ತಿಪಟೂರು: ಪ್ರತಿಯೊಬ್ಬ ಮಕ್ಕಳಲ್ಲೂ ಒಂದೊಂದು ಪ್ರತಿಭೆ ಅಡಗಿದ್ದು, ಅದನ್ನು ಅನಾವರಣ ಮಾಡಲು ಇದು ಉತ್ತಮ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳು ಪಠ್ಯ ಪುಸ್ತಕದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ, ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದುಕೊಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಯ್ಯ ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೀಪಾ ಹೆಬ್ಬಳ್ಳಿ ಪ್ರಾಸ್ತಾವಿಕ ನುಡಿಗಳನ್ನಾಡಿ, ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಸಹಕಾರಿಯಾಗಿವೆ. ಇಂತಹ ಸ್ಪರ್ಧೆಗಳಲ್ಲಿ ಮಕ್ಕಳು ಭಾಗವಹಿಸಿ ಸದುಪಯೋಗಪಡಿಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಅನೇಕ ರೀತಿಯ ಪಠ್ಯೇತರ ಚುಟವಟಿಕೆಗಳು, ಸ್ಪರ್ಧೆಗಳನ್ನು ಆಯೋಜಿಸಲಾಗುವುದು. ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಆಶು ಭಾಷಣ ಸ್ಪರ್ಧೆಯಲ್ಲಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ಪ್ರೌಢಶಾಲಾ ವಿಭಾಗದಿಂದ ಭಾಗವಹಿಸಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಿಸಿ ವಿಜೇತರಾದ ಮಕ್ಕಳಿಗೆ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಸಿ.ಆರ್.ಪಿ ದಕ್ಷಿಣಮೂರ್ತಿ, ಶಿಶು ಅಭಿವೃದ್ಧಿ ಕಚೇರಿಯ ಎಸ್.ಕೆ.ಸುಷ್ಮ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು, ಮಕ್ಕಳು ಭಾಗವಹಿಸಿದ್ದರು.