ಶಿಗ್ಗಾಂವಿ: ಎಂಬತ್ತರ ದಶಕದಲ್ಲಿ ಹೆಚ್ಚು ಜನ ಮಲೇರಿಯಾ, ಡೆಂಘೀ ಜ್ವರ ಬಂದು ಸತ್ತ ಉದಾಹರಣೆಗಳಿವೆ. ಆದರೆ ಎಪ್ಪತ್ತರ ದಶಕದಲ್ಲಿ ಕ್ಷಯ ರೋಗ ಅತ್ಯಂತ ಹೆಚ್ಚಾಗಿತ್ತು. ಆಧುನಿಕ ಮಾಧ್ಯಮದಲ್ಲಿ ಕ್ಷಯ ರೋಗದ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ವರದಿಗಳು ಬಿತ್ತರವಾಗುತ್ತಿವೆ. ನಾವೆಲ್ಲ ಕ್ಷಯ ಮುಕ್ತ ಭಾರತ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ್ ಹೇಳಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆ ದಂಡೆ ಸಭಾಂಗಣದಲ್ಲಿ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾದ ಕ್ಷಯ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋಗ ಮುಕ್ತರಾಗಿರಬೇಕು ಎಂದರೆ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬೇಕು, ಪೌಷ್ಟಿಕ ಆಹಾರ ಸೇವನೆ ಮಾಡಬೇಕು, ಇದು ಬಚ್ಚಿಟ್ಟುಕೊಳ್ಳುವ ಕಾಯಿಲೆ ಅಲ್ಲ, ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಸ್ವಸ್ಥ ಸಮಾಜ ಕಟ್ಟುವ ಮುನ್ನ ಆರೋಗ್ಯವಂತ ಕುಟುಂಬ ಕಟ್ಟಬೇಕಾಗಿದೆ. ರೋಗ ಉಲ್ಬಣವಾಗದಂತೆ ತಡೆಗಟ್ಟಬೇಕು ಎಂದರು.ಕುಲಸಚಿವ ಪ್ರೊ.ಸಿ.ಟಿ. ಗುರುಪ್ರಸಾದ್ ಅವರು ಮಾತನಾಡಿ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಕ್ಷಯ ಮುಕ್ತ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿರುವುದು ತುಂಬಾ ಸ್ವಾಗತಾರ್ಹ. ಜಿಲ್ಲಾ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿ ವರ್ಗದವರಿಗೆ ಅಭಿನಂದನೆಗಳು. ಆರೋಗ್ಯ ಬಹಳ ಮುಖ್ಯ ಸಮುದಾಯದ ನಡುವೆ ಜಾಗೃತಿ ಮೂಡಿಸಬೇಕು, ಕ್ಷಯ ರೋಗ ಅನ್ನೋದು ಸೋಂಕು. ಅಂಟು ರೋಗ, ಆದ್ದರಿಂದ ಜಾಗೃತೆಯಿಂದ ನಡೆದುಕೊಳ್ಳಬೇಕು, ಜನರಲ್ಲಿ ತಿಳುವಳಿಕೆ ನೀಡಬೇಕು, ಅಂದಾಗ ಕ್ಷಯ ಮುಕ್ತ ಭಾರತ ನಿರ್ಮಾಣವಾಗುತ್ತದೆ ಎಂದರು.ವೈದ್ಯಾಧಿಕಾರಿ ಡಾ.ನಾಗೇಶ ಗುಂಗಿ ಅವರು ಮಾತನಾಡಿ, ಜನರಲ್ಲಿ ಹೆಚ್ಚು ಜಾಗೃತಿ ಆಗಬೇಕು, ಅಂದಾಗ ಕ್ಷಯ ತಡೆಗಟ್ಟಬಹುದು ಎಂದರು.ಹಿರಿಯ ಅರೋಗ್ಯ ಸಹಾಯಕರಾದ ನಿಂಗಪ್ಪ ಎನ್. ಹೆಚ್. ಅವರು ಮಾತನಾಡಿ, ಕ್ಷಯ ಅನ್ನುವುದೊಂದು ಸಾಂಕ್ರಾಮಿಕ ರೋಗ, ಇದು ಕೂದಲು ಮತ್ತು ಉಗುರನ್ನು ಹೊರತುಪಡಿಸಿ ದೇಹದ ಎಲ್ಲ ಭಾಗಗಳ ಮೇಲೆ ಬರುತ್ತದೆ, ಎಚ್ಚರಿಕೆ ಹಾಗೂ ಜಾಗೃತಿ ಅವಶ್ಯವಾಗಿದೆ ಎಂದರು.ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಪ್ರಭು ಕಟ್ಟಿ ಅವರು ಮಾತನಾಡಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗೆ ಮಾನಸಿಕವಾಗಿ ಆತ್ಮಸ್ಥೈರ್ಯ ತುಂಬಬೇಕು, ಸಾಮಾಜಿಕ ತಾರತಮ್ಯ ಮಾಡಬಾರದು ಎಂದರು.ಎನ್ನೆಸ್ಸೆಸ್ ಸಂಯೋಜನಾಧಿಕಾರಿ ಡಾ. ಗಿರೇಗೌಡ ಅರಳಿಹಳ್ಳಿ ಸ್ವಾಗತಿಸಿದರು, ಜನಪದ ಕಲಾವಿದ ಶರೀಫ ಮಾಕಪ್ಪನವರ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಅಭಿನಯ ಎಚ್. ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಬಂಡುಸುರೇಶ ಕೆಂಪವಾಡೇಕರ ವಂದಿಸಿದರು. ಈ ಸಂದರ್ಭದಲ್ಲಿ ಮೌಲ್ಯಮಾಪನ ಕುಲಸಚಿವ ಡಾ.ಶಿವಶಂಕರ್ ಕೆ. ಅವರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಪಾಲ್ಗೊಂಡಿದ್ದರು.