ಚುನಾವಣೆ ಬೆನ್ನಲ್ಲೆ ಇಬ್ಬರು ಮುಖಂಡರು ಕಾಂಗ್ರೆಸ್‌ಗೆ ಸೇರ್ಪಡೆ

KannadaprabhaNewsNetwork |  
Published : Sep 28, 2025, 02:00 AM IST
27-ಎಚ್‌ವಿಆರ್ 5ಹಾವೇರಿ: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಟ್ಟೀಹಳ್ಳಿ ಪಪಂ ಪಕ್ಷೇತರ ಸದಸ್ಯರಾದ ಶಿವಕುಮಾರ ಉಪ್ಪಾರ ಹಾಗೂ ಲಲಿತಾ ಚನ್ನಗೌಡ್ರಗೆ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.  | Kannada Prabha

ಸಾರಾಂಶ

ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಪ್ರಥಮ ಅಧ್ಯಕ್ಷ, ಉಪಾಧ್ಯಾಕ್ಷರ ಸ್ಥಾನಕ್ಕೆ ಸೆ. 30ರಂದು ಚುನಾವಣೆ ನಡೆಯಲಿದ್ದು, ಇಬ್ಬರೂ ಪಕ್ಷೇತರರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಅಧಿಕೃತವಾಗಿ ಬೆಂಬಲ ಸೂಚಿಸಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಹೆಚ್ಚು ಬಲ ನೀಡಿದೆ  

ಹಾವೇರಿ: ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಪ್ರಥಮ ಅಧ್ಯಕ್ಷ, ಉಪಾಧ್ಯಾಕ್ಷರ ಸ್ಥಾನಕ್ಕೆ ಸೆ. 30ರಂದು ಚುನಾವಣೆ ನಡೆಯಲಿದ್ದು, ಇಬ್ಬರೂ ಪಕ್ಷೇತರರು ಕಾಂಗ್ರೆಸ್ ತತ್ವ, ಸಿದ್ಧಾಂತಗಳನ್ನು ಒಪ್ಪಿಕೊಂಡು ಅಧಿಕೃತವಾಗಿ ಬೆಂಬಲ ಸೂಚಿಸಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ಹೆಚ್ಚು ಬಲ ನೀಡಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ರಟ್ಟೀಹಳ್ಳಿ ಪಟ್ಟಣ ಪಂಚಾಯಿತಿ ಪಕ್ಷೇತರ ಸದಸ್ಯರಾದ 9ನೇ ವಾರ್ಡ್‌ನ ಶಿವಕುಮಾರ ಉಪ್ಪಾರ ಹಾಗೂ 15ನೇ ವಾರ್ಡ್‌ನ ಲಲಿತಾ ಚನ್ನಗೌಡ್ರ ಅವರಿಗೆ ಪಕ್ಷದ ಶಾಲು ಹೊದಿಸಿ, ಬಾವುಟ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು. ರಾಜ್ಯದಲ್ಲಿ ಕಳೆದ 2013-18ರ ಅವಧಿಯಲ್ಲಿ ಅಧಿಕಾರದಲ್ಲಿದ್ದ ಸಿದ್ದರಾಮಯ್ಯ ಅವರು ಜಿಲ್ಲೆಯ ಎಲ್ಲ ಶಾಸಕರ ಒಪ್ಪಿಗೆ ಮೇರೆಗೆ ರಟ್ಟಿಹಳ್ಳಿಯನ್ನು ಹೊಸ ತಾಲೂಕನ್ನಾಗಿ ಘೋಷಣೆ ಮಾಡಿದ್ದರು. 

ಈಚೆಗಷ್ಟೇ ಪಟ್ಟಣ ಪಂಚಾಯಿತಿಗೆ ಪ್ರಥಮ ಚುನಾವಣೆ ನಡೆದಿದ್ದು, ಶಾಸಕ ಯು.ಬಿ. ಬಣಕಾರ ಹಾಗೂ ಬಿ.ಎಚ್. ಬನ್ನಿಕೋಡ ಅವರು ಜೋಡೆತ್ತುಗಳಂತೆ ಹಗಲಿರುಳು ಶ್ರಮಿಸಿದ ಫಲವಾಗಿ 7 ಸ್ಥಾನಗಳು ಬಂದಿವೆ. ಇದಕ್ಕೆ ಮತ್ತಷ್ಟು ಇಂಬು ನೀಡುವಂತೆ ಪಕ್ಷೇತರ ಅಭ್ಯರ್ಥಿಗಳು ಕೂಡ ಬೇಷರತ್ ಆಗಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರಿಂದ ಎಲ್ಲರಿಗೂ ಪಕ್ಷದ ಪರವಾಗಿ ಕೃತಜ್ಞತೆ ತಿಳಿಸುತ್ತೇನೆ ಎಂದರು. 

ಕಾಂಗ್ರೆಸ್ ಸದಸ್ಯರು, ಪಕ್ಷೇತರ ಸದಸ್ಯರು ಎಂಬ ಭೇದಭಾವ ಮಾಡದೇ ಎಲ್ಲರೂ ಕಾಂಗ್ರೆಸ್‌ನ ಸದಸ್ಯರೆಂದು ತಿಳಿದು ರಟ್ಟೀಹಳ್ಳಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಎಲ್ಲರೂ ಪಕ್ಷದ ಚೌಕಟ್ಟಿನೊಳಗೆ ಏಳಿಗೆಗೆ ದುಡಿಯಬೇಕು. ಪಕ್ಷದ ಜತೆ ಜತೆಗೆ ನಿರಂತರವಾಗಿ ಮುನ್ನಡೆಯಬೇಕು ಎಂದರು. ಹಿರೇಕೆರೂರು ಶಾಸಕ ಯು.ಬಿ. ಬಣಕಾರ ಮಾತನಾಡಿ, ಇಬ್ಬರು ಪಕ್ಷೇತರರು ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತಿರುವುದು ಬಲ ತಂದುಕೊಟ್ಟಂತಾಗಿದೆ. ಚುನಾವಣೆ ಫಲಿತಾಂಶ ಬಳಿಕ ಸ್ಪಷ್ಟ ಬಹುಮತದ ಕೊರತೆ ಇತ್ತು. ಗೆದ್ದ ದಿನದಿಂದ ಶಂಕರಗೌಡ ಚನ್ನಗೌಡ್ರ ಅವರು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತಲೇ ಬಂದಿದ್ದಾರೆ.

 ಇಂದು ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದೇವೆ. ರಟ್ಟೀಹಳ್ಳಿ ಪಪಂ ಪ್ರಥಮ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಹಿಡಿಯುವ ನಿಟ್ಟಿನಲ್ಲಿ ಕಾಂಗ್ರೆಸ್ ಆಡಳಿತ ರಟ್ಟೀಹಳ್ಳಿಯನ್ನು ಅಭಿವೃದ್ಧಿ ದಿಕ್ಕಿನಲ್ಲಿ ಕೊಂಡೊಯ್ಯುತ್ತೇವೆ ಎಂದರು.ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಮಾತನಾಡಿ, ಸರ್ಕಾರವೂ ನಮ್ಮದೇ ಶಾಸಕರು ನಮ್ಮವರೇ ಇದ್ದಾರೆ.

 ಒಂಭತ್ತು ಜನ ಕಾಂಗ್ರೆಸ್ ಸದಸ್ಯರು ಆಗಿದ್ದಾರೆ. ಯಾರಿಗೂ ಅನ್ಯಾಯ ಆಗದಂತೆ ನ್ಯಾಯ ಕೊಡುವ ಕೆಲಸವನ್ನು ಪಕ್ಷ ಮಾಡುತ್ತದೆ. ಮನಸ್ಸು, ಮಾತು ಒಂದೇ ಇರಬೇಕು. ಮಾತಿಗೆ ತಕ್ಕಂತೆ ನಡೆಯಬೇಕು, ನಮ್ಮ ನಡೆ-ನುಡಿ ಒಂದಾಗಿದ್ದಾರೆ ಅಭಿವೃದ್ಧಿ ನಾಗಾಲೋಟ ಹೆಚ್ಚಾಗುತ್ತದೆ ಎಂದರು.ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಕೊಟ್ರೇಶಪ್ಪ ಬಸೇಗಣ್ಣಿ, ಡಾ.ಆರ್.ಎಂ. ಕುಬೇರಪ್ಪ, ರಮೇಶ ಮಡಿವಾಳರ, ಪಿ.ಡಿ.ಬಸನಗೌಡ್ರ, ಶಿವಕುಮಾರ ತಾವರಗಿ ಸೇರಿದಂತೆ ರಟ್ಟೀಹಳ್ಳಿ ಪಪಂನ ನೂತನ ಕಾಂಗ್ರೆಸ್ ಸದಸ್ಯರು ಇದ್ದರು.

PREV
Read more Articles on

Recommended Stories

ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥ ಸಂಚಲನ ಶಾಂತಿಯುತ
ವಲಸಿಗರಿಂದ ಗ್ರಾಮೀಣ ಭಾಗದ ಕಾರ್ಮಿಕರಿಗೂ ಸಂಕಷ್ಟ