ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆ ಬೇರೆಡೆಗೆ ಸ್ಥಳಾಂತರ: ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ

KannadaprabhaNewsNetwork |  
Published : Jun 29, 2025, 01:33 AM IST
28ಕೆಎಂಎನ್ ಡಿ19 | Kannada Prabha

ಸಾರಾಂಶ

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾರಸ್ವಾಮಿ ಅವರ ರಾಜಕೀಯ ದ್ವೇಷದಿಂದ ತಾಲೂಕಿನ ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ಚಿನಕುರಳಿ ಬಂದ್ ಮಾಡಿ ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಿಲ್ಲಾ ಉಸ್ತುವಾರಿ ಸಚಿವ ಚಲುವರಾರಸ್ವಾಮಿ ಅವರ ರಾಜಕೀಯ ದ್ವೇಷದಿಂದ ತಾಲೂಕಿನ ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಕಾರ್ಯಕರ್ತರು ಶನಿವಾರ ಚಿನಕುರಳಿ ಬಂದ್ ಮಾಡಿ ರಸ್ತೆ ಸಂಚಾರ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.

ಚಿನಕುರಳಿ ನಾರಾಯಣಪುರ ವೃತ್ತದಲ್ಲಿ ಚಿನಕುರಳಿ ಹೋಬಳಿ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಅರ್ಧ ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರ ತಡೆದರು. ಸಚಿವ ಚಲುವರಾಯಸ್ವಾಮಿ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ದ್ವೇಷದ ರಾಜಕಾರಣದಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಶಿಫಾರಸ್ಸಿನ ಮೇರೆಗೆ ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆ ಶಾಸಕರ ಸ್ವಗ್ರಾಮ ಕ್ಯಾತನಹಳ್ಳಿಗೆ ಸ್ಥಳಾಂತರಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಂಡವಪುರ ಯಾವ ರೀತಿಯಲ್ಲಿ ಜನ ಸಾಂದ್ರತೆ ಹೊಂದಿದೆ ಹಾಗೂ ವ್ಯಾಪಾರ ಹೊಂದಿದೆಯೋ ಅದೇ ರೀತಿ ವಹಿವಾಟುಗಳು ಚಿನಕುರಳಿ ಹೋಬಳಿ ಕೇಂದ್ರದಲ್ಲಿ ನಡೆಯುತ್ತಿದೆ. ಹೀಗಾಗಿ ಇಲ್ಲಿಗೆ ಪೊಲೀಸ್ ಠಾಣೆ ಅವಶ್ಯಕತೆ ಇದೆ. ಆದರೆ, ರಾಜಕೀಯ ದುರುದ್ದೇಶದಿಂದ ಠಾಣೆಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ ಎಂದು ಆರೋಪಿಸಿ ಗ್ರಾಮದ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿ ಪ್ರತಿಭಟಿಸಿದರು.

ಪಾಂಡವಪುರ ಮತ್ತು ಕೆ.ಆರ್.ಪೇಟೆ ಮುಖ್ಯ ರಸ್ತೆಯಲ್ಲಿರುವ ಚಿನಕುರಳಿ ಗ್ರಾಮ ಹೋಬಳಿ ಕೇಂದ್ರವಾಗಿದೆ. ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಂದ ಸದಾ ಜನ ಜಂಗುಳಿ ಇರುವ ಪ್ರದೇಶವಾಗಿದೆ. ಈ ಮಾರ್ಗವಾಗಿ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಜತೆಗೆ ಇತ್ತೀಚೆಗೆ ಅಪರಾಧ ಪ್ರಕರಣಗಳ ಸಂಖ್ಯೆ ಮತ್ತು ಕಳ್ಳತನಗಳು ಹೆಚ್ಚಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಇಲಾಖೆ ಅಧಿಕಾರಿಗಳು ಚಿನಕುರಳಿ ಹೋಬಳಿ ಕೇಂದ್ರಕ್ಕೆ ಪೊಲೀಸ್ ಠಾಣೆ ಅಗತ್ಯವಿದೆ ಎಂದು ಗೃಹ ಇಲಾಖೆಗೆ ವರದಿ ನೀಡಿದ್ದ ಪರಿಣಾಮ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಶಿಫಾರಸ್ಸಿನ ಪತ್ರದ ಮೇರೆಗೆ ಗ್ರಾಮಕ್ಕೆ ಪೊಲೀಸ್ ಠಾಣೆ ಮಂಜೂರಾಗಿತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರು ರಾಜಕೀಯ ದ್ವೇಷದ ಕಾರಣಕ್ಕೆ ಪೊಲೀಸ್ ಠಾಣೆಯನ್ನು ಸ್ಥಳಾಂತರಿಸಲಾಗಿದೆ ಎಂದು ಕಿಡಿಕಾರಿದರು.

ರಸ್ತೆ ಗುಂಡಿ ಮುಚ್ಚಿ ಪ್ರಾಣ ಉಳಿಸಿ:

ತಾಲೂಕಿನ ರೈಲ್ವೆ ನಿಲ್ದಾಣದಿಂದ ಕೆ.ಆರ್.ಪೇಟೆ ಮಾರ್ಗವಾಗಿ ಚನ್ನರಾಯಪಟ್ಟಣ, ಶಿವಮೊಗ್ಗ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ ಸಂಪೂರ್ಣ ಹಾಳಾಗಿದೆ. ಈ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಮೊಣಕಾಲುದ್ದ ಗುಂಡಿ ಬಿದ್ದಿರುವ ರಸ್ತೆಗಳಿಂದಾಗಿ ಪ್ರತಿಬಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸಿ ಬೈಕ್ ಸವಾರರು ಪ್ರಾಣ ಕಳೆದುಕೊಳ್ಳುವ ಜತೆಗೆ ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ತಕ್ಷಣ ರಸ್ತೆ ಗುಂಡಿ ಮುಚ್ಚಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಮಾತನಾಡಿ, ಚಿನಕುರಳಿಗೆ ಮಂಜೂರಾಗಿದ್ದ ಪೊಲೀಸ್ ಠಾಣೆಯನ್ನು ಕ್ಯಾತನಹಳ್ಳಿಗೆ ಸ್ಥಳಾಂತರಿಸಿದ್ದು, ಈ ವಿಚಾರದಲ್ಲಿ ರಾಜಕೀಯ ಬೆರೆಸಲಾಗಿದೆ. ಅಲ್ಲಿಗೂ ಪೊಲೀಸ್ ಠಾಣೆ ಮಂಜೂರು ಮಾಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಚಿನಕುರಳಿಗೆ ಮಂಜೂರಾಗಿರುವ ಠಾಣೆಯನ್ನು ಸ್ಥಳಾಂತರಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೆ ಎಲ್ಲವನ್ನು ಸಮಾನತೆಯಿಂದ ಕಂಡರು. ಆದರೆ ಈಗಿನ ಶಾಸಕರ ಜವಾಬ್ದಾರಿ ಹೊತ್ತು ಸಮಾನವಾಗಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಇಂದು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದು, ನಮ್ಮ ಬೇಡಿಕೆಗಳು ಈಡೇರಿದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಮನ್ನುಲ್ ನಿರ್ದೇಶಕ ಸಿ.ಶಿವಕುಮಾರ್, ಜೆಡಿಎಸ್ ಮುಖಂಡರಾದ ಗೋಪಾಲೇಗೌಡ, ಸಿ.ಎ.ಲೋಕೇಶ್, ಮೈಕ್ ಮಹದೇವು, ಗ್ರಾಪಂ ಅಧ್ಯಕ್ಷ ಧನಲಕ್ಷ್ಮೀ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ