ಭಾರೀ ಮಳೆ: ಆಲಮಟ್ಟಿ ಡ್ಯಾಮ್‌ನ ಎಲ್ಲ 26 ಗೇಟ್ ಓಪನ್‌

KannadaprabhaNewsNetwork |  
Published : Jun 29, 2025, 01:33 AM ISTUpdated : Jun 29, 2025, 01:02 PM IST
28 ಆಲಮಟ್ಟಿ 2 | Kannada Prabha

ಸಾರಾಂಶ

ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಎಲ್ಲ 26 ಗೇಟ್ ಓಪನ್ ಮಾಡುವ ಮೂಲಕ 1.10 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿದು ಬಿಡಲಾಗುತ್ತಿದೆ.

 ಆಲಮಟ್ಟಿ :  ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಆಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಅಪಾರ ನೀರು ಹರಿದು ಬರುತ್ತಿದೆ. ಇದರಿಂದ ಜಲಾಶಯ ಶೇ.70ರಷ್ಟು ಭರ್ತಿಯಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಎಲ್ಲ 26 ಗೇಟ್ ಓಪನ್ ಮಾಡುವ ಮೂಲಕ 1.10 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿದು ಬಿಡಲಾಗುತ್ತಿದೆ.

ಜಲಾಶಯದ ಬಲ ಬದಿಯಲ್ಲಿರುವ ವಿದ್ಯುದಾಗಾರದ ಮೂಲಕ 45 ಸಾವಿರ ಕ್ಯುಸೆಕ್ ಹಾಗೂ ಜಲಾಶಯ ಸೇರಿ 1.10 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ.

ರಾಜ್ಯದ ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಈ ಪ್ರದೇಶದಲ್ಲಿ ಶನಿವಾರವೂ ಮಳೆ ಮುಂದುವರೆದಿದ್ದು, ಆಲಮಟ್ಟಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಆಲಮಟ್ಟಿ ಜಲಾಶಯದಿಂದ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.

ಗರಿಷ್ಠ 519.60 ಮೀ. ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹದ ಸಾಮರ್ಥ್ಯದ ಜಲಾಶಯದಲ್ಲಿ ಶನಿವಾರ ಸಂಜೆ 517.10 ಮೀ. ಎತ್ತರದಲ್ಲಿ 85.697 ಟಿಎಂಸಿ ನೀರು ಸಂಗ್ರಹವಾಗಿತ್ತು. ಒಳ ಹರಿವಿನ ಪ್ರಮಾಣ 1,14,327 ಕ್ಯುಸೆಕ್ ಇದ್ದು, 1.10 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿತ್ತು.

ಶನಿವಾರ ಬೆಳಗ್ಗೆ 90 ಸಾವಿರ ಕ್ಯುಸೆಕ್ ಒಳ ಹರಿವು ಇದ್ದಾಗ ಅಷ್ಟೇ ಪ್ರಮಾಣದ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗಿತ್ತು. ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದ್ದರಿಂದ ಹೊರ ಹರಿವಿನ ಪ್ರಮಾಣವನ್ನು 90 ಸಾವಿರ ಕ್ಯುಸೆಕ್‌ದಿಂದ 1.10 ಲಕ್ಷ ಕ್ಯುಸೆಕ್‌ಗೆ ಹೆಚ್ಚಿಸಲಾಗಿದೆ.

PREV
Read more Articles on

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು