತ್ವದ ಬಗೆಗೆ ಆಸಕ್ತಿ ಕಡಿಮೆ. ಆದರೆ ಜೀವನದಲ್ಲಿ ವಿರಕ್ತಿ ಮೂಡಿದಾಗ ಸನ್ಯಾಸತ್ವದ ಬಗ್ಗೆ ಹೆಚ್ಚಿನ ಒಲವು ಸಹಜವಾಗಿ ಎಲ್ಲರಿಗೂ ಬಂದೇ ಬರುತ್ತದೆ. ನನಗೂ ವಿರಕ್ತಿ ಬಂತು. ಈ ಕಾರಣದಿಂದಲೇ ಸನ್ಯಾಸತ್ವದ ಒಲವು ಮೂಡಿತು.ಚಿಕ್ಕಂದಿನಿಂದಲೂ ತಮಗೆ ಸನ್ಯಾಸತ್ವದ ಬಗ್ಗೆ ಆಸಕ್ತಿ ಇತ್ತೇ?ಕಳೆದ ಆರು ವರ್ಷಗಳಿಂದ ನನಗೆ ತೀವ್ರವಾದ ವೈರಾಗ್ಯ ಪ್ರಾರಂಭಗೊಂಡಿತು. ಈಗ ೨ ವರ್ಷಗಳಿಂದೀಚೆ ಚಿಂತನೆ ಬಲಗೊಂಡು, ಆ ದಾರಿಯಲ್ಲಿ ಮುಂದೆ ಸಾಗಿದ್ದೇನೆ.ಅನುಷ್ಠಾನಕ್ಕೆ ಹೆಸರಾದ ಸ್ವರ್ಣವಲ್ಲೀ ಮಠ ಇಡೀ ರಾಷ್ಟ್ರದಲ್ಲೇ ಹೆಚ್ಚಿನ ಗೌರವಕ್ಕೆ ಪಾತ್ರವಾಗಿದೆ. ಇಂತಹ ಮಠಕ್ಕೆ ಯತಿಗಳಾಗಿ ಸನ್ಯಾಸ ದೀಕ್ಷೆ ಪಡೆದು ಬರುತ್ತಿರುವಿರಿ. ಈ ವಿಷಯದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?ಇಂತಹ ಪರಂಪರೆಯಲ್ಲಿ ಸನ್ಯಾಸತ್ವ ಸ್ವೀಕರಿಸುತ್ತಿರುವ ಕಾರಣ ಧನ್ಯತಾ ಭಾವನೆ ಮೂಡುತ್ತಿದೆ. ಶ್ರೀಗಳ ಆಶೀರ್ವಾದದಿಂದ ಸನ್ಯಾಸ ಸ್ವೀಕರಿಸಿ ದೇಶಾಂತರ ಸಾಗಬೇಕೆಂಬ ಚಿಂತನೆ ನನ್ನದಾಗಿತ್ತು. ಆದರೆ, ಭಗವಂತನ ಇಚ್ಛೆ, ಪೂಜ್ಯ ಶ್ರೀಗಳ ಅನುಗ್ರಹದಿಂದಾಗಿ ನಾನು ಶ್ರೀಮಠದ ಪೂಜ್ಯ ಉತ್ತರಾಧಿಕಾರಿಯಾಗುವ ಭಾಗ್ಯ ದೊರೆತಿರುವುದು ಪುಣ್ಯವೆಂದು ಭಾವಿಸಿದ್ದೇನೆ. ಭಗವಂತನಿಂದ ಅನುಗ್ರಹ ಪಡೆದು, ಶಂಕರ ಭಗವತ್ಪಾದರ ಪರಂಪರೆಯ ಪೀಠವೇರಲು ಅವಕಾಶ ದೊರಕಿರುವುದು ಅತ್ಯಂತ ಮಹತ್ವದ್ದಾಗಿದೆ. ಈ ಪರಂಪರೆಗೆ ಅದ್ಭುತ ಶಕ್ತಿ ಇದೆ. ಇಂತಹ ಪರಂಪರೆಯಲ್ಲಿ ನಾನು ಬಂದಿರುವುದಕ್ಕೆ ಧನ್ಯತಾ ಭಾವನೆಯೂ ಇದೆ.ಇಷ್ಟು ವರ್ಷ ಕುಟುಂಬಸ್ಥರೊಂದಿಗೆ ಸಮಯ ಕಳೆದು, ಕುಟುಂಬದ ಸದಸ್ಯರಾಗಿ ಜೀವನ ನಡೆಸಿ, ಅವರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗಿ ಈಗ ಸನ್ಯಾಸತ್ವ ಸ್ವೀಕರಿಸುತ್ತಿದ್ದೀರಿ. ಇದಕ್ಕೆ ಇಡೀ ಕುಟುಂಬ, ಮನೆಯನ್ನೇ ತೊರೆದು ಬರುವಂತಹ ಪರಿಸ್ಥಿತಿ ಬಂತು. ಇಂತಹ ಸಂದರ್ಭದಲ್ಲಿ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಭಾವನೆ ಹೇಗಿತ್ತು ?
ಇಲ್ಲ. ಮೊದಲು ಸನ್ಯಾಸಾಶ್ರಮ ಸ್ವೀಕರಿಸುವ ಯೋಚನೆ ಇತ್ತು. ಆದರೆ ಮಠದ ಯತಿಗಳಾಗಿ ನಿಯುಕ್ತಿಗೊಳ್ಳುವ ಯೋಚನೆ, ಕನಸು ಮನಸಿನಲ್ಲಿ ಇರಲಿಲ್ಲ. ಆದರೆ, ಪೂಜ್ಯ ಶ್ರೀಗಳ ಅನುಜ್ಞೆಯನ್ನು ಮೀರಲಾಗದೇ ಈ ಕುರಿತು ನಿರ್ಣಯಿಸಿದೆ.
ಈ ಕುರಿತಾಗಿ ಶ್ರೀಮಠದಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಧಾರ್ಮಿಕ ಮತ್ತು ಧರ್ಮಾಚರಣೆಯ ಕುರಿತಾಗಿ ಜನರಲ್ಲಿ ಆಗಾಗ ಧರ್ಮಕಾರ್ಯ ನಡೆಯುತ್ತಾ ಬಂದಿದೆ. ಶ್ರೀಗಳು ಭಗವದ್ಗೀತಾ ಅಭಿಯಾನವನ್ನು ಹಮ್ಮಿಕೊಂಡು ಬಂದಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಮಠದ ಯಾವುದೇ ಆಚರಣೆ, ಪದ್ಧತಿ, ವ್ಯವಸ್ಥೆ ಎಲ್ಲವನ್ನೂ ಪೂಜ್ಯರ ಮಾರ್ಗದರ್ಶನದಲ್ಲಿ ಇನ್ನಷ್ಟು ಉತ್ತಮವಾಗಿ ಮುಂದುವರಿಸಿಕೊಂಡು ಹೋಗುವ ಸತ್ಸಂಕಲ್ಪವಿದೆ.