ನವದೆಹಲಿ : ರಾಜ್ಯದಲ್ಲಿ ಅಧಿಕಾರ ಹಂಚಿಕೆ ಗೊಂದಲ ವಿಚಾರದಲ್ಲಿ ಹೈಕಮಾಂಡ್‌ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಹಾಗೂ ಅಹಿಂದ ಸಮಾವೇಶ ನಡೆಸಲು ಅವಕಾಶ ಕೊಡಬೇಕು ಎಂದು ಸಚಿವರಾದ ಕೆ.ಎಚ್ ಮುನಿಯಪ್ಪ ಹಾಗೂ ಎಚ್‌.ಸಿ.ಮಹದೇವಪ್ಪ ಕಾಂಗ್ರೆಸ್ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಉಪ ಚುನಾವಣೆ ಮುಗಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳು ಬಿರುಸುಗೊಂಡಿದ್ದು, ದೆಹಲಿಯಲ್ಲಿ ಮಂಗಳವಾರ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರನ್ನು ಭೇಟಿ ಮಾಡಿ, ಸಿಎಂ ಬದಲಾವಣೆ ಹಾಗೂ ಅಹಿಂದ ಸಮಾವೇಶ ನಡೆಸುವ ಕುರಿತು ಚರ್ಚೆ ನಡೆಸಿದರು.

ಅಧಿಕಾರ ಹಂಚಿಕೆ ಗೊಂದಲ ನಿವಾರಿಸುವ ನಿಟ್ಟಿನಲ್ಲಿ ಹೈಕಮಾಂಡ್ ‌ಮಧ್ಯಪ್ರವೇಶ ಮಾಡಬೇಕು, ಆದಷ್ಟು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ, ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿ ವರ್ಗದಲ್ಲಿ ಇದು ಗೊಂದಲಕ್ಕೆ ಕಾರಣವಾಗಲಿದೆ ಎಂದು ಮನವಿ ಮಾಡಿದರು. ಅಲ್ಲದೆ ಅಹಿಂದ ವರ್ಗ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದು, ಈ ನಿಟ್ಟಿನಲ್ಲಿ ಅಹಿಂದ ಸಮಾವೇಶ ನಡೆಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.


ಬಳಿಕ, ಮಧ್ಯಾಹ್ನ 12:30ಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌.ಮುನಿಯಪ್ಪ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿಯಾಗಿ, ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರದಲ್ಲಿ ಇನ್ನಷ್ಟು ತಡ ಮಾಡಬಾರದು. ಸಿಎಂ ಸ್ಥಾನದ ಗೊಂದಲವನ್ನು ತಕ್ಷಣ ಬಗೆಹರಿಸಿ ಎಂದು ವರಿಷ್ಠರಿಗೆ ಮನವಿ ಮಾಡಿದ್ದೇವೆ. ಹೈಕಮಾಂಡ್‌ ನಾಯಕರು ಏನಾದರೂ ಒಂದು ನಿರ್ಧಾರವನ್ನು ಸ್ಪಷ್ಟವಾಗಿ ತೆಗೆದುಕೊಳ್ಳಬೇಕು. ಬಹುತೇಕ ಈ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಬಂದ ಬಳಿಕ, ಮೇ ಅಂತ್ಯದ ವೇಳೆಗೆ ಹೈಕಮಾಂಡ್ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬಹುದು ಎಂದು ತಿಳಿಸಿದರು.

ಸಿದ್ದರಾಮಯ್ಯ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. 50 ಸಾವಿರ ಕೋಟಿ ವೆಚ್ಚದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಐದು ಕೋಟಿಯಷ್ಟು ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪುತ್ತಿವೆ. ಇಂತಹ ಸಮಯದಲ್ಲಿ ಈ ಹಂತದಲ್ಲಿ ಅಧಿಕಾರ ಹಂಚಿಕೆ ಕುರಿತ ಗೊಂದಲ ಸರಿಯಲ್ಲ ಎಂದು ಮನವಿ ಮಾಡಿದ್ದೇನೆ. ಒಂದು ವೇಳೆ, ಸಿದ್ದರಾಮಯ್ಯ-ಡಿಕೆಶಿಯವರಿಗೆ 2.5 ವರ್ಷದ ಮಾತು ಕೊಟ್ಟಿದ್ದರೆ, ಹೈಕಮಾಂಡ್‌ಗೆ ಅದು ಗೊತ್ತಿರುತ್ತದೆ ಎಂದರು.

ಅಹಿಂದ ಬೆಳ್ಳಿ ಸಂಭ್ರಮ ಮಾಡಿಯೇ

ಮಾಡುತ್ತೇವೆ: ಸಿದ್ದು ಬೆಂಬಲಿಗರು

ಈ ಮಧ್ಯೆ ದೆಹಲಿಯಲ್ಲಿ ವರಿಷ್ಠರ ಭೇಟಿ ವೇಳೆ ಸಿದ್ದು ಬಣದ ಆಪ್ತರು, ಅಹಿಂದ ಬೆಳ್ಳಿಯ ಸಂಭ್ರಮ ಸಮಾವೇಶ ನಡೆಸಲು ಅವಕಾಶ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಸುರ್ಜೇವಾಲ ಹಾಗೂ ಖರ್ಗೆ ಅವರನ್ನು ಭೇಟಿ ಮಾಡಿ, ಈ ಬಗ್ಗೆ ಮನವಿ ಮಾಡಿದ್ದರು. ಮಂಗಳವಾರ ಸುರ್ಜೇವಾಲ ಭೇಟಿ ವೇಳೆಯೂ ಎಚ್.ಸಿ.ಮಹದೇವಪ್ಪ ಅವರು ಅಹಿಂದ ಸಂಭ್ರಮಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಮಧ್ಯೆ, ಸಂಸದ ಸುನೀಲ್ ಬೋಸ್‌ ಅವರ ನಿವಾಸದಲ್ಲಿ ಸೋಮವಾರ ರಾತ್ರಿ ಭೋಜನ ಕೂಟ ಆಯೋಜಿಸಲಾಗಿತ್ತು. ಮಹದೇವಪ್ಪ, ಬಿ.ಕೆ.ಹರಿಪ್ರಸಾದ್, ಶಾಸಕರಾದ ಹಂಪನಗೌಡ ಬಾದರ್ಲಿ, ಎಂಎಲ್ಸಿ ಸಲೀಂ ಅಹಮದ್ ಮತ್ತಿತರ ನಾಯಕರು ಭೋಜನ ಕೂಟದಲ್ಲಿ ಭಾಗಿಯಾಗಿದ್ದರು. ಈ ವೇಳೆಯೂ ಅಹಿಂದ ಸಮಾವೇಶ ಕುರಿತು ಚರ್ಚೆ ನಡೆಯಿತು ಎಂದು ಮೂಲಗಳು ತಿಳಿಸಿವೆ.

ನಿನ್ನೆ ದಲ್ಲಿಯಲ್ಲಿ ಆಗಿದ್ದೇನು?

- ಉಪ ಚುನಾವಣೆ ಬೆನ್ನಲ್ಲೇ ಬಣ ರಾಜಕೀಯ ಬಿರುಸು

- ಸುರ್ಜೇವಾಲ ಭೇಟಿ ಮಾಡಿದ ಸಚಿವ ಮಹದೇವಪ್ಪ

- ಇದರ ಬೆನ್ನಲ್ಲೇ ಖರ್ಗೆ ಭೇಟಿಯಾದ ಸಚಿವ ಮುನಿಯಪ್ಪ

- ರಾಜ್ಯ ರಾಜಕೀಯ ವಿಚಾರ ಬಗ್ಗೆ ವರಿಷ್ಠರ ಜತೆ ಚರ್ಚೆ

- ಸಿಎಂ ಬದಲಾವಣೆ ಗೊಂದಲ ಬಗೆಹರಿಸಲು ಒತ್ತಾಯ

- ಅಹಿಂದ ಸಮಾವೇಶಕ್ಕೆ ಅನುಮತಿಗಾಗಿ ಮತ್ತೆ ಮನವಿ

- ದೆಹಲಿಯಲ್ಲಿ ಮುಂದುವರಿದ ಅಹಿಂದ ಪರ ಬ್ಯಾಟಿಂಗ್‌