ಬಹಿಷ್ಕಾರ: ಕುಟುಂಬಕ್ಕೆ ಧೈರ್ಯ ತುಂಬಿದ ನಾರಾಯಣಸ್ವಾಮಿ

KannadaprabhaNewsNetwork | Published : Sep 18, 2024 1:45 AM

ಸಾರಾಂಶ

Boycott: Narayanaswamy gave courage to the family

- ಸಂತ್ರಸ್ತೆ ಬಾಲಕಿ, ದಲಿತ ಕುಟುಂಬಗಳ ಭೇಟಿಯಾದ ಛಲವಾದಿ ನಾರಾಯಣಸ್ವಾಮಿ

----

ಕನ್ನಡಪ್ರಭ ವಾರ್ತೆ ಹುಣಸಗಿ

ಅತ್ಯಾಚಾರ ಬಗ್ಗೆ ದೂರಿದ್ದಕ್ಕೆ ದಲಿತರಿಗೆ ಸಾಮಾಜಿಕ ಬಹಿಷ್ಕಾರ ಪ್ರಕರಣದ ಭೀತಿ ಎದುರಿಸುತ್ತಿದ್ದ ಗ್ರಾಮಕ್ಕೆ ಮಂಗಳವಾರ ವಿಧಾನ ಪರಿಷತ್ತು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭೇಟಿ ನೀಡಿ, ಸಂತ್ರಸ್ತೆ ಬಾಲಕಿಗೆ ಸಾಂತ್ವನ ಹಾಗೂ ಬಹಿಷ್ಕಾರದ ಭೀತಿಯಲ್ಲಿದ್ದ ದಲಿತ ಕುಟುಂಬಗಳ ಭೇಟಿಯಾಗಿ ಧೈರ್ಯ ತುಂಬಿದರು.

ಇಲ್ಲಿ ನಡೆದಿರುವ ಪ್ರಕರಣ ಮಾನವಕುಲ ತಲೆತಗ್ಗಿಸುವಂತೆ ಮಾಡಿದೆ. ಶ್ರಮದಿಂದ ಜೀವನ ಸಾಗಿಸುವವರ ಮೇಲೆ ದಬ್ಬಾಳಿಕೆ ಸರಿಯಲ್ಲ, ಎಲ್ಲರೂ ಮಾನವೀಯತೆಯಿಂದ ಬದುಕಬೇಕು ಎಂದು ಹೇಳಿದರು. ಸಂತ್ರಸ್ತೆಗೆ ಬರಬೇಕಾದ ಪರಿಹಾರದ ಕುರಿತು ಸ್ಥಳದಲ್ಲಿದ್ದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಜೊತೆ ಮಾತನಾಡಿ, 8.50 ಲಕ್ಷ ರು. ಒಟ್ಟು ಪರಿಹಾರವನ್ನು ಯುವತಿಗೆ ನೀಡಬೇಕು, ಭೂ ಒಡೆತನ ಯೋಜನೆಯಲ್ಲಿ ಬಹಿಷ್ಕಾರಕ್ಕೆ ಒಳಗಾಗಿರುವ ಎಲ್ಲ ಕುಟುಂಬಕ್ಕೂ ಭೂಮಿ ಮಂಜೂರು ಮಾಡಬೇಕು ಎಂದು ಶಿಫಾರಸ್ಸು ಮಾಡಿ ಎಂದು ಸೂಚಿಸಿದರು.

ಅತ್ಯಾಚಾರದಿಂದಾಗಿ ಐದು ತಿಂಗಳ ಗರ್ಭಿಣಿಯಾಗಿರುವ ಬಾಲಕಿಯು ಮಾನಸಿಕವಾಗಿ ಹಿಂಸೆ ಪಡುತ್ತಿರುವುದರಿಂದ ಅದು ಕಠಿಣ ಕ್ರಮಕ್ಕೆ ತಿರುಗಬಹುದು, ಅದಕ್ಕಾಗಿ ಆಸ್ಪತ್ರೆಗೆ ದಾಖಲಿಸಬೇಕು ಎಂಬುದಾಗಿ ಆರೋಗ್ಯ ಅಧಿಕಾರಿಗಳು ತಿಳಿಸುತ್ತಲೇ, ಸಂತ್ರಸ್ತೆ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದರು.

ಮಾಜಿ ಸಚಿವ ನರಸಿಂಹ ನಾಯಕ (ರಾಜೂಗೌಡ) ಮಾತನಾಡಿ, ಗ್ರಾಮದಲ್ಲಿ ಈ ತರಹದ ಘಟನೆ ನಡೆಯಬಾರದಾಗಿತ್ತು. ಅದಕ್ಕೆ ಕಾನೂನಿನ ಶಿಕ್ಷೆಯಾಗಬೇಕು. ಪೋಕ್ಸೋ ಪ್ರಕರಣದಲ್ಲಿರುವ ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು. ತಾಯಿ ಹಾಗೂ ಮಗುವಿನ ರಕ್ಷಣೆ ಕೊಡುವ ಕೆಲಸ ಮಾಡಬೇಕಾಗಿದೆ. ಗ್ರಾಮದ ಪ್ರಮುಖರು ಹಾಗೂ ದಲಿತರೊಂದಿಗೆ ಸೂಕ್ತ ಸಭೆ ನಡೆಸುತ್ತೇನೆ. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವುದು ಉದ್ದೇಶವಾಗಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ಬಿಜೆಪಿ ಮುಖಂಡರಾದ ದೇವಿಂದ್ರನಾಥ, ವಿರೇಶ ಚಿಂಚೋಳಿ, ಮೇಲಪ್ಪ ಗುಳಗಿ, ದಲಿತ ಮುಖಂಡರಾದ ನಂದಕುಮಾರ ಬಾಂಬೆಕರ್, ಅಮಲಪ್ಪ ಹಳ್ಳಿ, ಪವಾಡೆಪ್ಪ ಮ್ಯಾಗೇರಿ, ನಂದಪ್ಬಪ ಪೀರಾಪೂರ, ಬಸವರಾಜ ದೊಡ್ಡಮನಿ, ಬಸವರಾಜ ಹರಗಟಗಿ, ದೇವರಾಜ ಹೊರಟ್ಕಾಟಿ, ಶ್ರೀನಾಥ ಹಾದಿಮನಿ, ಬಸವರಾಜ ಕಟ್ಟಿಮನಿ, ಸಂತೋಷ ಸೊನ್ನಪೂರ ಇದ್ದರು.

----

ಕೋಟ್‌-1 : ಈ ಸರ್ಕಾರದಲ್ಲಿ ದಲಿತರ ಮೇಲೆ ದೌರ್ಜನ್ಯ ಪ್ರಕರಣಗಳು ನಡೆಯುತ್ತಿವೆ. ಬೀದರ್ ಜಿಲ್ಲೆಯಲ್ಲಿ ಅತ್ಯಾಚಾರ ಮಾಡಿ ಹೆಣ್ಣು ಮಕ್ಕಳನ್ನು ಬೀದಿಯಲ್ಲಿ ಎಸೆಯುವಂತಹ ಘಟನೆ ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸಂಪೂರ್ಣ ಸತ್ತಿದೆ, ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೊರತು, ಅಭಿವೃದ್ಧಿ, ಜನರ ಸಮಸ್ಯೆಗೆ ಸ್ಪಂದಿಸುವ, ನ್ಯಾಯವನ್ನು ಎತ್ತಿ ಹಿಡಿಯುವ ಕೆಲಸ ಬದಿಗೆ ಸರಿಸಿದೆ ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು. ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ.

------

17ವೈಡಿಆರ್5: ಹುಣಸಗಿ ತಾಲೂಕಿನ ಸಂತ್ರಸ್ತೆ ಮನೆಗೆ ರಾಜ್ಯ ಪರಿಷತ್ತು ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಚಲುವಾದಿ ನಾರಾಯಣಸ್ವಾಮಿ ಮತ್ತು ಮಾಜಿ ಸಚಿವ ರಾಜೂಗೌಡ ಸೇರಿದಂತೆ ದಲಿತ ಮುಖಂಡರು ಭೇಟಿ ನೀಡಿದರು.

------

Share this article