ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ನಾಡಪ್ರಭು ಕೆಂಪೇಗೌಡರ 516ನೇ ಜಯಂತಿ ಅಂಗವಾಗಿ ತಾಲೂಕಿನ ಟಿ.ಎಂಹೊಸೂರು ಗೇಟ್ ಬಳಿ ವಿವಿಧ ಗ್ರಾಮಗಳ ನೂರಾರು ಗ್ರಾಮಸ್ಥರು ಒಗ್ಗೂಡಿ ಭರ್ಜರಿ ಬಾಡೂಟ ಸವಿಯುವ ಮೂಲಕ ಆಚರಿಸಿದರು.ತಾಲೂಕಿನ ಟಿ.ಎಂ.ಹೊಸೂರು, ಎಂ.ಶೆಟ್ಟಹಳ್ಳಿ, ಸಬ್ಬನಕುಪ್ಪೆ, ಗೌಡಹಳ್ಳಿ, ಕೆ.ಶೆಟ್ಟಹಳ್ಳಿ, ನೀಲನಕೊಪ್ಪಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಒಂದೆಡೆ ಸೇರಿ ಕೆಂಪೇಗೌಡ ಜಯಂತ್ಯುತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದರು.
ಮೈಸೂರು- ಬೆಂಗಳೂರು ಹೆದ್ದಾರಿಯ ಸರ್ವಿಸ್ ರಸ್ತೆ ಬದಿ ಕೆಂಪೇಗೌಡರ ಬೃಹತಗ ಫ್ಲೆಕ್ಸ್ ಅಳವಡಿಸಿ ಪುಷ್ಪಾರ್ಚನೆ, ಜೈಕಾರಗಳೊಂದಿಗೆ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದ ಸಮುದಾಯದ ಮುಖಂಡರು, ಆಗಮಿಸಿದ್ದ ಜನರಿಗೆ 1 ಕ್ವಿಂಟಾಲ್ ಚಿಕನ್, 1000 ಮೊಟ್ಟೆ ಹಾಗೂ ಗೀ ರೈಸ್ ನ ಮಾಂಸಹಾರ ಭೋಜನ ಬಡಿಸಿ ಕೆಂಪೇಗೌಡರ ಅಭಿವೃದ್ದಿ ಕಾರ್ಯಗಳನ್ನು ಸ್ಮರಿಸಿದರು.ಜಿಪಂ ಮಾಜಿ ಸದಸ್ಯ ಎಸ್.ಎಲ್.ಲಿಂಗರಾಜು ಮಾತನಾಡಿ, ಕೆಂಪೇಗೌಡರ ದೂತದೃಷ್ಟಿ ಯೋಜನೆಗಳು ಇಂದಿಗೂ ಜೀವಂತವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಾ ಜನಾಂಗಕ್ಕೂ ಅನುಕೂಲವಾಗುವಂತೆ ಒಂದೊಂದು ಪೇಟೆ (ಟೌನ್)ಗಳನ್ನು ನಿರ್ಮಿಸಿ ಸರ್ವ ಜನಾಂಗದವರ ಅಭಿವೃದ್ದಿಗೂ ಶ್ರಮಿಸಿದ ಮಹಾನ್ ವ್ಯಕ್ತಿಯೆಂದು ಬಣ್ಣಿಸಿದರು.
ಈ ವೇಳೆ ಶ್ರೀ ಮಹಾಕಾಳಿ ದೇವಾಲಯದ ಶ್ರೀ ಗುರುದೇವ್, ಎಂ.ಶೆಟ್ಟಹಳ್ಳಿ ಇಂದ್ರಕುಮಾರ್ ಸೇರಿದಂತೆ ಒಕ್ಕಲಿಗ ಸಮುದಾಯದ ನೂರಾರು ಮುಖಂಡರು ಉಪಸ್ಥಿತರಿದ್ದರು.ಚಿಕ್ಕಮರಳಿಯಲ್ಲಿ ಕೆಂಪೇಗೌಡರ ಜಯಂತಿ ಆಚರಣೆ
ಪಾಂಡವಪುರ: ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ವಿಜೃಂಭಣೆಯಿಂದ ನಡೆಯಿತು. ಗ್ರಾಮದ ಶ್ರೀಬೋರೇದೇವರು ದೇವಸ್ಥಾನದ ಬಳಿ ಗ್ರಾಮದ ಮುಖಂಡರು, ಯುವಕರು ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು. ನಂತರ ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಗ್ರಾಮಸ್ಥರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಈ ವೇಳೆ ಚಿಕ್ಕಮರಳಿ ಗ್ರಾಮದ ಮುಖಂಡರು, ಯುವಕರು, ಮಹಿಳೆಯರು ಭಾಗವಹಿಸಿದ್ದರು.